ADVERTISEMENT

ಪ್ರವಾಸಿ ಬಾಡಿಗೆ ಜೀಪುಗಳ ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 16 ಜುಲೈ 2017, 5:22 IST
Last Updated 16 ಜುಲೈ 2017, 5:22 IST
ಜಿಲ್ಲಾ ಮೈದಾನದಲ್ಲಿ ಜಿಲ್ಲಾಧಿಕಾರಿ ಜಿ.ಸತ್ಯವತಿ ಅವರು ವಾಹನಗಳ ತಪಾಸಣೆ ನಡೆಸಿ ಚಾಲಕರೊಂದಿಗೆ ಮಾತನಾಡಿದರು
ಜಿಲ್ಲಾ ಮೈದಾನದಲ್ಲಿ ಜಿಲ್ಲಾಧಿಕಾರಿ ಜಿ.ಸತ್ಯವತಿ ಅವರು ವಾಹನಗಳ ತಪಾಸಣೆ ನಡೆಸಿ ಚಾಲಕರೊಂದಿಗೆ ಮಾತನಾಡಿದರು   

ಚಿಕ್ಕಮಗಳೂರು: ಜಿಲ್ಲೆಯ ಮುಳ್ಳಯ್ಯನ ಗಿರಿ, ಬಾಬಾಬುಡನ್‌ಗಿರಿ ಮೊದಲಾದ ಪ್ರವಾಸಿ ತಾಣಗಳಿಗೆ ಪ್ರವಾಸಿಗರನ್ನು ಕರೆದೊಯ್ಯುವ ಬಾಡಿಗೆ ಜೀಪುಗಳ ಸ್ಥಿತಿ, ವಿಮೆ, ಪರವಾನಗಿ, ದಾಖಲೆ ಮೊದ ಲಾದವನ್ನು ಜಿಲ್ಲಾಧಿಕಾರಿ ಜಿ.ಸತ್ಯವತಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ಅಣ್ಣಾಮಲೈ ಪರಿಶೀಲಿಸಿದರು.

ನಗರದ ಜಿಲ್ಲಾ ಮೈದಾನದಲ್ಲಿ ಶನಿವಾರ ವಾಹನಗಳನ್ನು ಪರಿಶೀಲಿಸಿದ ನಂತರ ಸತ್ಯವತಿ ಸುದ್ದಿಗಾರರೊಂದಿಗೆ ಮಾತನಾಡಿ, ‘ಬಹಳಷ್ಟು ವಾಹನಗಳಿಗೆ ವಿಮೆ ಮಾಡಿಸಿಲ್ಲ. ಪ್ರವಾಸಿಗರಿಗೆ ತೊಂದರೆಯಾಗುತ್ತಿದೆ ಎಂದು ದೂರುಗಳಿದ್ದವು. ಕೆಲವು ವಾಹನಗಳು ಹಳದಿ ಫಲಕ (ಬಾಡಿಗೆ ವಾಹನ) ಹೊಂದಿಲ್ಲ. ಹೀಗಾಗಿ, ಪ್ರವಾಸಿ ಬಾಡಿಗೆ ವಾಹನಗಳ ಚಾಲಕರ ಸಭೆ ನಡೆಸಲಾಗಿತ್ತು. ವಾಹನಗಳನ್ನು ತಪಾಸಣೆಗೆ ತರಲು ಸೂಚಿಸಲಾಗಿತ್ತು’ ಎಂದು ತಿಳಿಸಿದರು.

‘ಪ್ರವಾಸಿಗರ ಸುರಕ್ಷತೆ ನಿಟ್ಟಿನಲ್ಲಿ ಕ್ರಮ ವಹಿಸಲಾಗುತ್ತಿದೆ. ವಾಹನ ಸುಸ್ಥಿತಿಯಲ್ಲಿ ಇಲ್ಲದಿದ್ದರೆ ಸಮಸ್ಯೆಯಾಗುತ್ತದೆ. ಈಗ ಪರಿಶೀಲನೆಗೆ 48 ವಾಹನಗಳು ಬಂದಿವೆ. ಕೆಲ ವಾಹನಗಳು ಗ್ಯಾರೇಜ್‌ನಲ್ಲಿವೆ. ಮತ್ತೆ ಕೆಲವು ಅತ್ತಿಗುಂಡಿಯಲ್ಲಿ ಇವೆ ಎಂದು ಗೊತ್ತಾಗಿದೆ. ಇನ್ನೊಮ್ಮೆ ತಪಾಸಣೆ ಪ್ರಕ್ರಿಯೆ ಮಾಡುತ್ತೇವೆ’ ಎಂದು ಹೇಳಿದರು.

ADVERTISEMENT

‘ಮನಬಂದಂತೆ ಬಾಡಿಗೆ ದರ ವಿಧಿಸಲು ಅವಕಾಶ ನೀಡುವುದಿಲ್ಲ. ಬಾಡಿಗೆ ದರವನ್ನು ನಿಗದಿಪಡಿಸಲಾಗು ವುದು. ಕೆಲವು ಬೇರೆ ರಾಜ್ಯದ ನೋಂದಣಿ ಸಂಖ್ಯೆ ಇರುವ ವಾಹನಗಳು ಇವೆ. ಈ ವಾಹನಗಳಿಗೆ ಸಂಬಂಧಿಸಿ ದಂತೆ ಕಾನೂನು ಕ್ರಮ ಜರುಗಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ದೇನೆ’ ಎಂದು ತಿಳಿಸಿದರು. 

ಸಾರಿಗೆ ಅಧಿಕಾರಿಗಳು ವಾಹನಗಳ ಸ್ಥಿತಿಗತಿ, ದಾಖಲೆಗಳನ್ನು ಪರಿಶೀಲನೆ ಮಾಡಲು ನಿರ್ದೇಶನ ನೀಡಿದ್ದೇನೆ. ಹಳದಿ ಬಣ್ಣದ ಫಲಕ ಅಳವಡಿಸಿ ಕೊಳ್ಳಲು ಒಂದು ತಿಂಗಳು ಗಡುವು ನೀಡಲಾಗಿದೆ. ಆದರೆ, ಚಾಲಕರು ಇದಕ್ಕೆ ಎರಡು ತಿಂಗಳು ಕಾಲಾವಕಾಶ ನೀಡುವಂತೆ ಕೋರಿದ್ದಾರೆ’ ಎಂದರು. ಪ್ರಾದೇಶಿಕ ಸಾರಿಗೆ ಅಧಿಕಾರಿ ಶಶಿಕಲಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.