ADVERTISEMENT

ಪರೀಕ್ಷೆ ಬರೆದಾಗಿದೆ; ಫಲಿತಾಂಶ ಬರಬೇಕಿದೆ!

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2012, 8:20 IST
Last Updated 20 ಮಾರ್ಚ್ 2012, 8:20 IST

ಚಿಕ್ಕಮಗಳೂರು: ಕಠಿಣ ಅಭ್ಯಾಸ ನಡೆಸಿ ಪರೀಕ್ಷೆ ಬರೆದ ಅಭ್ಯರ್ಥಿಗಳು ಈಗ ಫಲಿತಾಂಶ ಎದುರು ನೋಡುತ್ತಿದ್ದಾರೆ. ಕಳೆದ 20 ದಿನಗಳ ಕಾಲ ಕ್ಷೇತ್ರದಲ್ಲಿ ಕಾಲಿಗೆ ಚಕ್ರ ಕಟ್ಟಿಕೊಂಡಂತೆ ತಿರುಗಿದ್ದ ಚುನಾವಣಾ ಅಭ್ಯರ್ಥಿಗಳು ಮತ್ತು ರಾಜಕೀಯ ಪಕ್ಷಗಳ ಮುಖಂಡರು ಈಗ ತಮ್ಮ ಮನೆಗಳಲ್ಲಿ ಕುಟುಂಬದ ಸದಸ್ಯರನ್ನು ಸೇರಿಕೊಂಡಿದ್ದಾರೆ. ಅಭ್ಯರ್ಥಿಗಳು ತಮ್ಮ ರಾಜಕೀಯ ಭವಿಷ್ಯ ಪ್ರಕಟಿಸುವ ಇದೇ 21ರ ಬುಧವಾರಕ್ಕೆ ಕ್ಷಣಗಣನೆ ಮಾಡುತ್ತಿದ್ದಾರೆ.  ಸಂಸದ ಯಾರಾಗಬಹುದು? ಎಂದು ಮತದಾರರೂ ಕುತೂಹಲದಿಂದ ಎದುರು ನೋಡುತ್ತಿದ್ದಾರೆ.

ರಾಜಕೀಯ ಪಕ್ಷಗಳ ಮುಖಂಡರು, ಕಾರ್ಯ ಕರ್ತರು ತಮ್ಮದೇ ಪಕ್ಷದ ಅಭ್ಯರ್ಥಿಯೇ ಗೆಲ್ಲುವುದು ಎಂದು ವಿಶ್ವಾಸದಿಂದ ಬೀಗು ತ್ತಿದ್ದಾರೆ. ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳ ಯಾವೊಬ್ಬ ಮುಖಂಡರು ಮತ್ತು ಕಾರ್ಯಕರ್ತರರಲ್ಲಿ ಸೋಲಿನ ಮಾತೇ ಬರುವುದಿಲ್ಲ. ಈಗ `ಗೆಲ್ಲುವ ಕುದುರೆ~ ಚುಂಗು ಹಿಡಿದು ಹೊರಟಿರುವವರು ಸದ್ದಿಲ್ಲದೆ ಬೆಟ್ಟಿಂಗ್ ನಡೆಸುತ್ತಿರುವ ಮಾತುಗಳು ಅಲ್ಲಲ್ಲಿ ಕೇಳಿಬರುತ್ತಿವೆ.

ಆಡಳಿತ ಪಕ್ಷ ಬಿಜೆಪಿಗೂ ಕ್ಷೇತ್ರ ಉಳಿಸಿ ಕೊಳ್ಳುವ ಅಗ್ನಿ ಪರೀಕ್ಷೆ ಇದು. ಬಿಜೆಪಿ ಗೆದ್ದರೆ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಅವರ `ಕೈ ಬಲ~ವಾಗುತ್ತದೆ ಎನ್ನುವ ಮಾತುಗಳು ಆ ಪಕ್ಷದ ಪಡಸಾಲೆಯಲ್ಲಿ ಕೇಳಿಬರುತ್ತಿವೆ. ಆಡಳಿತ ಪಕ್ಷಕ್ಕೂ ಗೆಲುವು ಮಹತ್ವದ್ದೆನಿಸಿದೆ.

ಕಾಂಗ್ರೆಸ್‌ನ ಘಟಾನುಘಟಿ ನಾಯಕರು ಕ್ಷೇತ್ರದಲ್ಲೇ 15-20 ದಿನ ಟಿಕಾಣಿ ಹೂಡಿರುವಾಗ ಆ ಪಕ್ಷಕ್ಕೂ ಗೆಲುವು ಬಹಳ ಮುಖ್ಯ ಎನಿಸಿದೆ. ಇದೇ ಮೊದಲ ಬಾರಿಗೆ ಕಾಂಗ್ರೆಸ್ ನಾಯಕರು ಹವಾನಿಯಂತ್ರಿತ ಕಚೇರಿ ಬಿಟ್ಟು ರಸ್ತೆಗಿಳಿದು, ಮತದಾರರ ಮನವೊಲಿಸುವ ಯತ್ನ ಮಾಡಿದ್ದಾರೆ. ಕಾಂಗ್ರೆಸಿನ ನಾಯಕರು ಇಷ್ಟೊಂದು `ಡೌನ್ ಟು ಅರ್ಥ್~ ಕೆಲಸ ಎಂದೂ ಮಾಡಿರಲಿಲ್ಲ ಎಂದೂ ಪಕ್ಷದ ಕಾರ್ಯಕರ್ತರೇ ಹೇಳುತ್ತಿರುವಾಗ ಪಕ್ಷದ ಪುನಶ್ಚೇತನಕ್ಕೆ, ನಾಯಕರ ಚೈತನ್ಯಕ್ಕೆ ಗೆಲುವು ಅನಿವಾರ್ಯವಾಗಿದೆ.

ಇಳಿವಯಸ್ಸಿನ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಯುವಕರನ್ನೂ ನಾಚಿಸುವಂತೆ ಹಳ್ಳಿಗಳನ್ನು ಸುತ್ತಿ, ಪಕ್ಷದ ಅಭ್ಯರ್ಥಿ ಪರ ಪ್ರಚಾರ ನಡೆಸಿದ್ದರು. ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ `ಅಚ್ಚರಿ ಫಲಿತಾಂಶ ಕೊಡುತ್ತೇವೆ. ರಾಷ್ಟ್ರೀಯ ಪಕ್ಷಗಳ ಕಾಲ ಮುಗಿಯಿತು. ಇನ್ನೇನಿದ್ದರೂ ಪ್ರಾದೇಶಿಕ ಪಕ್ಷಗಳ ಕಾಲ~ ಎಂದು ಹೇಳಿ ಕೊಂಡು ಹಳ್ಳಿ ಸುತ್ತಿದ್ದಾರೆ. ಜೆಡಿಎಸ್ ಕೂಡ ಗೆಲುವು ದೊರೆಯಬಹುದೆಂದು ಆಸೆಗಣ್ಣಿನಿಂದ ನೋಡುತ್ತಿದೆ.

ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ಸೋಮವಾರ ಇಡೀ ದಿನ ಖುಷಿಯಿಂದ ಇದ್ದು, ಕಾರ್ಯಕರ್ತರು ಮತ್ತು ಮುಖಂಡರಿಗೆ ಕೃತಜ್ಞತೆ ಸಲ್ಲಿಸುತ್ತ ಕಾಲ ಕಳೆದರು. ಉಡುಪಿ ಯಲ್ಲಿ ಪಕ್ಷದ ಕಚೇರಿಗೂ ಭೇಟಿ ನೀಡಿ, ಸ್ಥಳೀಯ ಮುಖಂಡರೊಂದಿಗೆ ಉಭಯ ಕುಶಲೋಪರಿ ನಡೆಸಿದರು.

`ಈ ಬಾರಿ ನಮಗೆ ಅಲ್ಪ ಸಂಖ್ಯಾತರು, ವೀರಶೈವರು, ಒಕ್ಕಲಿಗರ ಮತಗಳು ಹೆಚ್ಚು ಬಂದಿರುವ ವಿಶ್ವಾಸ ಇದೆ. ಬೆಳಿಗ್ಗೆಯೇ ಮನೆ ಬಳಿ ಬೆಂಬಲಿಗರು ಮತ್ತು ಕಾರ್ಯಕರ್ತರು ಬಂದು ಯೋಗಕ್ಷೇಮ ವಿಚಾರಿ ಸಿದರು. ಅವರ ಕಷ್ಟ-ಸುಖ ಹೇಳಿಕೊಂಡರು. ಖುಷಿಯಲ್ಲಿ ದಿನ ಕಳೆಯುತ್ತಿದ್ದೇನೆ. ಫಲಿತಾಂಶದ ಬಗ್ಗೆ ಯಾವುದೇ ದುಗುಡವಿಲ್ಲದೆ ದಿನಚರಿಯಲ್ಲಿ ತೊಡಗಿದ್ದೇನೆ~ ಎಂದು ಹೆಗ್ಡೆ ಪ್ರತಿಕ್ರಿಯಿಸಿದರು.

ಬಿಜೆಪಿ ಅಭ್ಯರ್ಥಿ ವಿ.ಸುನೀಲ್ ಕುಮಾರ್ `ಪರೀಕ್ಷೆ ಚೆನ್ನಾಗಿ ಬರೆದಿದ್ದೇನೆ. ಕೊಂಚವೂ ಆತಂಕ, ಅಳುಕು ಇಲ್ಲ. ಗೆದ್ದೆ ಗ್ಲ್ಲೆಲುತ್ತೇನೆಂಬ ವಿಶ್ವಾಸವಿದೆ. ಸೋಮವಾರ ಕೂಡ ಉಡುಪಿ ಮತ್ತು ಕಾರ್ಕಳದಲ್ಲಿ ಪಕ್ಷದ ಕಚೇರಿಗೆ ಭೇಟಿ ನೀಡಿ, ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸಿದೆ~ ಎಂದರು.

ಫೆ. 29ರಿಂದ ಮಾರ್ಚ್ 17ರವರೆಗೆ ಚಿಕ್ಕ ಮಗಳೂರು-ಉಡುಪಿ ಜಿಲ್ಲೆಯಲ್ಲಿ ನಿರಂತರವಾಗಿ ಸುತ್ತಿದ್ದೇನೆ. ಇನ್ನಷ್ಟು ಕಾಲಾವ ಕಾಶ ಸಿಕ್ಕಿದ್ದರೆ ಹೆಚ್ಚು ಮತದಾರರನ್ನು ತಲು ಪಲು ಸಾಧ್ಯ ವಾಗುತ್ತಿತ್ತು ಎನಿಸುತ್ತದೆ. ಚಿಕ್ಕಮಗಳೂರು, ಉಡುಪಿಯ ಎಲ್ಲ ವಾರ್ಡ್ ಸುತ್ತಲು ಸಾಧ್ಯವಾಗಲಿಲ್ಲ. ಆದರೆ, ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪ್ರಚಾರ ನಡೆಸಿದ್ದೇನೆ. ಈ ಚುನಾವಣೆ ಮತ್ತಷ್ಟು ಆತ್ಮವಿಶ್ವಾಸ ಮೂಡಿಸಿದೆ~ ಎನ್ನುವುದು ಸುನೀಲ್ ನುಡಿ.

ಇನ್ನೂ ಜೆಡಿಎಸ್ ಅಭ್ಯರ್ಥಿ ಎಸ್.ಎಲ್.ಬೋಜೇಗೌಡ ಸೋಮವಾರ ಬೆಳಿಗ್ಗೆ ನಗು ಮೊಗದಲ್ಲೇ ಪತ್ರಿಕಾಗೋಷ್ಠಿ ನಡೆಸಿದರು. `ನಮ್ಮ ಪಕ್ಷವೂ ಸೇರಿ ರಾಜಕೀಯ ಪಕ್ಷಗಳು ಆತ್ಮಾವಲೋಕನ ಮಾಡಿಕೊಳ್ಳಬೇಕು. ಮತದಾ ರರು ರಾಜಕೀಯ ಪಕ್ಷಗಳ ಮೇಲೆ ವಿಶ್ವಾಸ ಕಳೆದುಕೊಂಡಿರುವುದನ್ನು ಈ ಚುನಾವಣೆಯಲ್ಲಿ ಕಂಡುಕೊಂಡಿದ್ದೇನೆ~ ಎಂದರು.

`ಫಲಿತಾಂಶದ ಬಗ್ಗೆ ಯಾವುದೇ ಜ್ವರ ಇಲ್ಲ. ಬಿಜೆಪಿ, ಕಾಂಗ್ರೆಸ್ ಬಗ್ಗೆ ಮತದಾರರಲ್ಲಿ ಸಿಟ್ಟು ಇದೆ. ಬಿಜೆಪಿ ಮತ್ತು ಕಾಂಗ್ರೆಸ್‌ನ ಸಾಂಪ್ರ ದಾಯಿಕ ಮತಗಳನ್ನು ನಾವು ಹೆಚ್ಚು ಕಸಿದುಕೊಂಡಿದ್ದೇವೆ~ ಎಂದು ವಿಶ್ಲೇಷಿಸಿದರು.

ಜಿಲ್ಲೆಯಲ್ಲಿ ಶೇ 64.10 ಮತದಾನ

ಚಿಕ್ಕಮಗಳೂರು: ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಉಪಚುನಾವಣೆಗೆ ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು ಶೇ.64.10ರಷ್ಟು ಮತದಾನ ನಡೆದಿದೆ.

ಕಳೆದ ಸಂಸತ್ ಚುನಾವಣೆಗೆ ಹೋಲಿಸಿದರೆ ಈ ಬಾರಿ ಮತದಾನ ಪ್ರಮಾಣದಲ್ಲಿ ಕೊಂಚ ಏರಿಕೆ ಆಗಿದೆ. ಶೃಂಗೇರಿ ವಿಧಾನಸಭಾ ಕ್ಷೇತ್ರದಲ್ಲಿ ಜಿಲ್ಲೆಯಲ್ಲೇ ಅತಿ ಹೆಚ್ಚು ಶೇ.73.81ರಷ್ಟು ಮತದಾನ ನಡೆದಿದೆ.

ಮೂಡಿಗೆರೆ ಕ್ಷೇತ್ರದಲ್ಲಿ ಶೇ.64.48, ಚಿಕ್ಕಮಗಳೂರು ಕ್ಷೇತ್ರದಲ್ಲಿ ಶೇ.59.42 ಹಾಗೂ ತರೀಕೆರೆ ಕ್ಷೇತ್ರದಲ್ಲಿ ಶೇ.58.72 ಮತದಾನ ನಡೆದಿದೆ. ಕಳೆದ ಚುನಾವಣೆಯಲ್ಲಿ ಚಿಕ್ಕಮಗಳೂರು ಕ್ಷೇತ್ರದಲ್ಲಿ ಶೇ.61.1ರಷ್ಟು ಮತದಾನ ನಡೆದಿತ್ತು. ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಮತದಾರರ ಕೊಂಚ ನೀರಸ ಪ್ರತಿಕ್ರಿಯೆ ತೋರಿರುವುದು ಕಂಡುಬಂದಿದೆ. ಉಳಿದಂತೆ ಶೃಂಗೇರಿ ಮತ್ತು ಮೂಡಿಗೆರೆ ಕ್ಷೇತ್ರದಲ್ಲಿ ಮತದಾರರು ಉತ್ತಮ ಪ್ರತಿಕ್ರಿಯೆ ತೋರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.