ADVERTISEMENT

ಜೆಡಿಎಸ್‌ಗೆ ರೈತಪರ ನಿಲುವು: ನಿಂಗಯ್ಯ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2013, 6:23 IST
Last Updated 25 ಏಪ್ರಿಲ್ 2013, 6:23 IST

ಮೂಡಿಗೆರೆ: ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ದೇಶಕ್ಕೆ ಅನ್ನ ನೀಡುವ, ರೈತರ ಪರ ಚಿಂತನೆಗಳನ್ನು ಹೊಂದಿರುವ ಜೆಡಿಎಸ್ ಅನ್ನು ಮತದಾರರು ಬೆಂಬಲಿಸಬೇಕು ಎಂದು ಮಾಜಿ ಸಚಿವ ಬಿ.ಬಿ.ನಿಂಗಯ್ಯ ಮನವಿ ಮಾಡಿದರು.

ಪಟ್ಟಣದ ಬಿಳಗುಳದಲ್ಲಿ ಬುಧವಾರ ನಡೆದ ರೋಡ್ ಶೋನ ವೇಳೆ ನೆರೆದಿದ್ದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು. ಕುಮಾರಸ್ವಾಮಿ ಅವರು ಮುಖ್ಯ ಮಂತ್ರಿಯಾಗಿದ್ದ ವೇಳೆ ರೈತ ಪರ ಆಡಳಿತ ನಡೆಸಿ, ದೇಶಕ್ಕೆ ಮಾದರಿಯ ಆಡಳಿತ ನೀಡಿದ್ದರು. ರಾಜ್ಯದಲ್ಲಿ ಕೃಷಿ ಕ್ಷೇತ್ರ, ಕಾಫಿ ಉದ್ದಿಮೆ ಅಭಿವೃದ್ಧಿ ಹೊಂದಬೇಕಾದರೆ ಅದು ಜೆಡಿಎಸ್ ಪಕ್ಷದಿಂದ ಮಾತ್ರ ಸಾಧ್ಯ, ಕ್ಷೇತ್ರದಾದ್ಯಂತ ಜೆಡಿಎಸ್ ಪಕ್ಷಕ್ಕೆ ಉತ್ತಮ ಬೆಂಬಲವಿದ್ದು, ಕ್ಷೇತ್ರ ಮಾತ್ರವಲ್ಲದೇ ಇಡೀ ಜಿಲ್ಲೆಯಲ್ಲಿಯೇ ಅಚ್ಚರಿಯ ರೀತಿಯಲ್ಲಿ ಜೆಡಿಎಸ್ ಪಕ್ಷ ಗೆಲವು ಪಡೆಯುತ್ತದೆ ಎಂದರು.

ಜೆಡಿಎಸ್ ಕ್ಷೇತ್ರ ಸಮಿತಿ ಅಧ್ಯಕ್ಷ ಡಿ.ಆರ್.ಉಮಾಪತಿ ಮಾತನಾಡಿ, ಪ್ರತಿ ಹಳ್ಳಿಗಳಲ್ಲೂ ಜೆಡಿಎಸ್ ಪ್ರಬಲವಾಗಿದ್ದು, ಬೂತ್ ಮಟ್ಟದಲ್ಲಿ ಸ್ವಯಂ ಪ್ರೇರಿತರಾಗಿ ಕಾರ್ಯಕರ್ತರು, ಯುವ ಜನರು ಜೆಡಿಎಸ್ ಪಕ್ಷದ ಪರ ಕಾರ್ಯನಿರ್ವಹಿಸುತ್ತಿದ್ದು, ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿಯ ಗೆಲುವು ನಿಶ್ಚಿತ ಎಂದರು.

ಜೆಡಿಎಸ್ ತಾಲ್ಲೂಕು ಪ್ರಚಾರ ಸಮಿತಿ ಅಧ್ಯಕ್ಷ ಮಂಡಿ ಲಕ್ಷ್ಮಣಗೌಡ ಮಾತನಾಡಿ, ಕೋಮುವಾದಿಗಳು ಕ್ಷೇತ್ರದಲ್ಲಿ ಜಾತಿ ವ್ಯವಸ್ಥೆಯನ್ನು ಬಳಸಿಕೊಂಡು ಮತಯಾಚನೆ ಮಾಡುತ್ತಿದ್ದು, ಕ್ಷೇತ್ರದ ಕಲವು ವರ್ಗಗಳನ್ನು ಕಡೆಗಣಿಸುವಂತ ಮಾತುಗಳನ್ನು ಆಡುತ್ತಿರುವುದು ಆರೋಗ್ಯಕರ ಬೆಳವಣಿಗೆಯಲ್ಲ. ಕಡೆಗಣಿಸಿರುವ ವರ್ಗದ ಜನತೆ ಈ ಬಾರಿಯ ಚುನಾವಣೆಯಲ್ಲಿ ಅವಹೇಳನಕಾರಿಯಾಗಿ ಮಾತನಾಡಿರುವ ಅಭ್ಯರ್ಥಿಗಳಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹೇಳಿದರು.

ಕಾರ್ಯಕ್ರಮಲ್ಲಿ ಜೆಡಿಎಸ್ ಪದಾಧಿಕಾರಿಗಳಾದ ಬಾಲಕೃಷ್ಣೇಗೌಡ, ರಂಜನ್ ಅಜತ್ ಕುಮಾರ್, ಸಿ.ಎಂ. ಗೋಪಾಲಗೌಡ, ಲೋಹಿತ್,ಅಶೋಕ್ ಮುಂತಾದವರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.