ADVERTISEMENT

‘ಜನರ ಪ್ರೀತಿ ಆತ್ಮವಿಶ್ವಾಸ ಹೆಚ್ಚಿಸಿದೆ’

ವೈ.ಎಸ್.ವಿ.ದತ್ತ ನಾಮಪತ್ರ ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2018, 8:47 IST
Last Updated 25 ಏಪ್ರಿಲ್ 2018, 8:47 IST

ಕಡೂರು: ಶಾಸಕ ವೈ.ಎಸ್.ವಿ. ದತ್ತ ಅವರು ಮಂಗಳವಾರ ಜೆಡಿಎಸ್ ಅಭ್ಯರ್ಥಿಯಾಗಿ ಮತ್ತೊಮ್ಮೆ ನಾಮಪತ್ರ ಸಲ್ಲಿಸಿದರು. ಕಳೆದ 19ರಂದು ದತ್ತ ಅವರು ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸಿದ್ದರು.

ಮಂಗಳವಾರ ಯಗಟಿಯ ಅರೇಕಲ್ಲಮ್ಮ ಮತ್ತು ಕುಲದೇವತೆ ಗದುಗಿನ ವೀರನಾರಾಯಣಸ್ವಾಮಿ ದೇಗುಲದಲ್ಲಿ ಪೂಜೆ ಸಲ್ಲಿಸಿದ ನಂತರ ಕಡೂರಿನ ವೆಂಕಟೇಶ್ವರ ದೇಗುಲಕ್ಕೆ ತೆರಳಿ ಪ್ರಸಾದ ಸ್ವೀಕರಿಸಿದರು.

ಎಪಿಎಂಸಿ ಪ್ರಾಂಗಣದಲ್ಲಿ ಬೆಳಿಗ್ಗೆಯಿಂದಲೇ ಜೆಡಿಎಸ್ ಕಾರ್ಯಕರ್ತರು ಸೇರಲಾರಂಭಿಸಿದ್ದರು. ಸುತ್ತಮುತ್ತಲ ಗ್ರಾಮಗಳಿಂದ ವಾಹನಗಳಲ್ಲಿ ಬರುತ್ತಿದ್ದ ಜನರು ಎಪಿಎಂಸಿ ಪ್ರಾಂಗಣದಲ್ಲಿ ವಾಹನಗಳನ್ನು ನಿಲ್ಲಿಸಲು ಪ್ರಯತ್ನಿಸುತ್ತಿದ್ದರು. ಒಂದೆಡೆ ಬರುತ್ತಿದ್ದ ವಾಹನಗಳು ಜನದಟ್ಟಣೆಯಲ್ಲಿ ಮುಂದೆ ಸಾಗಲು ಸಾಧ್ಯವಾಗದೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಎರಡು ಗಂಟೆಗಳಿಗೂ ಹೆಚ್ಚು ಕಾಲ ಸಂಚಾರ ದಟ್ಟಣೆ ಉಂಟಾಯಿತು.

ADVERTISEMENT

ಎಪಿಎಂಸಿ ಆವರಣದಿಂದ ಹೊರಟ ದತ್ತ ಅವರನ್ನು ಸಾವಿರಾರು ಅಭಿಮಾನಿಗಳು ಮತ್ತು ಕಾರ್ಯಕರ್ತರು ಹಿಂಬಾಲಿಸಿದರು. ದತ್ತ ಅವರು ಅಲಂಕೃತ ಎತ್ತಿನ ಗಾಡಿಯಲ್ಲಿ ಕುಳಿತು ಸಾಗಿದರು. ನಂತರ ದತ್ತ ಅವರು ಕದಂಬ ವೃತ್ತದಲ್ಲಿ ಮಾತನಾಡಿ, ‘ಇಷ್ಟು ದೊಡ್ಡ ಪ್ರಮಾಣದಲ್ಲಿ ಜನರು ಸ್ವಪ್ರೇರಣೆಯಿಂದ ಬಂದಿರುವುದು ನನ್ನ ಪ್ರೀತಿ ರಾಜಕಾರಣಕ್ಕೆ ಸಂದ ಗೌರವವಾಗಿದೆ. ಯಾವುದೇ ಜಾತಿ ಬಲ. ತೋಳ್ಬಲ ಅಥವಾ ಹಣಬಲ ಇಲ್ಲಿ ಕೆಲಸ ಮಾಡುವುದಿಲ್ಲ. ಕೇವಲ ನಿಷ್ಕಲ್ಮಷ ಪ್ರೀತಿಯೊಂದೆ ಜನರನ್ನು ಗೆಲ್ಲುವ ಸಾಧನವಾಗಿದೆ. ಆ ಪ್ರೀತಿಯ ಪ್ರದರ್ಶನದಿಂದ ನನ್ನಲ್ಲಿ ಆತ್ಮವಿಶ್ವಾಸ ಹೆಚ್ಚಿಸಿದೆ. ತಾಲ್ಲೂಕಿನಲ್ಲಿ ಶಾಶ್ವತ ನೀರಾವರಿ ಕಲ್ಪಿಸುವುದು ಮತ್ತು ನಿರುದ್ಯೋಗ ನಿವಾರಣೆಗೆ ಪ್ರಯತ್ನಿಸುವುದು ನನ್ನ ಮುಂದಿನ ಗುರಿ’ ಎಂದರು.

ಈ ಸಂದರ್ಭದಲ್ಲಿ ತಾಲ್ಲೂಕು ಜೆಡಿಎಸ್ ಕಾರ್ಯಾಧ್ಯಕ್ಷ ಭಂಡಾರಿ ಶ್ರೀನಿವಾಸ್, ಅಧ್ಯಕ್ಷ ಕೋಡಿಹಳ್ಖಿ ಮಹೇಶ್ವರಪ್ಪ, ಉಪಾಧ್ಯಕ್ಷ ಜಿಗಣೇಹಳ್ಳಿ ನೀಲಕಂಠಪ್ಪ, ಸೀಗೇಹಡ್ಲು ಹರೀಶ್, ಬಿದರೆ ಜಗದೀಶ್, ಬಿಳುವಾಲ ಪ್ರಕಾಶ್ ಇದ್ದರು.

ಅವರು ಚುನಾವಣಾಧಿಕಾರಿ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿದರು. ಅವರ ಜತೆ ಬಿ.ಟಿ.ಗಂಗಾಧರನಾಯ್ಕ, ಎಂ.ಕೆ.ಮಹೇಶ್ವರಪ್ಪ, ಕೃಷ್ಣಪ್ಪ, ನಿರ್ಮಲಾ ದತ್ತ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.