ADVERTISEMENT

ಪಶ್ಚಿಮಘಟ್ಟ ಗಿರಿಶ್ರೇಣಿಯಲ್ಲಿ ಭೂಕುಸಿತ ವ್ಯಾಪಕ

​ಪ್ರಜಾವಾಣಿ ವಾರ್ತೆ
Published 15 ಜೂನ್ 2011, 10:55 IST
Last Updated 15 ಜೂನ್ 2011, 10:55 IST

ಚಿಕ್ಕಮಗಳೂರು: ಜಗತ್ತಿನ 25 ಅತ್ಯಂತ ಸೂಕ್ಷ್ಮಪ್ರದೇಶಗಳಲ್ಲಿ ಒಂದೆನಿಸಿರುವ ಜಿಲ್ಲೆಯ ಪಶ್ಚಿಮಘಟ್ಟಗಳ ಚಂದ್ರದ್ರೋಣ ಶ್ರೇಣಿಯ ಮುಳ್ಳಯ್ಯನಗಿರಿ, ದತ್ತಾತ್ರೇಯ ಪೀಠ, ಮಾಣಿಕ್ಯಧಾರ, ಕೆಮ್ಮಣ್ಣುಗುಂಡಿ ಗಿರಿಸಾಲುಗಳಲ್ಲಿ ಅದರ ನೈಜತೆಗೆ ಧಕ್ಕೆಯಾಗುವಂತಹ ಅನೇಕ ಯೋಜನೆಗಳನ್ನು ಕೈಗೊಂಡ ಪರಿಣಾಮ ಅಲ್ಲಿ ಭೂಕುಸಿತ  ವ್ಯಾಪಕವಾಗಿ ಸಂಭವಿಸುತ್ತಿದೆ.

ಪರಿಸರ ಸಂಘಟನೆಗಳು ಮತ್ತು ಪರಿಸರಾಸಕ್ತರು ವಿರೋಧದ ನಡುವೆಯೂ ಕಳೆದ 2007-08ರಲ್ಲಿ ಗಿರಿಪ್ರದೇಶದ ರಸ್ತೆಗಳನ್ನು ಜಿಲ್ಲಾಡಳಿತ ವಿಸ್ತರಿಸಿತ್ತು. ಗಿರಿಪ್ರದೇಶವು ಹಿಮಾಲಯ ಪರ್ವತ ಶ್ರೇಣಿಗಳಿಗಿಂತ ಮೊದಲೇ ರೂಪುಗೊಂಡಿವೆ. ಈ ಪ್ರದೇಶವು ಅತ್ಯಂತ ಸೂಕ್ಷ್ಮ ಪ್ರದೇಶದ ತಾಣವಾಗಿದೆ. ಇಲ್ಲಿನ ಜೀವವೈವಿಧ್ಯ ಅತ್ಯಂತ ಶ್ರೇಷ್ಠತೆಯಿಂದ ಕೂಡಿದೆ. ಇಂತಹ ಪರಿಸರದಲ್ಲಿ ರಸ್ತೆ ವಿಸ್ತರಣೆ ಮಾಡಬಾರದು.

ಅದರ ಬದಲು ಡಾಂಬರ್ ರಸ್ತೆ ಅಭಿವೃದ್ಧಿಪಡಿಸಬಹುದು ಎನ್ನುವ ಸಲಹೆ ವ್ಯಕ್ತವಾಗಿದ್ದವು. ಇದ್ಯಾವುದನ್ನು ಲೆಕ್ಕಿಸದೇ ರಸ್ತೆ ವಿಸ್ತರಿಸಲಾಗಿತ್ತು. ಇದರ ಪರಿಣಾಮ ಕಳೆದ ಮೂರು ವರ್ಷಗಳಿಂದ ಮಳೆಗಾಲದಲ್ಲಿ ಗಿರಿ ಘಟ್ಟಪ್ರದೇಶದಲ್ಲಿ ಭೂಕುಸಿತ ನಿರಂತರವಾಗಿ ಸಂಭವಿಸುತ್ತಿದೆ ಎಂದು  ವನ್ಯಜೀವಿ ಕಾರ್ಯಕರ್ತ ಜಿ.ವೀರೇಶ್ ದೂರಿದ್ದಾರೆ.

ಬೃಹತ್ ಯಂತ್ರಗಳ ಮೂಲಕ ರಸ್ತೆ ವಿಸ್ತರರಿಸಿದ್ದು, ಪರಿಸರ ಪವಾಸೋದ್ಯಮ ಹೆಸರಿನಲ್ಲಿ ಬರುತ್ತಿರುವ ಯೋಜನೆಗಳು, ಕೆಮ್ಮಣ್ಣು ಗುಂಡಿ ಗಣಿಗಾರಿಕೆ, ದತ್ತಪೀಠ ಪ್ರದೇಶದಲ್ಲಿ ಕೈಗೊಂಡ ಕಾಮಗಾರಿಗಳು, ಶೋಲಾ ಕಾಡುಗಳ ಒತ್ತುವರಿ ಮತ್ತು ಮರಕಡಿತಲೆ ಭೂಕುಸಿತಕ್ಕೆ ಪ್ರಮುಖ ಕಾರಣವಾಗಿವೆ ಎಂದು ಅವರು ಆಪಾದಿಸಿದ್ದಾರೆ.

ರಸ್ತೆ ವಿಸ್ತರಣೆಗೆ ಸಾಕಷ್ಟು ಶೋಲಾ ಅರಣ್ಯಗಳ ಪ್ರದೇಶವು ಬಲಿಯಾಗಿತ್ತು. ಜತೆಗೆ ಸಾಕಷ್ಟು ಮರಗಳು ಕೂಡ ನಾಶವಾಗಿದ್ದವು. ಮೂರ‌್ನಾಲ್ಕು ದಿನಗಳ ಹಿಂದೆ ಅತ್ತಿಗುಂಡಿ ಮಾರ್ಗದ ಏರ್‌ಪೀನ್ ಕಟ್ ತಿರುವಿನ ರಸ್ತೆ ಬದಿಯ ಬೃಹತ್ ನೇರಳೆ ಮರ ಹನನವಾಗಿದೆ.

ಕಳೆದ ವರ್ಷ ನಡೆದ ರಸ್ತೆ ವಿಸ್ತರಣೆಯಿಂದಾಗಿ ಈ ಮರವು ರಸ್ತೆ ಬದಿಗೆ ಬರುವಂತಾಯಿತು. ಈಗ ಏಕಾಏಕಿ ಮರವನ್ನು ಕಡಿದುಹಾಕಲಾಗಿದೆ. ಮರ ಕಡಿಯಲು ಅರಣ್ಯ ಇಲಾಖೆ ಅನುಮತಿ ನೀಡಿ ದೆಯೇ? ಮರ ಕಡಿದವರ‌್ಯಾರು? ಮರ ಕಡಿದವರ ವಿರುದ್ಧ ಅರಣ್ಯ ಇಲಾಖೆ ಕ್ರಮ ಕೈಗೊಳ್ಳು ತ್ತದೆಯೇ? ಎಂಬುದನ್ನು ಅಧಿಕಾರಿಗಳು ಸ್ಪಷ್ಟಪಡಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.