ADVERTISEMENT

ದೇಶದಲ್ಲಿ ಏಕರೂಪ ಕಾನೂನು ಅಗತ್ಯ

​ಪ್ರಜಾವಾಣಿ ವಾರ್ತೆ
Published 2 ಜುಲೈ 2017, 8:42 IST
Last Updated 2 ಜುಲೈ 2017, 8:42 IST
ಚಿಕ್ಕಮಗಳೂರಿನಲ್ಲಿ ಪಿಡಿಒಗಳಿಗೆ ಶನಿವಾರ ಆಯೋಜಿಸಿದ್ದ ತರಬೇತಿ ಕಾರ್ಯಾಗಾರದಲ್ಲಿ ನ್ಯಾಯಾಧೀಶ ಡಿ.ಕಂಬೇಗೌಡ ಮಾತನಾಡಿದರು.
ಚಿಕ್ಕಮಗಳೂರಿನಲ್ಲಿ ಪಿಡಿಒಗಳಿಗೆ ಶನಿವಾರ ಆಯೋಜಿಸಿದ್ದ ತರಬೇತಿ ಕಾರ್ಯಾಗಾರದಲ್ಲಿ ನ್ಯಾಯಾಧೀಶ ಡಿ.ಕಂಬೇಗೌಡ ಮಾತನಾಡಿದರು.   

ಚಿಕ್ಕಮಗಳೂರು: ಒಂದು ರಾಷ್ಟ್ರ, ಏಕರೂಪ ಕಾನೂನು ಜಾರಿಗೆ ಬರಬೇಕು ಎಂದು ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಡಿ.ಕಂಬೇಗೌಡ ಹೇಳಿದರು.
ರಾಜ್ಯ ಮಕ್ಕಳ ಹಕ್ಕು ರಕ್ಷಣಾ ಆಯೋಗ, ಜಿಲ್ಲಾಡಳಿತ, ಪಂಚಾಯತ್ ರಾಜ್ ಇಲಾಖೆ ಸಹಯೋಗದಲ್ಲಿ ಶನಿ ವಾರ ಜಿಲ್ಲಾ ಪಂಚಾಯಿತಿ ಸಭಾಂಗಣ ದಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ (ಪಿಡಿಒ) ಶನಿವಾರ ಆಯೋಜಿಸಿದ್ದ  ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

16 ವರ್ಷ ತುಂಬಿದ ಸ್ತ್ರೀಯನ್ನು ಮದುವೆ ಮಾಡಲು ಮುಸ್ಲಿಂ ಧರ್ಮದ ಕಾನೂನಿನಲ್ಲಿ ಅವಕಾಶವಿದೆ. ಈ ವಯಸ್ಸಿ ನವರಿಗೆ ಸಂಸಾರದ ಪರಿಕಲ್ಪನೆ ಇರುವು ದಿಲ್ಲ. ಇತರ ಧರ್ಮಗಳಲ್ಲಿ ಮದುವೆ ಯಾಗಲು ಸ್ತ್ರೀಯರಿಗೆ 18 ವರ್ಷ ತುಂಬಿರಬೇಕು. ಬಾಲ್ಯ ವಿವಾಹ ತಡೆಗೆ ದೇಶದಾದ್ಯಂತ ಏಕರೂಪದ ಕಾನೂನು ಜಾರಿಗೊಳಿಸಬೇಕು ಎಂದರು. 
ಅನಾದಿ ಕಾಲದಿಂದಲೂ ಮಕ್ಕಳ ಮೇಲೆ ದೌರ್ಜನ್ಯಗಳೂ ನಡೆಯುತ್ತಿವೆ. ಅದರಲ್ಲಿ ಕೆಲವು ಮಾತ್ರ ಬೆಳಕಿಗೆ ಬರುತ್ತದೆ.

ದೌರ್ಜನ್ಯ ಕಂಡಾಗ ಸಂಬಂಧಪಟ್ಟ ಇಲಾಖೆಗೆ ಮಾಹಿತಿ ನೀಡಬೇಕು. ಪೋಕ್ಸೊ ಕಾಯ್ದೆಯಡಿ ದಾಖಲಾಗುವ ಬಹುತೇಕ ಪ್ರಕರಣಗಳು ವಿಚಾರಣೆ ಹಂತದಲ್ಲಿ ರಾಜಿಯಾಗುತ್ತವೆ ಎಂದು ಹೇಳಿದರು.

ADVERTISEMENT

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಆರ್.ರಾಗಪ್ರಿಯಾ ಮಾತನಾಡಿ, ‘ಬಾಲ್ಯವಿವಾಹ ತಡೆ ನಿಟ್ಟಿನಲ್ಲಿ ಪಿಡಿಒಗಳು ಕ್ರಮ ವಹಿಸಬೇಕು. ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು, ಗ್ರಾಮಸ್ಥರಿಗೆ ಕಾಯ್ದೆ ಬಗ್ಗೆ ಅರಿವು ಮೂಡಿಸಬೇಕು. ಬಾಲ್ಯವಿವಾಹ ಪ್ರಕರಣಗಳು ಗೊತ್ತಾದಾಗ 1098 ಸಹಾಯವಾಣಿಗೆ ಕರೆ ಮಾಡಿ ತಿಳಿಸಬೇಕು’ ಎಂದರು.

ಮಕ್ಕಳ ಹಕ್ಕು ರಕ್ಷಣಾ ವಿಭಾಗದ ಪ್ರಾದೇಶಿಕ ಸಂಯೋಜಕ ರಾಘವೇಂದ್ರ ಭಟ್ ಮಾತನಾಡಿ, ‘2006ರ ಬಾಲ್ಯ ವಿವಾಹ ತಡೆ ಕಾಯ್ದೆ ಅನ್ವಯ ಪಿಡಿಒ, ಗ್ರಾಮಲೆಕ್ಕಿಗ, ಸರ್ಕಾರಿ ಶಾಲೆ ಮುಖ್ಯ ಶಿಕ್ಷಕರು, ಬಾಲ್ಯವಿವಾಹ ಮತ್ತು ಬಾಲ ಕಾರ್ಮಿಕ ಪದ್ಧತಿ ತಡೆಗಟ್ಟುವ ಜವಾಬ್ದಾರಿ ಹೊಂದಿದ್ದಾರೆ. ಜಿಲ್ಲೆಯಲ್ಲಿ ಶೇ 23 ಬಾಲ್ಯ ವಿವಾಹ ನಡೆದಿವೆ. 

ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಪಿಡಿಒಗಳು ಕಾರ್ಮಿಕ ಅಧಿಕಾರಿಯಾಗಿದ್ದಾರೆ. ಬಾಲ್ಯ ವಿವಾಹ ಮಾಡಿದರೆ ಕ್ರಮಕೈಗೊಳ್ಳು ವಂತೆ ಪೊಲೀಸರಿಗೆ ತಿಳಿಸಬೇಕು. ಪಿಡಿಒಗಳು ಪದೇ ಪದೇ ನ್ಯಾಯಾಲಯ ಕ್ಕೆ ತೆರಳುವ ಅಗತ್ಯ ಇಲ್ಲ, ಅಗತ್ಯ ಬಿದ್ದರೆ ಒಂದು ಬಾರಿ ನ್ಯಾಯಾಲಯಕ್ಕೆ ಹಾಜರಾಗಿ ಸಾಕ್ಷಿ ಹೇಳಬೇಕಾಗುತ್ತದೆ’ ಎಂದರು.

ಬಾಲ್ಯವಿವಾಹ, ಬಾಲಕಾರ್ಮಿಕ ಪದ್ಧತಿ, ಮಾನವ ಕಳ್ಳಸಾಗಣೆಯಿಂದ ಅಭಿವೃದ್ಧಿಗೆ ಹಿನ್ನಡೆಯಾಗುತ್ತಿದೆ. ಮಾನವ ಕಳ್ಳಸಾಗಣೆಯಲ್ಲಿ ಭಾರತ ಎರಡನೇ ಸ್ಥಾನದಲ್ಲಿದೆ. ಬಾಲ್ಯವಿವಾಹ ಪ್ರಕರಣಗಳಲ್ಲಿ ರಾಜ್ಯ 3ನೇ ಸ್ಥಾನದಲ್ಲಿದೆ. 2003ರಲ್ಲಿ ಶಿಕ್ಷಣವನ್ನು ಮೂಲಭೂತ ಹಕ್ಕಾಗಿ ಮಾಡಲಾಯಿತು. 2009ರಿಂದ ಅದು ರಾಜ್ಯದಲ್ಲಿ ಜಾರಿಗೆ ಬಂದಿದೆ ಎಂದರು.

ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶ ಬಸವರಾಜ್‌ ಚೇಂಗಟಿ, ಪೊಲೀಸ್ ಎಸ್‌ಜೆಪಿಯು ಕೊಪ್ಪಳ ಘಟಕದ ತರಬೇತುದಾರ ಜಿ.ಸೋಮ ಶೇಖರ್, ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಎಚ್.ಸಿ.ನಟರಾಜ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.