ನರಸಿಂಹರಾಜಪುರ: ಯಾವುದೇ ಮಧುರ ಕ್ಷಣವು ಸದಾ ನೆನಪಿನಲ್ಲಿ ಉಳಿಯುವಂತಹ ದಾಖಲೆ ನೀಡುವುದು ಛಾಯಾಗ್ರಾಹಕ ವೃತ್ತಿಯಾಗಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಡಿ.ಎನ್. ಜೀವರಾಜ್ ತಿಳಿಸಿದರು.
ಇಲ್ಲಿನ ಗುರುಭವನದಲ್ಲಿ ಭಾನುವಾರ ತಾಲ್ಲೂಕು ಛಾಯಾಗ್ರಾಹಕ ಸಂಘದ ವತಿಯಿಂದ ನಡೆದ ಸಂಘದ ವಾರ್ಷಿ ಕೋತ್ಸವ, ವಿಶ್ವ ಛಾಯಾ ಗ್ರಾಹಕರ ದಿನಾಚರಣೆ ಹಾಗೂ ನೂತನ ಪದಾಧಿಕಾರಿಗಳ ಅಧಿಕಾರ ಹಸ್ತಾಂತರ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಹಿಂದಿನ ಛಾಯಾಗ್ರಾಹಕರು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದರು. ಆದರೆ ಡಿಜಿಟಲ್ ತಂತ್ರಜ್ಞಾನದಲ್ಲಿ ಇಂತಹ ಸಾಕಷ್ಟು ಸಮಸ್ಯೆಗಳು ಕಡಿಮೆ ಯಾಗಿದ್ದರೂ, ಹಲವು ಸಮಸ್ಯೆಗಳು ಇಂದಿಗೂ ಇವೆ. ತಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಛಾಯಾಗ್ರಾಹಕರು ಸಂಘಟಿತರಾಗಿರುವುದು ಒಳ್ಳೆಯ ಬೆಳವಣಿಗೆಯಾಗಿದೆ. ಛಾಯಾಗ್ರಾಹಕರ ಸಂಘಕ್ಕೆ ನಿವೇಶನ ನೀಡಲು ಕಾನೂನಿನಲ್ಲಿ ಅವಕಾಶವಿದ್ದಲ್ಲಿ ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು.
ಜಿಲ್ಲಾ ಕಾಂಗ್ರೆಸ್ ಘಟಕದ ಪ್ರಧಾನ ಕಾರ್ಯದರ್ಶಿ ಪಿ.ಆರ್. ಸದಾಶಿವ ಮಾತನಾಡಿ, ಛಾಯಾಗ್ರಾಹಕರು ತಮ್ಮ ವೃತ್ತಿಯಲ್ಲಿ ನೈಪುಣ್ಯತೆ, ಕೌಶಲ್ಯ ಬೆಳೆಸಿಕೊಂಡು ಪರಿಣಿತಿ ಹೊಂದಬೇಕು ಎಂದರು.ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಇ.ಸಿ. ಜೋಯಿ, ತಾಲ್ಲೂಕು ಛಾಯಾಗ್ರಾಹಕರ ಸಂಘದ ಗೌರವಾಧ್ಯಕ್ಷ ಎಂ.ಒ. ಜೋಯಿ ಮಾತನಾಡಿ ದರು. ತಾಲ್ಲೂಕು ಛಾಯಾಗ್ರಾಹಕರ ಸಂಘದ ನಿರ್ಗಮಿತ ಅಧ್ಯಕ್ಷ ಬಾಲಚಂದ್ರ ಅಧ್ಯಕ್ಷತೆ ವಹಿಸಿದ್ದರು.
ತಾಲ್ಲೂಕು ಛಾಯಾಗ್ರಾಹಕ ಸಂಘದ ನೂತನ ಅಧ್ಯಕ್ಷ ಪಿ.ಜೆ. ವಿಜು, ಅಭಿನವಗಿರಿರಾಜ್, ತೃಪ್ತಿ, ದಯಾಕರ್ ಇದ್ದರು.ಇದೇ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಹಿರಿಯ ಛಾಯಾಗ್ರಾಹಕ ಎಸ್.ಕೆ. ಪುತ್ರನ್ ಅವರನ್ನು ಅಭಿನಂದಿ ಸಲಾಯಿತು.
ವಿಶ್ವ ಛಾಯಾಗ್ರಾಹಕರ ದಿನಾಚರಣೆ ಅಂಗವಾಗಿ ಪ್ರಾಥಮಿಕ ಶಾಲಾ ಮಕ್ಕಳಿಗೆ ಏರ್ಪಡಿಸಿದ್ದ ಜಿಂಕೆ ಬಿಡಿಸುವ ಸ್ಪರ್ಧೆಯಲ್ಲಿ ತೃಪ್ತಿ ಪ್ರಥಮ, ಜಿಸ್ಮಾ ಜಾರ್ಜ್ ದ್ವಿತೀಯ, ರೋಹಿತ್ ಶೆಟ್ಟಿ ತೃತೀಯ, ಪ್ರೌಢಶಾಲಾ ಮಕ್ಕಳಿಗೆ ಏರ್ಪಡಿಸಿದ್ದ ಹುಲಿ ಚಿತ್ರ ಬಿಡಿಸುವ ಸ್ಪರ್ಧೆಯಲ್ಲಿ ನಂದನಕುಮಾರ್ ಪ್ರಥಮ, ಮಹಮ್ಮದ್ ನಿಜಾಮ್ ದ್ವಿತೀಯ, ಆಕಾಶ್ ತೃತೀಯ, ಮಹಿಳೆಯರಿಗೆ ಏರ್ಪಡಿಸಲಾಗಿದ್ದ ಚುಕ್ಕಿ ರಂಗೋಲಿ ಸ್ಪರ್ಧೆಯಲ್ಲಿ ಶೈಲಾ ಜನಾರ್ದನ್ ಪ್ರಥಮ, ವಿಜಯಮಂಜಪ್ಪ ದ್ವಿತೀಯ, ವೀಣಾ ತೃತೀಯ, ಛಾಯಾ ಗ್ರಾಹಕರಿಗೆ ಏರ್ಪಡಿಸಿದ್ದ ಕೌತುಕ ಲೋಕದ ವಿಶೇಷ ಛಾಯಾ ಚಿತ್ರ ಸ್ಪರ್ಧೆ ಯಲ್ಲಿ ಪಿ.ಜೆ. ವಿಜು ಪ್ರಥಮ,ಅಭಿನವ ಗಿರಿರಾಜ್ ದ್ವಿತೀಯ ಹಾಗೂ ಜಗದೀಶ್ ತೃತೀಯ ಬಹುಮಾನ ಪಡೆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.