ADVERTISEMENT

ತುಡುಕೂರು: ಗುಡಿಸಲು ಮುಕ್ತ ಎಂದು?

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2011, 10:00 IST
Last Updated 8 ಫೆಬ್ರುವರಿ 2011, 10:00 IST

ತುಡುಕೂರು (ಆಲ್ದೂರು): ವಾಸಯೋಗ್ಯ ಮನೆ, ಹಕ್ಕುಪತ್ರ, ಶುದ್ಧಕುಡಿಯುವ ನೀರು, ಶೌಚಾಲಯ, ರಸ್ತೆ ಹೋಬಳಿಯ ತುಡುಕೂರು ಗ್ರಾಮಕ್ಕೆ ಮರೀಚಿಕೆಯಾಗಿದೆ. ಸುಮಾರು 12ಕ್ಕೂ ಹೆಚ್ಚು ಕುಟುಂಬಗಳು ಈಗಲೂ ಗುಡಿಸಲು ಹೋಲುವ ಬಿಡಾರಗಳಲ್ಲಿ ವಾಸಿಸುತ್ತಿದ್ದಾರೆ.ಪಟ್ಟಣಕ್ಕೆ 2ಕಿ.ಮೀ. ದೂರದಲ್ಲಿರುವ ತುಡುಕೂರು ಗ್ರಾಮದಲ್ಲಿರುವ ಗಿರಿಜನ ಆಶ್ರಮ ಶಾಲೆಗೆ ಹೊಂದಿಕೊಂಡಿರುವ ಕಾಲೊನಿಯಲ್ಲಿ ಒಟ್ಟು 35 ಕುಟುಂಬಗಳು  ಕೂಲಿಯನ್ನೇ ಆದಾಯದ ಮೂಲವನ್ನಾಗಿ ನಂಬಿ ಬದುಕುತ್ತಿದ್ದಾರೆ. 35 ಕುಟುಂಬಗಳ ಮನೆಗಳಲ್ಲಿ ಒಂದೆರೆಡು ಮನೆಗಳನ್ನು ಹೊರತುಪಡಿಸಿ ಉಳಿದಂತೆ ಎಲ್ಲಾ ಮನೆಗಳು ಜೋಪಡಿಯಂತಿವೆ. ಬಿದಿರು, ತೆಂಗಿನಗರಿಗಳ ತಡಿಕೆಗಳೇ ಈ ಅರಮನೆಗಳಿಗೆ ಆಧಾರವಾಗಿರುವ ಗೋಡೆಗಳು.

ಗುಡಿಸಲುಗಳ ಮೇಲೆಯೇ ವಿದ್ಯುತ್ ಮಾರ್ಗ ಹಾದು ಹೋಗಿದೆಯಾದರೂ ಗುಡಿಸಲು ವಾಸಿಗಳ ಪಾಲಿಗೆ ಕತ್ತಲೆ ಆವರಿಸಿದೆ. ಇಲ್ಲಿನ ಬಹುತೇಕ ಮನೆಗಳಿಗೆ ಹಕ್ಕುಪತ್ರ ಇನ್ನೂ ದೊರೆತಿಲ್ಲ.ಇನ್ನು ಕಾಲೊನಿಯಲ್ಲಿ ಶೌಚಾಲಯ ವ್ಯವಸ್ಥೆ ಇಲ್ಲ. ಆಲ್ದೂರು ಗ್ರಾಪಂ ಸಂಪೂರ್ಣ ಗ್ರಾಮನೈರ್ಮಲ್ಯ ಯೋಜನೆಯಡಿ ಕೇಂದ್ರ ಸರ್ಕಾರದ ಪ್ರಶಸ್ತಿ ಪಡೆದಿದೆ. ಆದರೆ ಈ ಕಾಲೊನಿಯಲ್ಲಿನ 5 ಮನೆಗಳ ಹೊರತಾಗಿ ಉಳಿದ ಮನೆಗಳ ಮಕ್ಕಳು, ಮಹಿಳೆಯರು ಶೌಚಾಲಯಕ್ಕಾಗಿ ಅಕ್ಕಪಕ್ಕದ ಪೊದೆಗಳನ್ನೇ ಆಶ್ರಯಿಸಬೇಕಾದ ನರಕಯಾತನೆ ಅನುಭವಿಸುವಂತಾಗಿದೆ.

ಕುಡಿಯುವ ನೀರಿನ ಸಮಸ್ಯೆ ಕಾಲೊನಿಯ ಬಹು ಮುಖ್ಯ ಸಮಸ್ಯೆಯಾಗಿದ್ದು ನೀರಿನ ವ್ಯವಸ್ಥೆಗಾಗಿ ಬಾವಿ ಹಾಗೂ ಸಿಸ್ಟನ್ ಇದೆಯಾದರೂ  ಇದಕ್ಕೆ ಕಲುಷಿತ ನೀರು ಪೂರೈಕೆಯಾಗುತ್ತಿದೆ. ನೀರು ಕುಡಿದವರು ಗಂಟಲು ಕೆರೆತ, ಕೆಮ್ಮು ಮೊದಲಾದ ರೋಗಗಳಿಗೆ ತುತ್ತಾಗುತ್ತಿರುವುದರಿಂದ ನಿವಾಸಿಗಳು ಸಿಸ್ಟ್‌ನ್ ನೀರನ್ನು ಕೇವಲ ಪಾತ್ರೆ, ಬಟ್ಟೆ ತೊಳೆಯಲು ಮಾತ್ರ ಉಪಯೋಗಿಸುವಂತಾಗಿದೆ. ಕುಡಿಯಲು ಕಾಲೊನಿ ಸಮೀಪದ ಕೆರೆಯೊಂದರಿಂದ ಹೊತ್ತು ತರಬೇಕಾಗಿದೆ.

ಕಾಲೊನಿ ಸಂಪರ್ಕಕ್ಕೆ ಆಲ್ದೂರು-ಚಿಕ್ಕಮಗಳೂರು ಹೆದ್ದಾರಿಯಲ್ಲಿ ತುಡುಕೂರು ಬಸ್ ನಿಲ್ದಾಣದಿಂದ ಹರಕಲು ಕಚ್ಚಾರಸ್ತೆ ಇದೆಯಾದರೂ ಡಾಂಬರೀಕರಣಕ್ಕೆ ಕಾಲೊನಿ ನಿವಾಸಿಗಳು ಮನವಿ ಸಲ್ಲಿಸಿ 3 ದಶಕ ಕಳೆದಿದ್ದರೂ ರಸ್ತೆಗೆ ಇನ್ನೂ ಡಾಂಬರೀಕರಣದ ಮೋಕ್ಷ ಮಾತ್ರ ಇನ್ನೂ ಸಿಕ್ಕಿಲ್ಲ.ಕಾಲೊನಿಗಳ ಅನುಕೂಲಕ್ಕಾಗಿ ಇತ್ತೀಚಿಗೆ ಕ್ಷೇತ್ರದ ಶಾಸಕರು 5 ಲಕ್ಷ ವೆಚ್ಚದಲ್ಲಿ ಸಮುದಾಯ ಭವನ ನಿರ್ಮಿಸಲಾಗಿದೆ. ಅದೂ ಕಳಪೆಯಾಗಿರುವುದರಿಂದ ಭವನದ ಮುಂಭಾಗದಲ್ಲಿ ನೆಲಕ್ಕೆ ಹಾಕಲಾಗಿರುವ ಸಿಮೆಂಟ್ ಹಾಸು ಕಿತ್ತುಬರಲಾರಂಬಿಸಿದೆ ಎಂದು ನಿವಾಸಿಗಳು ದೂರುತ್ತಾರೆ. ಕಾಲೊನಿಯ ಕೆಲ ಹಿರಿಯ ಜೀವಗಳು ಸಂಧ್ಯಾಸುರಕ್ಷಾ ಯೋಜನೆಯಡಿ ಅರ್ಜಿ ಹಾಕಿ ವರ್ಷ ಎರಡಾದರೂ ಪ್ರತಿಫಲ ಇನ್ನೂ ದೊರೆತಿಲ್ಲ.

ಪ್ರತಿ 5 ವರ್ಷಕ್ಕೊಮ್ಮೆ ಓಟು ಕೇಳಲು ಬರೋರತ್ರ ನಮ್ ಸಮಸ್ಯೆ ಹೇಳ್ತೀವಿ, ಮಾಡ್ಕೋಡ್ತೀವಿ ಅಂತ ಭರವಸೆ ಕೊಟ್ಟವರು ಗೆದ್ಮೇಲೆ ಮತ್ತೆ ಇತ್ಲಾಗಿ ತಲೆಹಾಕಿಲ್ಲ,  ಮನೆ ಇಲ್ದವರಿಗೆ ಮನೆ ಕಟ್ಟಲು ಜಾಗ, ಆಶ್ರಯ ಮನೆ, ರಸ್ತೆ, ಶೌಚಾಲಯ, ಕುಡಿಯಲು ಶುದ್ಧ ನೀರು ಮಾತ್ರ ಕೇಳ್ತಿದ್ದೀವಿ, ಅಷ್ಟು ಸಿಕ್ರೆ ಸಾಕು ಮತ್ತಿನ್ನೇನು ಬ್ಯಾಡ. ಆದ್ರೆ ಸರ್ಕಾರದವ್ರ ಇದಿಷ್ಟನ್ನೂ ಕೊಡೋಲ್ಲ. ಪಂಚಾಯಿತಿಯವರತ್ರ ಕೇಳುದ್ರೆ ಮನೆ ಬಂದಿಲ್ಲ ಅಂತಾರೆ, ಏನ್ಮಾಡೋದು ಸಾರ್...” ಎಂಬಿತ್ಯಾದಿಯಾಗಿ ತಮ್ಮ ಕಾಲೊನಿ ಸಮಸ್ಯೆಗಳ ಬಗ್ಗೆ  ಮುಗ್ಧವಾಗಿ ಉತ್ತರಿಸುತ್ತಾರೆ ನಿವಾಸಿ ಮಂಜಯ್ಯ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.