ADVERTISEMENT

ನೈತಿಕ ಮೌಲ್ಯ ಕಣ್ಮರೆ: ಉದಾಸಿ ವಿಷಾದ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2012, 8:30 IST
Last Updated 20 ಫೆಬ್ರುವರಿ 2012, 8:30 IST

ಕಡೂರು: ಆರ್ಥಿಕ, ಶೈಕ್ಷಣಿಕ, ಸಾಮಾಜಿಕ ವಾಗಿ ಪ್ರತಿಯೊಬ್ಬರು ಬದಲಾಗುತ್ತಿದ್ದರೂ, ನೈತಿಕತೆ ಮರೆಯುತ್ತಿದ್ದಾರೆ ಎಂದು ಲೋಕೋಪಯೋಗಿ ಸಚಿವ ಸಿ.ಎಂ.ಉದಾಸಿ ವಿಷಾದ ವ್ಯಕ್ತಪಡಿಸಿದರು.

ತಾಲ್ಲೂಕಿನ ಗಿರಿಯಾಪುರ ಗ್ರಾಮದಲ್ಲಿ ಶನಿವಾರ ನಡೆದ 63 ನೇ ಶಿವಾನುಭವ ಸಮ್ಮೇಳನದ ಅಂಗವಾಗಿ ನೂತನವಾಗಿ ನಿರ್ಮಿಸಿರುವ ಆಶ್ರಮ ಕಟ್ಟಡವನ್ನು ಉದ್ಘಾಟಿಸಿ ಅವರು ಮಾತನಾಡಿದರು. 

ವೈಭವದ ಜೀವನಕ್ಕೆ ಮಾರು ಹೋಗಿ ನಮ್ಮ ನಡೆ -ನುಡಿಗಳಲ್ಲಿ ಬದಲಾವಣೆ ಮಾಡಿಕೊಂಡು ಗ್ರಾಮೀಣ ಪ್ರದೇಶವನ್ನು ನಿರ್ಲಕ್ಷ್ಯ ಮಾಡುತ್ತ್ದ್ದಿದೇವೆ. ಯುವಕರು ಕುಟುಂಬದ ಹಿರಿಯರ ಮಾತುಗಳಿಗೆ ಗೌರವ ನೀಡುವುದನ್ನು ಮೊದಲು ಕಲಿಯ ಬೇಕು. ಗುರು-ಹಿರಿಯರನ್ನು ಗೌರವಿಸ ಬೇಕು ಎಂದರು.  


    ಕಾರ್ಯಕ್ರಮ ಉದ್ಘಾಟಿಸಿದ ಸಾಣೇಹಳ್ಳಿ ಪಂಡಿತಾರಾಧ್ಯ ಶ್ರೀ ಮಾತನಾಡಿ, ಪ್ರಜ್ಞಾವಂತ ಜನರು ಇಂದು ಮೌಲ್ಯಗಳನ್ನು ಅಚರಣೆಗೆ ತರದೆ ಕಂದಾಚಾರ-ಮೌಢ್ಯಗಳತ್ತ ಮಾರು ಹೋಗುತ್ತಿದ್ದಾರೆ. ನುಡಿದಂತೆ ನಡೆಯುವ ಮನೋಬಲವನ್ನು ಬೆಳೆಸಿಕೊಳ್ಳಬೇಕು. ದೇವರ ಒಲುಮೆ ಬೇಕಾದರೆ ಅಂತರಂಗ ಬಹಿರಂಗ ಶುದ್ಧಿಯಾಗಬೇಕು. ಮಡೆ ಸ್ನಾನದಂತಹ ಅನಿಷ್ಟ ಪದ್ಧತಿಗಳು ಸಮಾಜದಿಂದ ತೊಲಗಬೇಕೆಂದು ಕರೆ ನೀಡಿದರು.

ರಾಜ್ಯ ಸಾವಯವ ಕೃಷಿ ಮಿಷನ್‌ನ ಅಧ್ಯಕ್ಷ ಎ.ಎಸ್.ಆನಂದ್ ಮಾತನಾಡಿ, ರೈತರು ಸಾವಯವ ಕೃಷಿಯತ್ತ ಮುಖ ಮಾಡಿದರೆ ಮಾತ್ರ ದೇಶೀಯ ತಳಿಗಳನ್ನು ಉಳಿಸಿ ಬೆಳೆಸಲು ಸಾಧ್ಯ ಎಂದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಡಾ.ವೈ.ಸಿ.ವಿಶ್ವನಾಥ್ ಮಾತನಾಡಿ, ಇಂದು ಎಲ್ಲ ರಂಗಗಳು ಭ್ರಷ್ಟಚಾರದಿಂದ ಕೂಡಿವೆ.  ತಮ್ಮ ಮಕ್ಕಳನ್ನು ಎಂಜಿನಿಯರ್, ವೈದ್ಯ ರನ್ನಾಗಿ  ಮಾಡುತ್ತೇವೆ ಎನ್ನುತ್ತಾರೆಯೇ ಹೊರತು ರೈತನನ್ನಾಗಿ ಮಾಡುತ್ತೇನೆ ಎಂದು ಯಾವೊಬ್ಬ ಕೃಷಿಕನು ಹೇಳಿಕೊಳ್ಳುವುದಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.  

   ಹುಬ್ಬಳ್ಳಿಯ ಮೂರು ಸಾವಿರ ಮಠದ ಗುರುಸಿದ್ಧ ರಾಜಯೋಗೀಂದ್ರ ಸ್ವಾಮಿ, ಕೆ.ಬಿದರೆ ದೊಡ್ಡಮಠದ ಪ್ರಭುಕುಮಾರ ಶಿವಾಚಾರ್ಯ ಸ್ವಾಮಿ, ಬಿಜಕಲ್ ವಿರಕ್ತಮಠದ ಶಿವಲಿಂಗ ಸ್ವಾಮಿಗಳು ಆಶೀರ್ವಚನ ನೀಡಿದರು.
 ಕಾರ್ಯನಿರ್ವಹಣಾ ಸಮಿತಿಯ ಅಧ್ಯಕ್ಷ ಜಿ.ಸಿ.ಸಿದ್ದಪ್ಪ  ಶಿವಾನುಭವ ಸಮ್ಮೇಳನ ನಡೆದು ಬಂದ ದಾರಿಯನ್ನು ಕುರಿತು ಮಾತನಾಡಿದರು. 

ಗಿರಿಯಾಪುರದ ಪ್ರಗತಿಪರ ರೈತ ಕಾಶಿ ನಾಥ್, ಕೃಷಿ ಅಧಿಕಾರಿ ವಿರೂಪಾಕ್ಷ ಬಡಿಗೇರ್, ಮಾಜಿ ಶಾಸಕ ಕೆ.ಬಿ. ಮಲ್ಲಿಕಾರ್ಜುನ್ ಸಮ್ಮೇಳನ ಕುರಿತು ಮಾತನಾಡಿದರು.   ಶಿವಮೊಗ್ಗದ ಶಿವ ಕುಮಾರ ಮಹಾಂತ ಮತ್ತು ಸಂಗಡಿಗರು ವಚನಗಾಯನ ಮತ್ತು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT