ADVERTISEMENT

ನರಸಿಂಹರಾಜಪುರ: ತಹಶೀಲ್ದಾರ್ -ಪ್ರತಿಭಟನಾಕಾರರ ಮಾತಿನ ಚಕಮಕಿ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2012, 7:45 IST
Last Updated 3 ಅಕ್ಟೋಬರ್ 2012, 7:45 IST

ನರಸಿಂಹರಾಜಪುರ: ಪಟ್ಟಣ ಪಂಚಾಯಿತಿ ಅವ್ಯವಸ್ಥೆಯನ್ನು ಸರಿಪಡಿಸುವಂತೆ ಒತ್ತಾಯಿಸಿ ವಿರೋಧಿ ಸದಸ್ಯರು ಪಟ್ಟಣ ಪಂಚಾಯಿತಿ ಕಚೇರಿಯ ಬಾಗಿಲು ಹಾಕಿ ಮಂಗಳವಾರ ಪ್ರತಿಭಟನೆ ನಡೆಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ಪಟ್ಟಣ ಪಂಚಾಯಿತಿಯಲ್ಲಿ ಮಂಗಳವಾರ ನಡೆದ ಗಾಂಧಿ ಜಯಂತಿ ಕಾರ್ಯಕ್ರಮವನ್ನು ಬಹಿಷ್ಕರಿಸಿದ ವಿರೋಧಿ ಸದಸ್ಯರು, ಅಧ್ಯಕ್ಷರೊಂದಿಗೆ ಕಳೆದ ಹಲವಾರು ತಿಂಗಳಿಂದ ಸಭೆ ಕರೆಯದಿರುವ ಬಗ್ಗೆ, ಜಮಾ, ಖರ್ಚು ನೀಡದಿರುವ ಬಗ್ಗೆ ವಾಗ್ವಾದ ನಡೆಸಿ ಪ್ರತಿಭಟನೆ ನಡೆಸಿದರು.

ಪಟ್ಟಣ ಪಂಚಾಯಿತಿಯಲ್ಲಿ ಪ್ರತಿ ತಿಂಗಳು ಸಭೆ ಕರೆಯಬೇಕೆಂಬ ನಿಯಮವಿದ್ದರೂ ಸಭೆ ಕರೆಯುತ್ತಿಲ್ಲ. ಹಲವುಯೋಜನೆಗಳಲ್ಲಿ ಫಲಾನುಭವಿಗಳಿಗೆ ಸವಲತ್ತು ವಿತರಿಸಲು ನಿರ್ಣಯ ತೆಗೆದು ಕೊಂಡಿದ್ದರೂ ಇದುವರೆಗೆ ವಿತರಣೆಯಾಗಿಲ್ಲಯಾಗಿಲ್ಲ, ಟೆಂಡರ್ ಕರೆಯದೆ ಹಲವು ಕಾಮಗಾರಿಗಳನ್ನು ನಡೆಸಲಾಗು ತ್ತಿದೆ. ಕಾಮಗಾರಿಗಳು ಕಳಪೆಯಾಗಿವೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಈ ಮಧ್ಯೆ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ತಾಲ್ಲೂಕು ಕಾಂಗ್ರೆಸ್ ಘಟಕದ ಸದಸ್ಯರು ಹಾಗೂ ಜೆಡಿಎಸ್ ಮುಖಂಡರು ಸಹ ಪ್ರತಿಭಟನೆಗೆ ಬೆಂಬಲ ಸೂಚಿಸಿದರು. ಈ ಸಂದರ್ಭದಲ್ಲಿ ಆಡಳಿತಾಧಿಕಾರಿ ತಹಶೀಲ್ದಾರ್ ಹಾಗೂ ಪ್ರತಿಭಟನಾಕಾರರ ನಡುವೆ ತೀವ್ರ ಮಾತಿನ ಚಕಮಕಿ ನಡೆಯಿತು. ಟೆಂಡರ್‌ಕರೆಯದೆ ಕಾಮಗಾರಿಯಾಗಿದ್ದರೆ ಅಥವಾ ಆಗಿರುವ ಕಾಮಗಾರಿ ಕಳಪೆಯಾಗಿದ್ದರೆ ಪರಿಶೀಲಿಸಿ ಕ್ರಮತೆಗೆದು ಕೊಳ್ಳುವುದಾಗಿ ತಹಶೀಲ್ದಾರ್ ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂದಕ್ಕೆ ಪಡೆಯಲಾಯಿತು.

ಪ್ರತಿಭಟನೆಯಲ್ಲಿ ಪಟ್ಟಣ ಪಂಚಾಯಿತಿ ವಿರೋಧಿ ಸದಸ್ಯರಾದ ಅಫ್ರೋಜ್, ಸುಕುಮಾರ್, ಲೇಖಾವಸಂತ್, ಅಬ್ದುಲ್ ಸುಬಾನ್, ತಾಲ್ಲೂಕು ಕಾಂಗ್ರೆಸ್ ಘಟಕದ ಅಧ್ಯಕ್ಷ ಡಾ.ಕೆ.ಪಿ.ಅಂಶುಮಂತ್, ಮುಖಂಡರಾದ ಸೇವಿಯಾರ್, ಸುಂದರೇಶ್, ವಸಂತ್‌ಕುಮಾರ್,ಲಕ್ಷ್ಮಣಶೆಟ್ಟಿ, ಅಬುಬಕರ್‌ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಇ.ಸಿ.ಜೋಯಿ  ಮತ್ತಿತರರಿದ್ದರು.

ಸ್ಪಷ್ಟನೆ: ವಿರೋಧ ಪಕ್ಷದ ಸದಸ್ಯರ ಪ್ರತಿಭಟನೆಯ ಬಗ್ಗೆ ಜಂಟಿ ಪತ್ರಿಕಾಗೋಷ್ಠಿ ನಡೆಸಿದ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ರುಕ್ಮಿಣಿಸುರೇಶ್ ಹಾಗೂ ಮಾಜಿ ಅಧ್ಯಕ್ಷ ಬಿ.ಎಸ್.ಆಶೀಶ್ ಕುಮಾರ್ ವಿರೋಧ ಪಕ್ಷದ ಸದಸ್ಯರು ಸಭೆ ಕರೆದಾಗ ಸಾರ್ವಜನಿಕ ವಿಷಯ ಚರ್ಚಿಸದೆ ಕೆಲವ ಗದ್ದಲದೆ ಕಾಲಹರಣ ಮಾಡುತ್ತಾರೆ ಎಂದು ದೂರಿದರು.

ನೂತನ ಮುಖ್ಯಾಧಿಕಾರಿಗಳು ಶೀಘ್ರದಲ್ಲೇ ಅಧಿಕಾರಿ ವಹಸಿಕೊಳ್ಳಲ್ಲಿದ್ದು ಅವರು ಬಂದ ತಕ್ಷಣ ಸಭೆ ಕರೆಯಲಾಗುವುದು. ಕಳಪೆ ಕಾಮಗಾರಿಯಾಗಿದ್ದರೆ ಮೂರನೇ ವ್ಯಕ್ತಿಯಿಂದ ತನಿಖೆಗೆ ಸಿದ್ಧ. ಚುನಾವಣೆ ಸಮೀಪಿಸುತ್ತಿರುವುದರಿಂದ ವಿರೋಧ ಪಕ್ಷದವರ ರಾಜಕೀಯ ಗಿಮಿಕ್ ಆಗಿದೆ. ಅವರ ಆರೋಪಗಳಲ್ಲಿ ಹುರುಳಿಲ್ಲ ಎಂದರು.      

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.