ನರಸಿಂಹರಾಜಪುರ: ಜಿಲ್ಲೆಯಲ್ಲಿ ಡೆಂಗೆ ಪ್ರಕರಣಗಳು ಕಂಡುಬಂದಿದ್ದು ಅದು ಹರಡದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ತರಿಕೇರೆ ಉಪವಿಭಾಗಾಧಿಕಾರಿ ಜಿ.ಅನುರಾಧಾಧ ತಿಳಿಸಿದರು.
ಇಲ್ಲಿನ ಮಿನಿವಿಧಾನ ಸೌಧದಲ್ಲಿ ಗುರುವಾರ ಡೆಂಗೆ ನಿಯಂತ್ರಣಕ್ಕೆ ಸಂಬಂಧಿಸಿದಂತೆ ನಡೆದ ತಾಲ್ಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.
ತರೀಕೆರೆಯಲ್ಲಿ ಇಬ್ಬರು ಈಗಾಗಲೇ ಡೆಂಗೆಯಿಂದ ಮೃತಪಟ್ಟಿದ್ದಾರೆ. ಪಕ್ಕದ ಶಿವಮೊಗ್ಗ ಜಿಲ್ಲೆಯಲ್ಲೂ ಇದು ವ್ಯಾಪಕವಾಗಿದ್ದು ಈ ಭಾಗದಿಂದ ಶಿವಮೊಗ್ಗಕ್ಕೆ ಹೋಗಿಬರುವವರ ಸಂಖ್ಯೆ ಹೆಚ್ಚಿರುವುದರಿಂದ ಅಲ್ಲಿಂದ ರೋಗ ವರ್ಗಾವಣೆಯಾಗುವ ಸಾಧ್ಯತೆಗಳಿವೆ. ಸೊಳ್ಳೆಗಳಿಂದ ಈ ರೋಗ ಬರುವುದರಿಂದ ಪರಿಸರ ನೈರ್ಮಲ್ಯಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ನೀರಿನ ತೊಟ್ಟಿ, ಬ್ಯಾರೆಲ್‌ಗಳಲ್ಲಿನ ನೀರನ್ನು ಸ್ವಚ್ಛಗೊಳಿಸಿ ತುಂಬಬೇಕು, ಪ್ಲಾಸ್ಟಿಕ್, ತೆಂಗಿನ ಚಿಪ್ಪು, ಟೈರ್‌ಗಳು ಸೊಳ್ಳೆಗಳ ಉಗಮಸ್ಥಾನವಾಗಿದ್ದು ಇದನ್ನು ಸ್ವಚ್ಛವಾಗಿಸಲು ಅರಿವು ಮೂಡಿಸಲಾಗುತ್ತಿದೆ ಎಂದರು.
ಪ್ರಾಥಮಿಕ ಆರೋಗ್ಯ ಕೇಂದ್ರಗಳ ನೇತೃತ್ವದಲ್ಲಿ ಲಾರ್ವಾ ಸಮೀಕ್ಷ ತಂಡ ರಚಿಸಲಾಗಿದೆ. ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯ ಕರ್ತೆಯರು ಹಾಗೂ ದಾದಿಯರ ಸಹಭಾಗಿತ್ವದಲ್ಲಿ ಲಾರ್ವಾ ಸಮೀಕ್ಷಾ ಕಾರ್ಯ ಕೈಗೊಳ್ಳಲಾಗಿದ್ದು ಜನರಿಗೆ ಅರಿವು ಮೂಡಿಸುವ ಕಾರ್ಯ ಮಾಡಲಾಗುತ್ತಿದೆ. ಎಲ್ಲ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಡೆಂಗೆ ಬಗ್ಗೆ ಅರಿವು ಮೂಡಿಸಲು ಕರಪತ್ರ ಹಂಚುವುದು, ಗ್ರಾಮ ಸಭೆಗಳಲ್ಲಿ ಮಾಹಿತಿ ನೀಡಲು ಸೂಚಿಸಲಾಗಿದೆ.
ಶಾಲೆಗಳಲ್ಲಿ ಮಕ್ಕಳಿಗೆ ಅರಿವು ಮೂಡಿಸುವುದು, ಜಾಥಾ ನಡೆಸುವುದು, ಕರಪತ್ರ ಹಂಚುವುದಕ್ಕೆ ಕ್ರಮಕೈಗೊಳ್ಳಲಾಗಿದೆ. ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಸೊಳ್ಳೆ ನಿಯಂತ್ರಣ ಔಷಧಿ ಸಿಂಪಡಿಸಲು ಸೂಚಿಸಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಜೆ.ಕೃಷ್ಣಮೂರ್ತಿ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ವಿಜಯಕುಮಾರ್, ಕ್ಷೇತ್ರ ಶಿಕ್ಷಣಾಧಿಕಾರಿ ರಮೇಶ್, ಮುಖ್ಯಾಧಿಕಾರಿ ನಾಗೇಂದ್ರ, ಸಿಡಿಪಿಒ ಜ್ಯೋತಿಲಕ್ಷ್ಮಿ, ವೈದ್ಯಾಧಿಕಾರಿ ಡಾ.ಪ್ರೀತಿ, ತಾಲ್ಲೂಕು ಹಿರಿಯ ಆರೋಗ್ಯ ನಿರೀಕ್ಷಕ ಪ್ರಭಾಕರ್ ಮತ್ತಿತರರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.