ADVERTISEMENT

ಗ್ರಾಮೀಣ ಭಾಗದಲ್ಲಿ ನೈರ್ಮಲ್ಯ, ಆರೋಗ್ಯ ಜಾಗೃತಿ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2011, 8:40 IST
Last Updated 23 ಸೆಪ್ಟೆಂಬರ್ 2011, 8:40 IST

ಚಿಕ್ಕಮಗಳೂರು: ಗ್ರಾಮೀಣ ಭಾಗದಲ್ಲಿ ಜನರಿಗೆ ನೈರ್ಮಲ್ಯ ಮತ್ತು ಆರೋಗ್ಯದ ಬಗ್ಗೆ ಜಾಗೃತಿ ನೀಡಿ ಮಾದರಿ ಗ್ರಾಮ ನಿರ್ಮಿಸಲು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹೆಚ್ಚಿನ ಶ್ರಮವಹಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಪ್ರಫುಲ್ಲಾ ಬಿ.ಮಂಜುನಾಥ್ ಸೂಚನೆ ನೀಡಿದರು.

ತಾ.ಪಂ. ಸಭಾಂಗಣದಲ್ಲಿ ಗುರುವಾರ ಸಂಪೂರ್ಣ ಸ್ವಚ್ಛತಾ ಆಂದೋಲನಾ, ಸಂವಹನ ಮತ್ತು ಸಾಮರ್ಥ್ಯ ಅಭಿವೃದ್ಧಿ ಘಟಕ, ಕರ್ನಾಟಕ ಗ್ರಾಮೀಣ ನೀರು ಸರಬರಾಜು ಮತ್ತು ನೈರ್ಮಲ್ಯ ಸಂಸ್ಥೆ ವತಿಯಿಂದ ಏರ್ಪಡಿಸಿದ್ದ ಸ್ವಚ್ಛತಾ ಉತ್ಸವದಲ್ಲಿ ಮಾತನಾಡಿದರು.

ಅಧಿಕಾರಿಗಳು ಪ್ರತಿ ಹಳ್ಳಿಗಳಿಗೂ ಹೋಗಿ ಸ್ಥಳ ಪರಿಶೀಲಿಸಿ, ಗ್ರಾಮಗಳಿಗೆ ಅಗತ್ಯವಿರುವ ಕೆಲಸಗಳಿಗೆ ಮೊದಲ ಆದ್ಯತೆ ನೀಡಿ ಕೆಲಸ ಮಾಡಬೇಕು. ಅಧಿಕಾರವಿದ್ದಾಗ ಉತ್ತಮ ಕೆಲಸ ಮಾಡಿದರೆ, ವರ್ಗಾವಣೆಯಾದ ಮೇಲೂ ನಿಮ್ಮ ಕೆಲಸಗಳನ್ನು ಜನರು ಸ್ಮರಿಸುತ್ತಾರೆ ಎಂದರು.

ಗ್ರಾಮೀಣ ಜನರಿಗೆ ನೈರ್ಮಲ್ಯದ ಬಗ್ಗೆ ಜಾಗೃತಿ ಮೂಡಿಸಿದಾಗ ಜನರು ಸ್ವಯಂಪ್ರೇರಿತರಾಗಿ ಶೌಚಾಲಯ ನಿರ್ಮಿಸಲು ಮುಂದಾಗುತ್ತಾರೆ. ಶೌಚಾಲಯ ನಿರ್ಮಿಸುವವರಿಗೆ ಸರ್ಕಾರವು ಸಹ ಹಣ ನೀಡುತ್ತಿದೆ. ಅದನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

ಕೇಂದ್ರ ಸರ್ಕಾರ ಗ್ರಾಮೀಣ ನೈರ್ಮಲ್ಯವನ್ನು ತ್ವರಿತಗೊಳಿಸಲು ಹಾಗೂ ಗ್ರಾಮೀಣ ಸ್ವಚ್ಛತೆಯಲ್ಲಿ ಹೆಚ್ಚಿನ ಪ್ರಗತಿ ಸಾಧಿಸಲು 30 ದಿನಗಳ ಸ್ವಚ್ಛತಾ ಉತ್ಸವ ಎಂಬ ರಾಷ್ಟ್ರಮಟ್ಟದ ಜನಾಂದೋಲನ ಕಾರ್ಯಕ್ರಮ ರೂಪಿಸಲಾಗಿದೆ. ಇದಕ್ಕೆ ಅಕ್ಟೋಬರ್ 2 ರಂದು ರಾಷ್ಟ್ರದಾದ್ಯಂತ ಚಾಲನೆ ನೀಡಲಾಗುವುದು.
 
ಅಭಿವೃದ್ಧಿ ಕೆಲಸಗಳ ಮೂಲಕ ಮಾದರಿ ಗ್ರಾಮ ಪಂಚಾಯಿತಿ ನಿರ್ಮಿಸಬೇಕು. ಇಲಾಖೆ ವತಿಯಿಂದ ನೀಡಿರುವ ಮೊಬೈಲ್ ಅನ್ನು ಸಮರ್ಪಕವಾಗಿ ಬಳಸಬೇಕು. ಪ್ರತಿಯೊಬ್ಬರು ಕಂಪ್ಯೂಟರ್ ಬಳಕೆಯನ್ನು ಉತ್ತಮವಾಗಿ ನಿರ್ವಹಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಂಗೇಗೌಡ ಸೂಚಿಸಿದರು.

ಉದ್ಯೋಗ ಖಾತ್ರಿ ಯೋಜನೆಯಲ್ಲಿ ಸಮರ್ಪಕ ಕೆಲಸವಾಗದಿದ್ದರೂ ಬಿಲ್ ಪಾವತಿಸಲಾಗುತ್ತಿದೆ ಎಂಬ ದೂರುಗಳು ಬಂದಿವೆ. ಅಧಿಕಾರಿಗಳು ಈ ಯೋಜನೆ ಬಗ್ಗೆ ಹೆಚ್ಚಿನ ಗಮನ ನೀಡಬೇಕು ಎಂದು ತಾ.ಪಂ. ಅಧ್ಯಕ್ಷ ಕನಕರಾಜ್ ಅರಸ್ ಸೂಚಿಸಿದರು.

 ಜಿ.ಪಂ. ಉಪಕಾರ್ಯದರ್ಶಿ ಮಹೇಶ್ವರಯ್ಯ, ತಾ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷೆ ಅಂಬಿಕಾ, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಮೃತ್ಯುಂಜಯ, ನೈರ್ಮಲ್ಯ ಘಟಕದ ಅಧಿಕಾರಿ ತಾರಾನಾಥ್, ನೈರ್ಮಲ್ಯ ಘಟಕದ ಸಂಯೋಜಕ ಮಂಜುನಾಥ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.