ADVERTISEMENT

ಪಕ್ಷಗಳ ಪೈಪೋಟಿ: 7ದಿನದಲ್ಲಿ 25 ಸುದ್ದಿಗೋಷ್ಠಿ!

ರಾಮಕೃಷ್ಣ ಸಿದ್ರಪಾಲ
Published 12 ಮಾರ್ಚ್ 2012, 9:20 IST
Last Updated 12 ಮಾರ್ಚ್ 2012, 9:20 IST

 ಉಡುಪಿ: ಉಡುಪಿ -ಚಿಕ್ಕಮಗಳೂರು ಲೋಕಸಭಾ ಉಪ ಚುನಾವಣೆ ದಿನದಿಂದ ದಿನಕ್ಕೆ ರಾಜಕೀಯ ಪಕ್ಷಗಳ ನಡುವೆ ಹೆಚ್ಚಿನ ಕಾವು ಮೂಡಿಸಿದೆ. ಅಂತಿಮ ತೀರ್ಪು ನೀಡುವ ಮತದಾರರು ತಮ್ಮ ಗುಟ್ಟು ಬಿಟ್ಟುಕೊಡದೇ ಮೌನವಾಗಿದ್ದರೂ ಸಂಬಂಧಪಟ್ಟ ರಾಜಕೀಯ ಪಕ್ಷಗಳ ಮುಖಂಡರು ಊರಿಗೆ ಬಂದಿಳಿದು, ಕಾರ್ಯಕರ್ತರನ್ನು ಹುರಿದುಂಬಿಸಿ, ಪ್ರಚಾರ ಮಾಡಿ ಚುನಾವಣೆಯ ಕಾವು ಹೆಚ್ಚಿಸುತ್ತಿದ್ದಾರೆ.

ನಾಮಪತ್ರ ವಾಪಸ್ ಪಡೆಯಲು ಅಂತಿಮ ದಿನವಾಗಿದ್ದ ಮಾ.3ರಿಂದ ಈವರೆಗೆ ವಿವಿಧ ಪಕ್ಷಗಳ ಮುಖಂಡರು, ಸಚಿವರು, ಮಾಜಿ ಸಚಿವರು, ಕೇಂದ್ರ ಸಚಿವರು, ತಾರೆಯರು ಪ್ರಚಾರಕ್ಕೆ ಆಗಮಿಸಿ ರೋಡ್ ಶೋ ನಡೆಸಿ, ಕೆಲವೆಡೆ ಮನೆ ಮನೆಗೆ ತೆರಳಿ ಮತಯಾಚಿಸಿ ವಾಹನವೇರುತ್ತಿದ್ದಾರೆ. ಮಾ.18ರಂದು ಚುನಾವಣೆ, ಮಾ.16ರ ಸಂಜೆ 5 ಗಂಟೆಗೆ ಬಹಿರಂಗ ಪ್ರಚಾರಕ್ಕೆ ತೆರೆ ಬೀಳಲಿದೆ. ಅಷ್ಟರಲ್ಲಿ ಇನ್ನೂ ಹಲವು ನಾಯಕರು ಮತಯಾಚನೆಗೆ ಬಂದಿಳಿಯಲಿದ್ದಾರೆ.

`ಅಂದು ಇಂದಿರಾಗಾಂಧಿಯವರು ಕಣಕ್ಕಿಳಿದು ಅವರ ರಾಜಕೀಯ ಜೀವನದಲ್ಲಿ ಮಹತ್ವದ ತಿರುವು ತಂದ ಚಿಕ್ಕಮಗಳೂರು ಕ್ಷೇತ್ರವಿದು~ ಎಂದು ಕಾಂಗ್ರೆಸ್ಸಿಗರು ಭಾವನಾತ್ಮಕ ವಿಚಾರವೆನ್ನುವಂತೆ  ಮತಯಾಚಿಸಿದರೆ, `ಇದು ಮುಖ್ಯಮಂತ್ರಿಗಳ ತವರು ಕ್ಷೇತ್ರ. ನಿಮ್ಮ ಮತ ಸದಾನಂದ ಗೌಡರನ್ನು ಮುಖ್ಯಮಂತ್ರಿಯ ಕುರ್ಚಿಗೆ ತಂದು ಕುಳ್ಳಿರಿಸಿದೆ. ನಿಮ್ಮ ಮತದ ಶಕ್ತಿ ಎಷ್ಟು ದೊಡ್ಡದು ಗೊತ್ತೇ? ~ ಎಂದು ಬಿಜೆಪಿ ಮುಖಂಡರು ಹೇಳುತ್ತಿದ್ದಾರೆ.

ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡರು ಕೂಡ ಇನ್ನಷ್ಟು ಭಾವುಕರಾಗಿ ಇದೇ ಮಾತು ಹೇಳಿ ಮತದಾರರನ್ನು ಸೆಳೆಯಲು ಯತ್ನಿಸಿದ್ದಾರೆ. ಅವರ ಸಂಪುಟದ ಹಲವು ಸಚಿವರು ಬಂದು ಮತಯಾಚಿಸಿ ಹೋಗಿದ್ದಾರೆ, ಈ ವಾರದಲ್ಲಿ ಇನ್ನಷ್ಟು ಸಚಿವರು ಬರಲಿದ್ದಾರೆ. 

ಸಾಕಷ್ಟು ಕಾಂಗ್ರೆಸ್ ನಾಯಕರು ಬಂದು ಮತಯಾಚಿಸಿದ್ದಾರೆ. ಕೇಂದ್ರ ಸಚಿವರು, ವಿರೋಧ ಪಕ್ಷ ನಾಯಕರು, ಮಾಜಿ ಸಚಿವರು ಮತಯಾಚಿಸಿ ಸುದ್ದಿಗೋಷ್ಠಿ ನಡೆಸಿಯಾಗಿದೆ. ಜೆಡಿಎಸ್ ಕೂಡ ಈ ವಿಚಾರದಲ್ಲಿ ಹಿಂದಿಲ್ಲ. ತಾರೆಯರ ಹಾವಳಿ ಕಂಡು ಬರದೇ ಇದ್ದರೂ ಮುಂದಿನ ಸೀಮಿತ ದಿನಗಳ ಅವಧಿಯಲ್ಲಿ ಇನ್ನಷ್ಟಯ ನಾಯಕರು ಆಗಮಿಸುವ ನಿರೀಕ್ಷೆ  ಇದೆ~ ಎನ್ನುವುದಾಗಿ ರಾಜಕೀಯ ಪಕ್ಷಗಳು ಹೇಳುತ್ತಿವೆ.
 
ಚರ್ವಿತ-ಚರ್ವಣ ಸುದ್ದಿಗೋಷ್ಠಿಗಳ ಪ್ರಲಾಪ:
ಉಡುಪಿ-ಚಿಕ್ಕಮಗಳೂರು ಚುನಾವಣೆ ಘೋಷಣೆಯಾದ ಬಳಿಕ ನಾಮಪತ್ರ ಸಲ್ಲಿಕೆಯಾಗಿ, ನಾಮಪತ್ರ ವಾಪಸ್ ಬಪಡೆದ ಬಳಿಕ ಹಿಂದೆಂದೂ ನಡೆಯದಷ್ಟು ಪತ್ರಿಕಾಗೋಷ್ಠಿಗಳನ್ನು ಈ ಎಲ್ಲ ರಾಜಕೀಯ ಪಕ್ಷದ ಮುಖಂಡರು ತಮ್ಮ ಪಕ್ಷದ ಕಚೇರಿ, ಪ್ರೆಸ್‌ಕ್ಲಬ್‌ನಲ್ಲಿ ನಡೆಸಿದರು. ಹೇಳಿದ್ದನ್ನೇ ಹೇಳುವ ಚರ್ವಿತಚರ್ವಣ ಪತ್ರಿಕಾಗೋಷ್ಠಿಗಳೇ ವಾರದುದ್ದಕ್ಕೂ ನಡೆದಿವೆ.

ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್, ಜೆಡಿಯು, ಪಕ್ಷೇತರರು ಸೇರಿದಂತೆ ದಿನಕ್ಕೆ ಸರಾಸರಿ ನಾಲ್ಕು ಸುದ್ದಿಗೋಷ್ಠಿಗಳಂತೆ 25 ಕ್ಕೂ ಹೆಚ್ಚು ಸುದ್ದಿಗೋಷ್ಠಿಗಳನ್ನು ಈ ಮುಖಂಡರು ನಡೆಸಿದರು. ಕಾಂಗ್ರೆಸ್ಸಿಗರು ಬಿಜೆಪಿ `ಸಾಧನೆ~ಗಳ ಬಗ್ಗೆ ಜರಿಯುವುದು, ಬಿಜೆಪಿಯವರು ಕಾಂಗ್ರೆಸ್ಸಿಗರ ಸಾಧನೆ ಅಳೆಯುವುದು, ಇವೆರಡರ ಸಾಧನೆಗಳನ್ನು ಜೆಡಿಎಸ್‌ನವರು ಬೆತ್ತಲುಗೊಳಿಸುವುದು...ಈ ಮೂರು ಪಕ್ಷಗಳನ್ನು ನೋಡಿ ಜನ ಬೇಸತ್ತಿದ್ದಾರೆ, ನಮ್ಮದೇ ಗೆಲುವು ಎಂದು ಪಕ್ಷೇತರರು ಬೀಗು ವುದು!...ಇವೇ ಈಗ ಭರದಿಂದ ನಡೆಯುತ್ತಿರುವ ಪ್ರಕ್ರಿಯೆಗಳು.

ಎಲ್ಲರಿಗಿಂತ ಹೆಚ್ಚು ಸುದ್ದಿಗೋಷ್ಠಿಗಳನ್ನು ಕಾಂಗ್ರೆಸ್ ಪಕ್ಷ  ಈವರೆಗೆ ನಡೆಸಿದೆ. ಕೇವಲ ಒಂದು ವಾರದಲ್ಲಿ ಕಾಂಗ್ರೆಸ್ 9, ಬಿಜೆಪಿ  5 , ಜೆಡಿಎಸ್ 5 ಹಾೂಜೆಡಿಯು 3 ಹಾಗೂ  ಪಕ್ಷೇತರರು 3 ಸುದ್ದಿಗೋಷ್ಠಿ ನಡೆಸಿದ್ದಾರೆ.
ಬಹಳಷ್ಟು ಮುಖಂಡರು ನಡೆಸುತ್ತಿರುವ ಸುದ್ದಿಗೋಷ್ಠಿಗಳು ತಾವು ಕೂಡ ಈ ಭಾಗಕ್ಕೆ ಭೇಟಿ ನೀಡಿದ್ದೇವೆ ಎನ್ನುವುದನ್ನು ತೋರಿಸಲು ಸೀಮೀತ. ಇನ್ನು ಕೆಲವರು ತಾವೂ ಒಂದು ಸುದ್ದಿಗೋಷ್ಠಿ ನಡೆಸಬೇಕು ಎಂಬ ಚಲಪಕ್ಕೆ ಸುದ್ದಿಗೋಷ್ಠಿಯಲಿ ಕಾಣಿಸಿಕೊಂಡಿದ್ದಾರೆ.

ನಾಯಕರು ಇಷ್ಟು ದಿನ ಎಲ್ಲಿದ್ದರು?: ಇವೆಲ್ಲವುಗಳ ಜತೆಗೆ ಪ್ರಮುಖ ರಾಷ್ಟ್ರೀಯ ಪಕ್ಷಗಳಿಗೆ ಉಸ್ತುವಾರಿಗಳಾಗಿ ಆಯಾ ಪಕ್ಷದ ಹೈಕಮಾಂಡ್ ನಿಯೋಜಿಸಿದೆ. ಇವರಲ್ಲಿ ಹಲವು ನಾಯಕರು ಸುದ್ದಿಗೋಷ್ಠಿಗೇ ತಮ್ಮ ಉಸ್ತುವಾರಿ ಸೀಮಿತಗೊಳಿಸಿ ಕಾರು ಏರಿ ಮರಳಿದ್ದೂ ಆಗಿದೆ, ಇನ್ನು ಕೆಲ ನಾಯಕರು ಸುದ್ದಿಗೋಷ್ಠಿ ಬಳಿಕ ಮಾಧ್ಯಮದವರ ಬೇಡಿಕೆಗೆ ಅನುಸಾರ ಸಮೀಪದ ಕಾಲೋನಿಗಳಿಗೆ ಹೋಗಿ ಮತಯಾಚಿಸಿ ಫೋಟೋಗಳಿಗೆ ಫೋಸು ನೀಡಿ,ಬೈಟ್ ಕೊಟ್ಟು ಕಾರು ಏರುವ ಕೆಲಸವೂ ಅಚ್ಚುಕಟ್ಟಾಗಿ ನಡೆಸಿದ್ದಾರೆ.

`ಅರೆರೆ ಇಷ್ಟೆಲ್ಲ ನಾಯಕರು ಇಷ್ಟು ದಿನ ಎಲ್ಲಿದ್ದರು ಮಾರಾಯ್ರೆ~ ಎಂದು ಮತದಾರರು ವ್ಯಂಗ್ಯವಾಗಿ ಆಡಿಕೊಳ್ಳುವುದು ಅಲ್ಲಲ್ಲಿ ಕೇಳಿಬರುತ್ತಿತ್ತು. ಹೀಗೆ ಬಂದು, ಹಾಗೆ ಹೋದರೂ ಹಲವರು ಮತಯಾಚನೆಗೆ ಬಂದ, ಎಂದೂ ಕಾಣದೇ ಇದ್ದ ಮುಖಂಡರ ಬಳಿಯೂ ಸಮಸ್ಯೆಗನ್ನು ಹೇಳಿಕೊಳ್ಳುತ್ತಿದ್ದಾರೆ.

 `ನಮ್ಮ ಪಕ್ಷಕ್ಕೆ ಮತ ನೀಡಿ, ನಿಮ್ಮ ಸಮಸ್ಯೆಗಳನ್ನು ನಾವು ಬಗೆ ಹರಿಸುತ್ತೇವೆ~ ಎನ್ನುವ ಭರವಸೆಯನ್ನು ನೀಡುತ್ತ ನಾಯಕರು ಮತ್ತೆ ಕೈಮುಗಿದು ಮುಂದೆ ಸಾಗುವುದು ಒಂದೆಡೆ ನಡೆಯುತ್ತಲೇ ಇದೆ. ನಗರ ಪ್ರದೇಶದಲ್ಲಿ ಅಷ್ಟಾಗಿ ಮೈಕ್‌ಗಳ ಹಾವಳಿ ಇಲ್ಲದೇ  ಪ್ರಚಾರಗಳ ಭರಾಟೆಯೂ ಕಾಣದೇ ಇದ್ದರೂ ಗ್ರಾಮಾಂತರ ಪ್ರದೇಶದ ಕಡೆಗೆ ಮೈಕಾಸುರನ ಹಾವಳಿ ಇದೆ, ಪ್ರಚಾರದ ಭರಾಟೆಯೂ ಇದೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.