ADVERTISEMENT

ಗ್ರಾಮೀಣ ರಸ್ತೆ ಅಭಿವೃದ್ಧಿಗೆ 12 ಕೋಟಿ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2011, 9:00 IST
Last Updated 17 ಸೆಪ್ಟೆಂಬರ್ 2011, 9:00 IST

ಕಡೂರು: ತಾಲ್ಲೂಕಿನ ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ 12.5ಕೋಟಿ ಮತ್ತು ಜಿಲ್ಲಾ ಮುಖ್ಯರಸ್ತೆಗಳ ಅಭಿವೃದ್ಧಿಗೆ 14.5ಕೋಟಿ ರೂ ಹಣವನ್ನು ರಾಜ್ಯ ಸರ್ಕಾರ ಮಂಜೂರು ಮಾಡಿ ದೆ ಎಂದು ಶಾಸಕ ಡಾ.ವೈ.ಸಿ.ವಿಶ್ವನಾಥ್ ತಿಳಿಸಿದರು.

ಶಾಸಕರಾಗಿ ವರ್ಷ ಪೂರೈಸಿದ ಸಂದರ್ಭ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿ ಉದ್ದೇಶಿಸಿ ಅವರು ಮಾತನಾಡಿದರು.

ಹೆಬ್ಬೆ ತಿರುವು ಯೋಜನೆಯ ಸರ್ವೆ ಕಾರ್ಯಕ್ಕೆ ಮಳೆ ಅಡ್ಡಿಯಾಗುತ್ತಿದ್ದು ಶೀಘ್ರದಲ್ಲಿ  ಪ್ರಾರಂಭವಾಗಲಿದೆ. ಕಡೂರು-ಬೀರೂರು ಪಟ್ಟಣಗಳಿಗೆ ಕುಡಿಯುವ ನೀರೊದಗಿಸುವ ಯೋಜನೆ ಕಾಮಗಾರಿ ಶೇ 80 ಮುಕ್ತಾಯವಾಗಿದ್ದು ಅವಳಿ ಪಟ್ಟಣಗಳಲ್ಲಿ ರಸ್ತೆ ವಿಸ್ತರಣೆ ವಿಳಂಬವಾಗಿದ್ದು ಯಾವುದೇ ಹಿಂಜರಿಕೆಯಿಲ್ಲದೆ ಪಟ್ಟಣಗಳ ಅಭಿವೃದ್ಧಿಗಾಗಿ 60ಅಡಿ ರಸ್ತೆ ವಿಸ್ತರಣೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದ್ದು ಸಾರ್ವಜನಿಕರು ಸಹಕರಿಸುವಂತೆ ಕೋರಿದರು.

 ತಾಲ್ಲೂಕು ಬರಗಾಲದ ಸುಳಿಗೆ ಸಿಲುಕಿದ್ದು ರೈತರು ಸಂಕಷ್ಟದಲ್ಲಿದ್ದು ಐದು ಹೋಬಳಿಗಳಲ್ಲಿ ಶೇ.90.ರಷ್ಟು ಬೆಳೆಹಾನಿ ಸಂಭವಿಸಿದ್ದು ಉಳಿದ ಎರಡು ಹೋಬಳಿಗಳಲ್ಲಿ ಶೇ.75ರಷ್ಟು ಹಾನಿಯಾಗಿದೆ. ಈ ಕುರಿತು ಜಿಲ್ಲಾಧಿಕಾರಿಗಳು ಈಗಾಗಲೇ ಸಮೀಕ್ಷೆ ನಡೆಸಿ ಮುಖ್ಯಮಂತ್ರಿಗಳಿಗೆ ವರದಿ ನೀಡಿದ್ದು ಮೇವು ಬ್ಯಾಂಕ್ ತೆರೆಯಲು ಮತ್ತು ಹೆಕ್ಟೇರ್ ಭೂಮಿಗೆ ಎರಡು ಸಾವಿರ ರೂ ಪರಿಹಾರ ನೀಡಲು ಚಿಂತಿಸಲಾಗಿದ್ದು ಪರಿಹಾ ರದ ಹಣ ಹೆಚ್ಚು ಮಾಡಲು ಮುಖ್ಯಮಂತ್ರಿಗಳ ಗಮನ ಸೆಳೆಯಲಾಗಿದೆ ಎಂದರು.

ತಾಲ್ಲೂಕಿನ ಅಂತರಗಟ್ಟೆ ಗ್ರಾಮದಲ್ಲಿ ಪ್ರವಾಸೋದ್ಯಮ ಇಲಾಖೆ ವತಿಯಿಂದ 75ಲಕ್ಷ ರೂ ವೆಚ್ಚದಲ್ಲಿ ಯಾತ್ರಿನಿವಾಸ ನಿರ್ಮಿಸಲು ಮಂಜೂರಾತಿ ದೊರೆತಿದ್ದು ಶೀಘ್ರವೇ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದು ತಿಳಿಸಿ ಕ್ಷೇತ್ರದಲ್ಲಿ 20ಕ್ಕೂ ಹೆಚ್ಚು ಚೆಕ್‌ಡ್ಯಾಂ ನಿರ್ಮಾಣಕ್ಕೆ ತಲಾ 5ಲಕ್ಷದಂತೆ ಹಣ ಬಿಡುಗಡೆಯಾಗಿದೆ ಅಲ್ಲದೆ ಮುಖ್ಯ ಮಂತ್ರಿಗಳ ವಿಶೇಷ ಅನುದಾನದಲ್ಲಿ ಕ್ಷೇತ್ರದ ಅಭಿವೃದ್ಧಿಗೆ 25 ಕೋಟಿ ಹಣ ನೀಡುವ ಭರವಸೆಯನ್ನು ನೀಡಿದ್ದಾರೆ ಎಂದರು.

 ಕೆರೆಗಳ ಹೂಳೆತ್ತುವ ವಿಷಯದಲ್ಲಿ ಅಕ್ರಮ ಕಂಡು ಬಂದಿದೆ ಎಂಬ ಪತ್ರಕರ್ತರ ಪ್ರಶ್ನೆಗೆ ಹಾರಿಕೆ ಉತ್ತರ ನೀಡಿ ಯಾರಾದರೂ ಅಕ್ರಮದ ಕುರಿತು ದಾಖಲೆ ನೀಡಿದರೆ ತನಿಖೆಗೆ ಆದೇಶಿ ಸುವುದಾಗಿ ತಿಳಿಸಿದರು.

ಕಡೂರು ಪುರಸಭೆಯಲ್ಲಿ ಅಕ್ರಮಗಳು ಮಿತಿಮೀರುತ್ತಿದ್ದು ಶಾಸಕರಾಗಿ ನಿಮ್ಮ ಸಮಜಾಯಿಷಿ ಏನು ಎಂಬ ಪ್ರಶ್ನೆಗೆ ಪುರಸಭೆಯ ಮುಖ್ಯಾಧಿಕಾರಿ ಉತ್ತಮರು ಎಂದು ಭಾವಿಸಿದ್ದೆ. ಆದರೆ ಇವರು ನಿರುಪಯೋಗಿ ಮತ್ತು ತಿಳಿವಳಿಕೆ ಇಲ್ಲದವರು ಎಂಬುದು ಸಾಬೀತಾಗಿದೆ. ಹಗರ ಣಗಳ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ರೊಡನೆ ಮಾತನಾಡಿ ಪುರಸಭೆಗೆ ಅಂಟಿರುವ ಕಳಂಕ ತೊಳೆಯಲು ಪ್ರಯತ್ನಿಸುವುದಾಗಿ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ತಾಲ್ಲೂಕು ಬಿಜೆಪಿ ಘಟಕದ ಅಧ್ಯಕ್ಷ ರಾಜಶೇಖರ್, ಎಪಿಎಂಸಿ ಅಧ್ಯಕ್ಷ ಉಮಾಪತಿ,ತಾಲ್ಲೂಕು ಕಾರ್ಯದರ್ಶಿ ಶಿವಶಂಕರ್,ವಕ್ತಾರ ಶಾಮಿಯಾನ ಚಂದ್ರು, ನಾಗರಾಜ್,ಮಂಜುನಾಥ್ ಇದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.