ADVERTISEMENT

ಪ್ರೇಮಿಗಳ ದಿನ : ರಾಜ್ಯದಾದ್ಯಂತ ಜನಾಂದೋಲನ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2011, 10:20 IST
Last Updated 13 ಫೆಬ್ರುವರಿ 2011, 10:20 IST

ಚಿಕ್ಕಮಗಳೂರು: ಪ್ರೇಮಿಗಳ ದಿನಾಚರಣೆಯನ್ನು ವಿರೋಧಿಸಿ ರಾಜ್ಯದ್ಯಂತ ಜನಾಂದೋಲನ ಹಮ್ಮಿಕೊಳ್ಳಲಾಗಿದೆ ಎಂದು ಹಿಂದೂ ಜನಜಾಗೃತಿ ಸಮಿತಿ ಹಾಸನ ಮತ್ತು ಚಿಕ್ಕಮಗಳೂರು ಜಿಲ್ಲಾ ಸಮನ್ವಯಕ ಹರ್ಷವರ್ಧನ ತಿಳಿಸಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಮಿತಿ ಕಾನೂನಿನ ಚೌಕಟ್ಟಿನೊಳಗೆ ಕಾರ್ಯಕ್ರಮ ಆಯೋಜಿಸಿದೆ. ಈಗಾಗಲೇ ಕರಪತ್ರಗಳನ್ನು ವಿತರಿಸಲಾಗಿದೆ. ಶಾಲಾ, ಕಾಲೇಜುಗಳಿಗೆ ಉಪನ್ಯಾಸ ಏರ್ಪಡಿಸಲಾಗಿದೆ. ಅಧ್ಯಾಪಕರು, ಪ್ರಾಧ್ಯಾಪಕರು, ಶಾಲಾ ಸಂಚಾಲಕರು ಮತ್ತು ವಿದ್ಯಾರ್ಥಿ ಸಂಘಟನೆಗಳ ಪ್ರತಿನಿಧಿಗಳನ್ನು ಸಂಪರ್ಕಿಸಿ ಪ್ರೇಮಿಗಳ ದಿನಾಚರಣೆ ಆಚರಿಸದಂತೆ ಮನವರಿಕೆ ಮಾಡಿಕೊಡಲಾಗಿದೆ ಎಂದು ಹೇಳಿದರು.

 ಹಿಂದು ಸಂಸ್ಕೃತಿ ಸಹೋದರತೆಯನ್ನು, ಕುಟುಂಬ, ಸಮಾಜವನ್ನು ಪ್ರೀತಿಸಿ, ಗೌರವಿಸುವುದನ್ನು ಕಲಿಸುತ್ತದೆ. ಪ್ರೇಮಿಗಳ ದಿನಾಚರಣೆಯನ್ನು ಒಂದು ದಿನ ಆಚರಿಸಿ ತೋರಿಕೆಗೆ ಪ್ರೀತಿ ವ್ಯಕ್ತಪಡಿಸುವ ಸಂಸ್ಕೃತಿ ನಮ್ಮದಲ್ಲ. ಇಂತಹ ಆಚರಣೆಗಳಿಂದ ಹಿಂದೂ ಸಂಸ್ಕೃತಿಯ ನೈತಿಕ ಮೌಲ್ಯ ಕುಸಿಯುತ್ತದೆ ಇದನ್ನು ತಡೆಯುವುದೇ ಸಮಿತಿ ಮುಖ್ಯ ಗುರಿ ಎಂದು ಹೇಳಿದರು.
ಶ್ರೀರಾಮಸೇನೆಯ ಜಿಲ್ಲಾ ಸಂಚಾಲಕ ಅಣ್ಣಪ್ಪ, ಸಮಿತಿ ನಗರ ಮುಖಂಡ ರಾಜು, ರಾಧಿಕ ಪ್ರಭು ಇದ್ದರು.

ಬಜರಂಗದಳ ವಿರೋಧ
ಪ್ರೇಮಿಗಳ ದಿನಾಚರಣೆ ಆಚರಣೆಗೆ ನಗರದಲ್ಲಿ ಅವಕಾಶ ಮಾಡಿಕೊಡಲಾಗುವುದಿಲ್ಲವೆಂದು ಬಜರಂಗ ದಳ ನಗರ ಸಂಚಾಲಕ ಕೋಟೆ ರಾಜು ಹೇಳಿದ್ದಾರೆ.ಪ್ರೇಮಿಗಳ ದಿನಾಚರಣೆಯನ್ನು ಆಚರಿಸಿಕೊಳ್ಳುವ ಪ್ರೇಮಿಗಳಿಗೆ ಕಾರ್ಯಕರ್ತರ ಸಮ್ಮುಖದಲ್ಲಿ ವಿವಾಹ ಕಾರ್ಯ ನೆರವೇರಿಸಲಾಗುವುದು ಎಂದು ತಿಳಿಸಿದ್ದಾರೆ.ಇದಕ್ಕಾಗಿ ಸಂಪೂರ್ಣ ಸಿದ್ಧತೆ ನಡೆಸಲಾಗಿದೆ. ಮಾಂಗಲ್ಯವನ್ನು ಸಿದ್ಧವಾಗಿಟ್ಟುಕೊಳ್ಳುವಂತೆ ಕಾರ್ಯಕರ್ತರಿಗೆ ಈಗಾಗಲೇ ಸೂಚನೆ ನೀಡಲಾಗಿದೆ ಎಂದಿದ್ದಾರೆ.

ಶ್ರೀರಾಮ್ ಸಂಘ ದಶಮಾನೋತ್ಸವ
ಚಿಕ್ಕಮಗಳೂರು: ಶ್ರೀರಾಮ್ ವಿವಿದೋದ್ದೇಶ ಸಹಕಾರ ಸಂಘದ ದಶಮಾನೋತ್ಸವ ಮತ್ತು ಸ್ಮರಣ ಸಂಚಿಕೆ ಬಿಡುಗಡೆ ಸಮಾರಂಭ  ಸೋಮವಾರ ಎಂಎಲ್‌ವಿ ರೋಟರಿ ಸಭಾಂಗಣದಲ್ಲಿ ನಡೆಯಲಿದೆ.ಶಾಸಕ ಸಿ.ಟಿ.ರವಿ ದಶಮಾನೋತ್ಸವ ಸಮಾ ರಂಭವನ್ನು ಉದ್ಘಾಟಿಸುವರು. ಸಂಘದ ಅಧ್ಯಕ್ಷ ಬಿ.ವಿ.ಗಣಪತಿಬಾಳಿಗಾ ಅಧ್ಯಕ್ಷತೆವಹಿಸುವರು.

ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಿ.ಎಚ್. ಶ್ರೀಕಾಂತ್‌ಪೈ, ಮಾಜಿ ಶಾಸಕ ಕೆ.ಬಿ.ಮಲ್ಲಿಕಾರ್ಜುನ, ಡಿ.ಸಿ.ಸಿ.ಬ್ಯಾಂಕ್ ಮಾಜಿ ಅಧ್ಯಕ್ಷ ಎಸ್.ಎಲ್. ಭೋಜೇಗೌಡ, ಬಹುಜನ ಸಮಾಜ ಪಕ್ಷದ ಜಿಲ್ಲಾಧ್ಯಕ್ಷ ಕೆ.ಟಿ.ರಾಧಾಕೃಷ್ಣ, ಉದ್ಯಮಿ ಬಿ.ಆರ್.ಶ್ರೀ ನಿವಾಸ ರಾವ್ ಭಾಗವಹಿಸುವರು ಚಟ್ನಳ್ಳಿ ಮಹೇಶ್ ಸ್ಮರಣ ಸಂಚಿಕೆ ಬಿಡುಗಡೆಗೊಳಿಸುವರು.

ಆರಂಭದಲ್ಲಿ ಸಂಘವು 147ಮಂದಿ ಸದಸ್ಯರನ್ನು ಹೊಂದಿತ್ತು. ಈಗ ಸದಸ್ಯರ ಸಂಖ್ಯೆ 260ಕ್ಕೆ ಹೆಚ್ಚಳ ವಾಗಿದೆ. ಶೇ. 10ರಷ್ಟು ಲಾಭಾಂಶ ಂಘದ ಸದಸ್ಯರಿಗೆ ವಿತರಿಸಲು ಸಂಘ ಶಕ್ತವಾಗಿದೆ ಎಂದು ಸಂಘದ ಅಧ್ಯಕ್ಷರು ತಿಳಿಸಿದ್ದಾರೆ. ದಶಮಾನೋತ್ಸವ ಅಂಗವಾಗಿ ಸಮಾಜದಲ್ಲಿ ಸೇವೆ ಸಲ್ಲಿಸುತ್ತಿರುವವರಿಗೆ, ರಸ್ತೆಸಾರಿಗೆ ಸಂಸ್ಥೆ ಚಾಲಕರು, ಬ್ಯಾಂಕ್ ರಕ್ಷಣಾ ಸಿಬ್ಬಂದಿ, ವಿದ್ಯಾಕ್ಷೇತ್ರ, ಸ್ವಚ್ಛತೆ ಹಾಗೂ ಸಹಕರ ಕ್ಷೇತ್ರದಲ್ಲಿ ಸೇವೆ ಸಲ್ಲಿಸು ತ್ತಿರುವವರನ್ನು ಗುರುತಿಸಿ ಸನ್ಮಾನಿಸಲಾಗುತ್ತದೆ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.