ADVERTISEMENT

ಪ್ರಾದೇಶಿಕ ಭಾಷೆ ತಿರಸ್ಕರಿಸದಿರಿ

​ಪ್ರಜಾವಾಣಿ ವಾರ್ತೆ
Published 6 ಜುಲೈ 2012, 5:25 IST
Last Updated 6 ಜುಲೈ 2012, 5:25 IST
ಪ್ರಾದೇಶಿಕ ಭಾಷೆ ತಿರಸ್ಕರಿಸದಿರಿ
ಪ್ರಾದೇಶಿಕ ಭಾಷೆ ತಿರಸ್ಕರಿಸದಿರಿ   

ಚಿಕ್ಕಮಗಳೂರು:  ಆಂಗ್ಲಭಾಷಾ ವ್ಯಾಮೋಹದಿಂದ ಪ್ರಾದೇಶಿಕ ಭಾಷೆ ಅವಸಾನದ ಅಂಚು ತಲುಪುತ್ತಿದೆ. ಸಾರ್ವಜನಿಕರು ಎಚ್ಚೆತ್ತುಕೊಂಡು ಕನ್ನಡ ಭಾಷೆ ಉಳಿವಿಗೆ ಮುಂದಾಗಬೇಕೆಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಮನವಿ ಮಾಡಿದರು.

ನಗರದಲ್ಲಿ ಗುರುವಾರ ನಡೆದ ಮಲೆ ನಾಡು ವಿದ್ಯಾಸಂಸ್ಥೆಯ ಸುಂದರಮ್ಮ ಶಂಕರಮೂರ್ತಿ ಪದವಿ ಪೂರ್ವ ಕಾಲೇಜಿನ 2012-13ನೇ ಸಾಲಿನ ವಿದ್ಯಾರ್ಥಿ ಸಂಘದ ಪಠ್ಯ, ಪಠ್ಯೇತರ ಚಟುವಟಿಕೆಗಳ ಸಮಾರಂಭ ಉದ್ಘಾ ಟಿಸಿ, ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪುರಸ್ಕರಿಸಿ ಮಾತನಾಡಿದರು.

ನಾಡಿನ ಸಂಸ್ಕೃತಿ ಅಳಿದರೆ ಉಳಿಸಿಕೊಳ್ಳಲಾಗದು. ಕನ್ನಡ ಭಾಷೆಯನ್ನು ತಾತ್ಸಾರದಿಂದ ನೋಡುವುದು, ಉದಾಸೀನ ಮನೋಭಾವ ತಾಳು ವುದನ್ನು ಮೊದಲು ನಿಲ್ಲಿಸಬೇಕು. ರಾಜ್ಯದ 19 ಜಿಲ್ಲೆಗಳಲ್ಲಿ ಕನ್ನಡವೇ ಇಲ್ಲದಂತಾಗುತ್ತಿದೆ. ಬೆಂಗಳೂರಿನಲ್ಲಿ ಕನ್ನಡ ಹುಡುಕುವ ಸ್ಥಿತಿ ಬಂದೊದಗಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಕನ್ನಡ ಭಾಷೆ ಉಳಿದಿರುವುದು ನಗರ ಮತ್ತುಪಟ್ಟಣ ಪ್ರದೇಶಗಳಲ್ಲಿ ಅಲ್ಲ, ಗ್ರಾಮೀಣ ಭಾಗದಲ್ಲಿ ಕನ್ನಡ ಉಳಿದಿದೆ. ನಾಡಿನ ಸೊಗಡು, ಪ್ರಾದೇಶಿಕ ಭಾಷೆ ತಿರಸ್ಕರಿಸುತ್ತಿದ್ದೇವೆ, ಇದು ತರವಲ್ಲ. ಕನ್ನಡದವರ ಮೇಲೆ ದಬ್ಬಾಳಿಕೆ ಮಾಡಿ ಬದುಕ ಬಹುದೆನ್ನುವ ಸ್ಥಿತಿ ನಿರ್ಮಾಣವಾಗಿದೆ. ಅದಕ್ಕೆ ಅವಕಾಶ ಮಾಡಿಕೊಡಬಾರದು ಎಂದು ಕೋರಿದರು.

ದೇಶಕ್ಕೆ ಅನ್ನ ನೀಡುವ ರೈತರಿಗೆ ಸಿಗದ ಸಂಪರ್ಕ ಭಾಷೆ ಈ ನೆಲದಲ್ಲಿ ಇರಬೇಕೆ? ಕನ್ನಡ ಭಾಷೆ ಅಭಿವೃದ್ಧಿಗೆ ಒತ್ತು ನೀಡು ವುದೇ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮುಖ್ಯ ಕೆಲಸವಾಗಿದೆ. ಪ್ರತಿಯೊಬ್ಬರು ಕನ್ನಡ ಭಾಷೆ ಪ್ರೀತಿಸಿ ಅದನ್ನು ಉಳಿಸಿ ಬೆಳೆಸುವ ಕೆಲಸಕ್ಕೆ ಮುಂದಾಗಬೇಕು. ಹಠ, ಛಲ, ಭಕ್ತಿ ಮತ್ತು ಗುರಿ ಹೊಂದಿದಾಗ ಸಾಧಿಸಬಹುದು ಎಂದು ಕಿವಿಮಾತು ಹೇಳಿದರು.

ಸಮಾರಂಭದಲ್ಲಿ ಶಿಕ್ಷಕರೊಬ್ಬರು ಮಾತನಾಡಿ, ಚಂದ್ರು ಅವರಿಗೆ ಮುಖ್ಯಮಂತ್ರಿ ಸ್ಥಾನ ಸಿಗಲಿ ಎಂದಾಗ, `ಆ ಕುರ್ಚಿ ಮುಳ್ಳಿನಿಂದ ಕೂಡಿದೆ. ನೀವೇ ನೋಡುತ್ತಿದ್ದೀರಿ ಏನೆಲ್ಲ ನಡೆಯುತ್ತಿದೆ. ನಾನು ಶಾಶ್ವತ ಮುಖ್ಯಮಂತ್ರಿ ಆಗಿದ್ದೇನೆ, ಅದೇ ಸಾಕು. ಮಾಜಿ ಮುಖ್ಯಮಂತ್ರಿ ಆಗೋದಿಲ್ಲ~ ಎಂದು ಹೇಳುವ ಮೂಲಕ ಮುಖ್ಯಮಂತ್ರಿ ಚಂದ್ರು ಹಾಸ್ಯಚಟಾಕಿ ಹಾರಿಸಿದರು.

`ನಾನಿನ್ನು ನಿಮ್ಮಂತೆ ವಿದ್ಯಾರ್ಥಿ. 1975ರಲ್ಲೇ ಎಲ್‌ಎಲ್‌ಬಿ ಸೇರಿದೆ. ಆದರೆ ಇನ್ನೂ ಪಾಸಾಗಿಲ್ಲ. ಕಾರಣ ಹೆಚ್ಚು ಸಮಯ ಅಲ್ಲೆ ಇದ್ದರೆ ಅನುಭವ ಸಿಗುತ್ತದೆ ಎಂದು ತಿಳಿದು ಅಲ್ಲೆ ಉಳಿದಿರುವೆ~ ಎಂದಾಗ ವಿದ್ಯಾರ್ಥಿಗಳು ನಗೆಗಡಲಿನಲ್ಲಿ ತೇಲಿದರು. ವಿದ್ಯಾಸಂಸ್ಥೆ ಗೌರವ ಕಾರ್ಯದರ್ಶಿ ಡಿ.ಎಲ್.ವಿಜಯಕುಮಾರ್, ಸಹಕಾರ್ಯದರ್ಶಿ ಎಸ್.ಶ್ರೀಧರ್, ಆಡಳಿತ ಮಂಡಳಿ ಸದಸ್ಯರಾದ ಶ್ರೀದೇವಿ, ಜಯಶ್ರೀ ಜೋಷಿ, ಕಾಲೇಜು ವ್ಯವಸ್ಥಾಪಕಿ ಶಾಂತ ಕುಮಾರಿ, ಕಾಲೇಜು ಪ್ರಾಂಶುಪಾಲರಾದ ಜಿ.ಪಿ.ಪುಷ್ಪಲತಾ, ಉಪನ್ಯಾಸಕ ಕಾರ್ಯದರ್ಶಿ ಕೆ.ಎಚ್.ಚಂದ್ರಶೇಖರ ಆರಾಧ್ಯ, ವಿದ್ಯಾರ್ಥಿ ಸಂಘದ ಉಪಾ ಧ್ಯಕ್ಷೆ ಅಕ್ಷತಾ ಭಾರ್ಗವ್, ಕಾರ್ಯದರ್ಶಿ ಪೂಜಾ ಜೈನ್, ಸಾಂಸ್ಕೃತಿಕ ಕಾರ್ಯದರ್ಶಿ ಬಿ.ಎ. ಅನುಷಾ, ಕ್ರೀಡಾಕಾರ್ಯದರ್ಶಿ ಸಿ.ಎ.ಪೂಜಾ ಇನ್ನಿತರರು ಇದ್ದರು.

ಪುರಸ್ಕಾರ: ದ್ವಿತೀಯ ಪಿಯು ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ಕೆ.ಆರ್.ಸ್ನೇಹಾ, ಶಿಲ್ಪಾಶ್ರೀ, ಪಿ.ಪ್ರೀತಿ, ಶಹಸ್ತಾ ಸಮ್ರಿನ್, ನಿಕಿಲ್ ಕಶ್ಯಪ್, ಎನ್.ಶಾಲಿನಿ, ರೇಷ್ಮಾ, ಕಾವ್ಯಶ್ರೀ, ಇಂಪನ, ಸೌಮ್ಯ ಪೈ, ನಮನ, ಮೇಘ ಭಾರಾದ್ವಾಜ್, ವಸುಂಧರ ಭಾರಾದ್ವಾಜ್, ವಿಷ್ಣುಪ್ರಿಯ ಅವರಿಗೆ ನಗದು ಬಹುಮಾನ ನೀಡಿ ಪುರಸ್ಕರಿಸಲಾಯಿತು.


ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗಾಗಿ ದೆಹಲಿಗೆ ನಿಯೋಗ: ಚಂದ್ರು
ಚಿಕ್ಕಮಗಳೂರು:  ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ಒತ್ತಾಯಿಸಿ ದೆಹಲಿಗೆ ನಿಯೋಗ ತೆರಳಲಾಗುವುದು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ತಿಳಿಸಿದರು.

 ನಗರಕ್ಕೆ ಆಗಮಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಈ ವಿಷಯ ಕುರಿತು ರಾಜ್ಯಸಭೆ ಮತ್ತು ಲೋಕಸಭೆಯಲ್ಲಿ ಚರ್ಚೆ ನಡೆಸುವಂತೆ ಎಲ್ಲ ಸಂಸದರಿಗೂ ಪತ್ರ ಬರೆಯಲಾಗುವುದು. ಕೇಂದ್ರ ಶಿಕ್ಷಣ ಸಚಿವರೊಂದಿಗೆ ಈ ಕುರಿತು ಚರ್ಚೆ ನಡೆಸುವುದಾಗಿ ಹೇಳಿದರು.

ಶಿಕ್ಷಣ ಹಕ್ಕು ಕಾಯ್ದೆ ಅನ್ವಯ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಅಲ್ಪಸಂಖ್ಯಾತರಿಗೆ ಶೇ.25ರಷ್ಟು ಪ್ರವೇಶ ನೀಡಬೇಕು. ಈ ಕಾಯ್ದೆಯಡಿ ಅಲ್ಪಸಂಖ್ಯಾತರ ಶಿಕ್ಷಣ ಸಂಸ್ಥೆಗಳನ್ನು ಹೊರತುಪಡಿಸಿರುವುದನ್ನು ಗಮನಿಸಿದರೆ ತಾರತಮ್ಯ ನೀತಿ ಅನುಸರಿಸಿದಂತಾಗುತ್ತದೆ ಹಾಗಾಗಿ ಸರ್ಕಾರಕ್ಕೆ ಪತ್ರ ಬರೆಯಲಾಗುವುದು ಎಂದರು.

ಆರನೇ ತರಗತಿಯಿಂದ ಆಂಗ್ಲ ಮಾಧ್ಯಮ ಶಾಲೆ ಆರಂಭಿಸಿರುವ ಕುರಿತು ಗಮನ ಸೆಳೆದಾಗ, ಇದನ್ನು ಸಾರಸಗಟಾಗಿ ತಿರಸ್ಕರಿಸುವುದು ಸೂಕ್ತವಲ್ಲ. ಇದು ಸರ್ಕಾರವೇ ಕೈಗೊಂಡಿರುವ ತೀರ್ಮಾನ. ಏಕಮುಖ ತೀರ್ಮಾನ ಎನಿಸಿರಬಹುದು. ಆದರೆ ಇದರ ಸಾಧಕ, ಬಾಧಕಗಳ ಬಗ್ಗೆ ಗಂಭೀರ ಚರ್ಚೆ ಆಗಬೇಕಾಗಿದೆ ಎಂದು ತಿಳಿಸಿದರು.

ಒಂದನೇ ತರಗತಿಯಿಂದ 5ನೇ ತರಗತಿವರೆಗೆ ಮಾತೃಭಾಷೆಯಲ್ಲೆ ಶಿಕ್ಷಣ ನೀಡಬೇಕು. ಅನ್ಯ ಭಾಷಿಗರಿಗೂ ಅವರ ಭಾಷೆಯಲ್ಲೆ ಶಿಕ್ಷಣ ನೀಡುವುದರೊಂದಿಗೆ ಕಡ್ಡಾಯವಾಗಿ ಕನ್ನಡ ಕಲಿಯಬೇಕೆಂದು ತಿಳಿಸುವುದು ಅಗತ್ಯವಾಗಿದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.