ADVERTISEMENT

ತಾಯಿ ಹಾಲು ಅಮೃತ ಸಮಾನ: ಶ್ರೀನಿವಾಸ್

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2013, 10:56 IST
Last Updated 5 ಆಗಸ್ಟ್ 2013, 10:56 IST

ಅಜ್ಜಂಪುರ: ತಾಯಿಯ ಎದೆ ಹಾಲು ಅಮೃತ ಸಮಾನ, ಅದಕ್ಕೆ ರೋಗಗಳನ್ನು ದೂರವಿಡುವ ಶಕ್ತಿಯಿದ್ದು, ಹುಟ್ಟಿ ಆರು ತಿಂಗಳವರೆಗೆ ತಾಯಿ ಕಡ್ಡಾಯವಾಗಿ ಹಾಲುಣಿಸುವ ಮೂಲಕ ಮಗುವಿನ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಕಾರಣರಾಗಬೇಕು ಎಂದು ಕುಡ್ಲೂರು ಗ್ರಾ.ಪಂ.ಅಧ್ಯಕ್ಷೆ ಸವಿತಾ ಹೇಳಿದರು.

ಪಟ್ಟಣ ಸಮೀಪದ ಕುಡ್ಲೂರು ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಇತ್ತೀಚೆಗೆ ನಡೆದ ವಿಶ್ವ ಸ್ತನ್ಯಪಾನ ಸಪ್ತಾಹ ಉದ್ಘಾಟಿಸಿ ಅವರು ಮಾತನಾಡಿದರು. ವೈದ್ಯಾಧಿಕಾರಿ ಡಾ.ಶ್ರೀನಿವಾಸ್, ಹೆರಿಗೆ ನಂತರ ತಾಯಿಯಲ್ಲಿ ಬರುವ ಕೊಲೊಸ್ಟ್ರೋಮ್‌ಯುಕ್ತ ಹಳದಿ ಬಣ್ಣದ ಗಿಣ್ಣು ಹಾಲಿನಲ್ಲಿ ಕ್ಯಾಲ್ಸಿಯಂ, ಪ್ರೋಟೀನ್ ಸೇರಿದಂತೆ ಹೆಚ್ಚಿನ ಪೌಷ್ಟಿಕಾಂಶವಿರುತ್ತದೆ. ಜನನದ ಅರ್ಧ ಗಂಟೆಯಲ್ಲಿ ಮಗುವಿಗೆ ಸ್ತನ್ಯಪಾನ ಮಾಡಿಸಿದರೆ ಮಗುವಿನ ದೇಹದಲ್ಲಿ ರೋಗ ನಿರೋಧಕ ಶಕ್ತಿ ಅಧಿಕವಾಗುತ್ತದೆ. ಅಲ್ಲದೇ ಅಪೌಷ್ಟಿಕತೆಯಿಂದ ನರಳುವುದನ್ನು ತಪ್ಪಿಸಬಹುದು ಎಂದರು.

ಮುಂಡ್ರೆ ಗ್ರಾಮದ ಆಯುರ್ವೆದ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ವಿವೇಕಾನಂದ ಬಿರಾದರ್, ಮಗು ಜನಿಸಿದ ಅರ್ಧ ಗಂಟೆಯಲ್ಲಿ ಹಾಲುಣಿಸುವುದರಿಂದ ಮಗುವಿನಲ್ಲಿ ರಕ್ತಹೀನತೆ, ಹೃದಯಘಾತ, ಸ್ಥೂಲಕಾಯ, ಅತಿಸಾರ, ನ್ಯುಮೊನಿಯಾ ರೋಗ ಸಂಭವಿಸುವುದನ್ನು ಕಡಿಮೆ ಮಾಡಬಹುದಾಗಿದೆ ಎಂದರು.

ಆರೋಗ್ಯ ನಿರೀಕ್ಷಕ ಸದಾಶಿವ, ಎದೆ ಹಾಲಿನ ಮಹತ್ವ ತಿಳಿಯದಿರುವುದು, ಅನಕ್ಷರತೆ, ಬಡತನ, ಕ್ಯಾನ್ಸರ್‌ನ ಬಗ್ಗೆ ಅರಿವು ಇಲ್ಲದಿರುವುದರಿಂದ  ಭಾರತದಲ್ಲಿ ಪ್ರತೀ ವರ್ಷ ಸುಮಾರು 1.15ಲಕ್ಷ ಮಹಿಳೆಯರು ಸ್ತನ ಕ್ಯಾನ್ಸರ್‌ಗೆ ಬಲಿಯಾಗುತ್ತಿದ್ದುದ್ದಾರೆ. ಮಗುವಿಗೆ ಹಾಲುಣಿಸುವುದರಿಂದ ಈ ರೋಗವನ್ನು ತಡೆಯಬಹುದು ಎಂದು ತಿಳಿಸಿದರು. ಆರೋಗ್ಯ ಸಹಾಯಕಿ ಗೀತಾ, ಆಶಾ  ಮತ್ತು ಅಂಗನವಾಡಿ ಕಾರ್ಯಕರ್ತೆಯರು, ಗರ್ಭಿಣಿಯರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.