ADVERTISEMENT

ತೋಟ ನಾಶ: ಸೂಕ್ತ ಪರಿಹಾರಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 14 ಜೂನ್ 2017, 8:04 IST
Last Updated 14 ಜೂನ್ 2017, 8:04 IST
ಶೃಂಗೇರಿ ತಾಲ್ಲೂಕಿನ ಕೆರೆಕಟ್ಟೆ ಕುದುರೆಮುಖ ವನ್ಯಜೀವಿ ವಿಭಾಗದ ವಲಯ ಅರಣ್ಯಾಧಿಕಾರಿ ಕಚೇರಿ ಎದುರು ಮಂಗಳವಾರ ವಿವಿಧ ಪಕ್ಷಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಶೃಂಗೇರಿ ತಾಲ್ಲೂಕಿನ ಕೆರೆಕಟ್ಟೆ ಕುದುರೆಮುಖ ವನ್ಯಜೀವಿ ವಿಭಾಗದ ವಲಯ ಅರಣ್ಯಾಧಿಕಾರಿ ಕಚೇರಿ ಎದುರು ಮಂಗಳವಾರ ವಿವಿಧ ಪಕ್ಷಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.   

ಶೃಂಗೇರಿ: ಇಲ್ಲಿನ ದ್ಯಾವಂಟು ರಮೇಶ್ ಅವರ ತೋಟ ನಾಶಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ತಾಲ್ಲೂಕಿನ ಕೆರೆಕಟ್ಟೆ ಕುದುರೆಮುಖ ವನ್ಯಜೀವಿ ವಿಭಾಗದ ವಲಯ ಅರಣ್ಯಾಧಿಕಾರಿ ಕಚೇರಿ ಎದುರು ಮಂಗಳವಾರ ವಿವಿಧ ಪಕ್ಷದವರು ಪ್ರತಿಭಟನೆ ನಡೆಸಿದರು.

ರೈತ ಮಾತೊಳ್ಳಿ ಸತೀಶ್ ಮಾತನಾಡಿ, ‘ರೈತರಿಗೆ ಪರಿಹಾರ ನೀಡುವ ವ್ಯವಸ್ಥೆ ಅವೈಜ್ಞಾನಿಕವಾಗಿದೆ. ಅಧಿಕಾರಿಗಳು ಮಾನವೀಯತೆಯಿಂದ ಕಾರ್ಯನಿರ್ವಹಿಸಬೇಕು. ಇಲ್ಲಿ ಅರಣ್ಯ ಇಲಾಖೆ ಹಾಗೂ ಮೌಲ್ಯಮಾಪನ ಸಮಿತಿ ನಡೆಸುವ ಸಮೀಕ್ಷೆಯಿಂದ ರೈತರ ಬದುಕು ವಿನಾಶದತ್ತ ಹೋಗುತ್ತಿದೆ’ ಎಂದು ಅಸಮಾಧಾನ ವ್ಯಕ್ತ ಪಡಿಸಿದರು.

ಜಿಲ್ಲಾ ಪಂಚಾಯಿತಿ ಸದಸ್ಯ ಬಿ.ಶಿವ ಶಂಕರ್ ಮಾತನಾಡಿ, ‘ನಾಲ್ಕು ವಿಧಾನ ಸಭಾ ಕ್ಷೇತ್ರಗಳನ್ನು ಒಳಗೊಂಡ ಕೆರೆಕ ಟ್ಟೆಯ ಜ್ವಲಂತ ಸಮಸ್ಯೆಗಳ ಬಗ್ಗೆ ಎಲ್ಲರೂ ಒಗ್ಗೂಡಿ ಕಾರ್ಯನಿರ್ವಹಿಸಬೇಕು. ಸರ್ಕಾರದ ವ್ಯವಸ್ಥೆಯಲ್ಲಿ ಇರುವ ಮಂತ್ರಿ ಗಳು ಇದರ ಕುರಿತು ಗಂಭೀರವಾಗಿ ಚರ್ಚಿಸಬೇಕು.

ADVERTISEMENT

ಇಲ್ಲಿನ ಸಮಸ್ಯೆಗಳ ಬಗ್ಗೆ ಸರ್ವಪಕ್ಷದವರು ಸೇರಿ ನೇರವಾಗಿ ಅರಣ್ಯ ಹಾಗೂ ಕಂದಾಯ ಸಚಿವರಲ್ಲಿ ಈ ಹಿಂದೆ ಚರ್ಚಿಸಲಾಗಿದೆ. ದ್ಯಾವಂಟು ರಮೇಶ್ ಅವರ ತೋಟ ನಾಶದಿಂದ ಆಗಿರುವ  5 ಕ್ವಿಂಟಲ್ ಅಡಿಕೆಯ ಹಣ ನೀಡಬೇಕು. 2008-13ರ ಪುನರ್ವಸತಿ ಯೋಜನೆಯಡಿಯಲ್ಲಿ ದ್ಯಾವಂಟು ರಮೇಶ್ ಹಾಗೂ 22 ಜನರು ಸಲ್ಲಿಸಿದ ಅರ್ಜಿಗಳನ್ನು ಕೂಡಲೇ ಪರಿಶೀಲನೆ ಮಾಡಿ ಹಣ ನೀಡಬೇಕು’ ಎಂದರು.

ಡಿ.ಸಿ.ಸಿ ಬ್ಯಾಂಕ್‌ ಉಪಾಧ್ಯಕ್ಷ ದಿನೇಶ್ ಹೆಗಡೆ ಮಾತನಾಡಿ, ‘ಪ್ರಕೃತಿ ಯನ್ನು ಆರಾಧಿಸುತ್ತಾ ಇಲ್ಲಿನ ಜನರು ಕೃಷಿಯನ್ನು ನಂಬಿ ಬದುಕು ಕಟ್ಟಿಕೊಂಡಿ ದ್ದಾರೆ. ಇಲಾಖೆಯವರು ಬರುವ ಮೊದ ಲು ಇಲ್ಲಿ ಕಾಡು ಇತ್ತು, ನಾಡು ಇತ್ತು. ಸಾಮಾನ್ಯ ರೈತರ ಬದುಕಿನೊಂದಿಗೆ ಅಧಿಕಾರಿಗಳು ಇಲಾಖೆ ಚೆಲ್ಲಾಟವಾಡುತ್ತಿದ್ದಾರೆ. ಒಂದು ಸಾಕಿ ಬೆಳೆಸುವ ಕಷ್ಟ ಕೃಷಿಕರಿಗೆ ಮಾತ್ರ ಗೊತ್ತು. ವಾರಾಹಿ ಯೋಜನೆಯ ವ್ಯಾಪ್ತಿಯ ಕೃಷಿಕರಿಗೆ ಜೀವನ ನಿರ್ವಹಣೆಗೆ ಬೇಕಾದಷ್ಟು ಪರಿ ಹಾರವನ್ನು ನೀಡಲಾಗಿದೆ. ಅರಣ್ಯ ಉಳಿ ಸಲು ಹೊರಟ ಇಲಾಖೆ ಅವರ ಮನೆಯ ಎದುರು ಎಷ್ಟು ಗಿಡಗಳನ್ನು ಅವರು ನೆಟ್ಟಿದ್ದಾರೆ’ ಎಂದು ಅವರು ಇಲಾಖೆಯ ಅಧಿಕಾರಿಗಳನ್ನು ಪ್ರಶ್ನಿಸಿದರು.

ಸಾಮಾಜಿಕ ಮುಖಂಡ ಎ.ಎಸ್. ನಯನ, ‘40 ವರ್ಷಗಳ ಕೆಳಗೆ ಕೆರೆ ಕಟ್ಟೆಯಲ್ಲಿ ವಾಹನ ಸೌಲಭ್ಯ ವಿರಲಿಲ್ಲ. ಮಳೆಗಾಲಕ್ಕಾಗಿ ಮನೆಗೆ ಬೇಕಾಗುವ ಬೆಲ್ಲ, ಬೆಂಕಿಪೊಟ್ಟಣ, ಉಪ್ಪು, ಬೇಳೆಗ ಳನ್ನು ತರುವುದಕ್ಕೆ 25 ಕಿ.ಮೀ ದೂರದ ಪಟ್ಟಣಕ್ಕೆ ನಡೆದು ಕೊಂಡು ಹೋಗುವ ಸ್ಥಿತಿಯಿತ್ತು. ಮತ್ತೆ ಪೇಟೆಗೆ ಬರುವುದು ದೀಪಾವಳಿಯ ಸಮಯ.

ಈಗ ಪುನರ್ವಸತಿ ಯೋಜನೆಯಡಿ ಸರ್ಕಾರ ನೀಡುವ 50 ಲಕ್ಷದಲ್ಲಿ ತಾಲ್ಲೂಕಿನ ಸುತ್ತಮುತ್ತ 1 ಎಕರೆ ತೋಟ ಹಾಗೂ ಮನೆಕಟ್ಟಲು ಬೇಕಾಗುವ ಸ್ಥಳವನ್ನು ಅರಣ್ಯ ಇಲಾಖೆ  ಖರೀದಿಸಿಕೊಟ್ಟರೆ ನಾವು ಅವರಿಗೆ ಋಣಿ. ಸರ್ಕಾರ ಮಾಡಿದ ಮೌಲ್ಯಮಾಪನಾ ಸಮಿತಿ ಯಲ್ಲಿ ಜನಪ್ರತಿನಿಧಿಗಳು ಇರಬೇಕಾಗಿದೆ. ಇದರ ಬಗ್ಗೆ ಸಂಬಂಧಪಟ್ಟವರು ಚಿಂತಿಸಲಿ. ನಮಗೂ ಸಾಕಾಗಿ ಹೋಗಿದೆ. ಮುಂಬರುವ ಚುನಾವಣೆಯಲ್ಲಿ ನಾವೆಲ್ಲರೂ ಮತದಾನವನ್ನು ಬಹಿಷ್ಕರಿ ಸಲು ನಿರ್ಧರಿಸಿದ್ದೇವೆ’ ಎಂದರು.

ಕೆರೆಕಟ್ಟೆ ರೈತರು, ಸರ್ವಪಕ್ಷದ ಮುಖಂಡರು ಅರಣ್ಯ ಇಲಾಖೆಯ ಅಧಿ ಕಾರಿಗಳೊಂದಿಗೆ ಸುಮಾರು 3 ಗಂಟೆಗಳ ಕಾಲ ಮಾತಿನ ಚಕಮಕಿ ನಡೆಯಿತು. ಜೆಡಿಎಸ್ ಮುಖಂಡ ವೆಂಕಟೇಶ್, ಕಾಂಗ್ರೆಸ್ ಮುಖಂಡ ರಾಜೇಗೌಡ, ಡಾ.ಅಂಶುಮಂತ್, ತಾಲ್ಲೂಕು ಕಾಂಗ್ರೆಸ್ ಘಟಕದ ಅಧ್ಯಕ್ಷ ಮಾರನಕೂಡಿಗೆ ನಟರಾಜ್, ತಾಲ್ಲೂಕು ಬಿಜೆಪಿ ಘಟಕದ ಅಧ್ಯಕ್ಷ ಎಚ್.ಎಸ್.ನಟೇಶ್, ತಾಲ್ಲೂಕು ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಅಂಬ್ಲೂರು ರಾಮಕೃಷ್ಣ, ಸದಸ್ಯರಾದ ಕೆ.ಆರ್.ವೆಂಕಟೇಶ್, ಪ್ರವೀಣ್, ರಮೇಶ್.ಕೆ.ಎಸ್, ಪುಷ್ಪ, ಜಿಲ್ಲಾ ಪಂಚಾಯಿತಿ ಸದಸ್ಯೆ ಶಿಲ್ಪಾರವಿ, ಕೆರೆಕಟ್ಟೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಶೀಲಾ ಗೋಪಾಲಕೃಷ್ಣ, ಪೊಲೀಸ್‌ ಇನ್‌ಸ್ಪೆಕ್ಟರ್‌ ಪ್ರಮೋದ್‌ಕುಮಾರ್ ಹಾಜರಿದ್ದರು. ಜೂನ್ 14 ರಂದು 3 ಗಂಟೆಗೆ ಸರ್ವಪಕ್ಷದವರು ಮೇಲಧಿಕಾರಿಗಳೊಂ ದಿಗೆ ಚರ್ಚಿಸಿ ಸಮಸ್ಯೆಗಳಿಗೆ ಪರಿಹಾರ ನೀಡುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಪ್ರಯತ್ನ ಮಾಡಲಾಗುವ ಬಗ್ಗೆ ನಿರ್ಣಯ ತೆಗೆದುಕೊಳ್ಳಲಾಯಿತು.

* * 

ಮೇಲಧಿಕಾರಿಗಳ ಆದೇಶದಂತೆ ನಡೆದುಕೊಂಡಿದ್ದೇವೆ. ದ್ಯಾವಂಟು ರಮೇಶ್ ಅವರಿಗೆ ಕೂಡಲೇ ಪರಿಹಾರ ನೀಡಲಾಗುವುದು.
ಪ್ರವೀಣ್‌ಕುಮಾರ್
ವಲಯ ಅರಣ್ಯಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.