ADVERTISEMENT

`ಜೀವನಮಟ್ಟ ಸುಧಾರಣೆ ಉದ್ದೇಶ'

​ಪ್ರಜಾವಾಣಿ ವಾರ್ತೆ
Published 19 ಜುಲೈ 2013, 11:15 IST
Last Updated 19 ಜುಲೈ 2013, 11:15 IST

ಅಜ್ಜಂಪುರ: ಗ್ರಾಮೀಣ ಕೃಷಿಕರ ಕೃಷಿ ಫಸಲಿನ ಇಳುವರಿ ಮತ್ತು ಆದಾಯವನ್ನು ಅಧಿಕಗೊಳಿಸುವ ನಿಟ್ಟಿನಲ್ಲಿ, ವೈಜ್ಞಾನಿಕ ಮತ್ತು ಯೋಜಿತ ಕೃಷಿ ಹಾಗೂ ಕೃಷಿಯೇತರ ಚಟುವಟಿಕೆ ಪ್ರೋತ್ಸಾಹಿಸುವ ಮೂಲಕ, ಗ್ರಾಮೀಣರ ಜೀವನ ಮಟ್ಟವನ್ನು ಸುಧಾರಿಸುವುದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮುಖ್ಯ ಉದ್ದೇಶ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.

ಪಟ್ಟಣದ ಸಮೀಪದ ಮುಗುಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಗುರುವಾರ ನಡೆದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾ ಪ್ರಗತಿ ಬಂದು ಸಂಘಗಳ ಪ್ರಗತಿ ಪರಿಶೀಲನಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮಧ್ಯವರ್ಜನ ಶಿಬಿರದಿಂದ ಕುಡಿತ ಬಿಟ್ಟು ಕೃಷಿಯಲ್ಲಿ ಉತ್ತಮ ಸಾಧನೆ ಮಾಡುತ್ತಿರುವ ರೈತರನ್ನು ಅಭಿನಂದಿಸಿ, `ಮದ್ಯ ಸೇವನೆ ನಮ್ಮ ಹಣ, ಮಾನ, ಯೋಗ್ಯತೆ, ಸಮಾಜದಲ್ಲಿ ಗೌರವ ಹಾಳು ಮಾಡುವ ಜತೆಯಲ್ಲಿ ಆರೋಗ್ಯವನ್ನು ಹಾನಿಗೊಳಿಸುತ್ತದೆ. ಪುರುಷರು ಗ್ರಾಮೀಣಾಭಿವೃದ್ಧಿ ಯೋಜನೆಯ ಪ್ರಗತಿಬಂಧು ಸ್ವಸಹಾಯ ಸಂಘಕ್ಕೆ ಸೇರ್ಪಡೆಗೊಂಡು, ಜೀವನದ ಆಲಸ್ಯ ತೊಲಗಿಸಿ, ದಿನನಿತ್ಯದ ಬದುಕಲ್ಲಿ ಪರಿವರ್ತನೆಯಾಗಿ, ಪ್ರಗತಿ ಸಾಧಿಸಿ' ಎಂದು ಕರೆನೀಡಿದರು.

ತಾಲ್ಲೂಕಿನಲ್ಲಿ ಗ್ರಾಮಾಭಿವೃದ್ಧಿ ಯೋಜನೆ 7.5 ಕೋಟಿ ರೂಪಾಯಿ ಉಳಿತಾಯ ಸಂಗ್ರಹಿಸಿದೆ. ಈ ವಹಿವಾಟಿನಿಂದ 41 ಲಕ್ಷ ರೂಪಾಯಿ ಲಾಭಾಂಶ ಲಭ್ಯವಿದ್ದು, ತಾಲ್ಲೂಕಿನ ಎಲ್ಲಾ 2430 ಸಂಘಗಳು ಇದರ ಲಾಭ ಪಡೆಯಲಿದ್ದಾರೆ ಎಂದರು.

`ಜಿಲ್ಲೆಯ ಪ್ರವಾಸದಲ್ಲಿ ದ್ವಿಚಕ್ರ ವಾಹನ ಸವಾರರು ಕಾನೂನಿನ ಜ್ಞಾನ, ಮಾಹಿತಿ ಕೊರತೆ ಅಥವಾ ಸ್ವಪ್ರತಿಷ್ಠೆಯಿಂದಲೊ ವಾಹನ ಚಾಲನಾ ನಿಯಮಗಳನ್ನು ಪಾಲಿಸದೇ, ವೇಗವಾಗಿ ವಾಹನ ಚಲಾಯಿಸುತ್ತಾ, ಅಪಘಾತಕ್ಕೆ ಕಾರಣವಾಗಿದ್ದನ್ನು ಗಮನಿಸಿದ್ದೇನೆ. ಪೊಲೀಸ್ ಅಧಿಕಾರಿಗಳು ಜೀವಹಾನಿಗೆ ಕಾರಣವಾಗುವ ಇಂತಹ ಸವಾರರ ಬಗ್ಗೆ ಕ್ರಮಕೈಗೊಳ್ಳಬೇಕು' ಎಂದು ಮಾಡಿದರು.

ಧರ್ಮಸ್ಥಳ, ಗ್ರಾಮೀಣ ಪ್ರದೇಶಗಳ ಸರ್ವಾಂಗೀಣ ವಿಕಾಸಕ್ಕೆ ಅಗತ್ಯವಿರುವ ಹಾಲುಸಂಘ ಕಟ್ಟಡ, ಸಮುದಾಯ ಭವನ ನಿರ್ಮಾಣ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯಂತಹ ಮೂಲ ಸೌಕರ್ಯ ನಿರ್ಮಾಣಕ್ಕೆ ನೆರವು ನೀಡುತ್ತಾ, ಸಮದಾಯದ ಅಭಿವೃದ್ಧಿಗೆ ಪ್ರತಿಫಲಾಪೇಕ್ಷೆಯಿಲ್ಲದೇ ಗಣನೀಯ ಕೊಡುಗೆ ನೀಡುತ್ತಿದೆ ಎಂದು ಶಾಸಕ ಜಿ.ಎಚ್.ಶ್ರೀನಿವಾಸ್ ಹೇಳಿದರು.

ಮಹಿಳೆಯರಲ್ಲಿ ವ್ಯವಹಾರಿಕ ಜ್ಞಾನ ಗಳಿಸುವ, ಆರ್ಥಿಕ ಚೈತನ್ಯ ಉಂಟುಮಾಡುವ, ಹಣ ಉಳಿತಾಯದ ಪರಿಪಾಠ ಮೂಡಿಸುವ, ಸ್ವಾವಲಂಬಿ ಬದುಕಿನ ಸಾಮರ್ಥ್ಯ ಬೆಳೆಸುವ ದಿಕ್ಕಿನಲ್ಲಿ ಧರ್ಮಸ್ಥಳ ಗ್ರಾಮೀಣಾಭಿವೃದ್ದಿ ಯೋಜನೆ ಕಾರ್ಯಚಟುವಟಿಕೆ ಶ್ಲಾಘನೀಯ ಎಂದರು.

ಇದಕ್ಕೂ ಮೊದಲು ಡಾ.ವೀರೇಂದ್ರ ಹೆಗ್ಗಡೆ ಅವರು ಶಿವನಿಯ ಶುದ್ದ ಕುಡಿಯುವ ನೀರಿನ ಘಟಕ ಹಾಗೂ ಗ್ರಾಮಾಭಿವೃದ್ದಿ ಯೋಜನೆಯಡಿ ಅನುಷ್ಠಾನಗೊಂಡಿರುವ ಬಗ್ಗೆ ಮುಗುಳಿ ಗ್ರಾಮದ ಕೃಷಿ ಭೂಮಿಗೆ ಬೇಟಿ ನೀಡಿ ಬಾಳೆಬೆಳೆಯನ್ನು ವೀಕ್ಷಿಸಿದರು.

ಜಿಲ್ಲಾ ಪಂಚಾಯಿತಿ ಸದಸ್ಯ ಎಂ.ಕೃಷ್ಣಮೂರ್ತಿ, ತಾಲ್ಲೂಕು ಪಂಚಾಯಿತಿ ಸದಸ್ಯೆ ರತ್ನಮ್ಮ, ಗ್ರಾ.ಪಂ.ಅಧ್ಯಕ್ಷ ಪ್ರಕಾಶ್, ಕೇಂದ್ರೀಯ ಧರ್ಮಸ್ಥಳ ಯೋಜನಾಧಿಕಾರಿ ಮಂಜುನಾಥ್, ಪ್ರಾದೇಶಿಕ ನಿರ್ದೇಶಕ ಮಹಾವೀರ್ ಆಜ್ರಿ, ಜಿಲ್ಲಾ ನಿರ್ದೇಶಕಿ ಗೀತಾ, ತಾಲ್ಲೂಕು ಯೋಜನಾಧಿಕಾರಿ ಮಹೇಶ್, ಮೇಲ್ವಿಚಾರಕ ಸಂದೇಶ್, ನಾಗರಾಜ್, ಸೇವಾಪ್ರತಿನಿಧಿಗಳು, ಗ್ರಾಮಸ್ಥರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.