ADVERTISEMENT

ಬರ ನಿವಾರಣೆಗೆ ಸಿದ್ಧರಾಗಿ

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2012, 10:05 IST
Last Updated 8 ಆಗಸ್ಟ್ 2012, 10:05 IST

ಕಡೂರು: ತಾಲ್ಲೂಕಿನಲ್ಲಿ ಬರಗಾಲ ಆವರಿಸಿದ್ದು ಯಾವುದೇ ಗ್ರಾಮದಲ್ಲಿ ನೀರಿನ ಸಮಸ್ಯೆ ತಲೆದೋರಿದರೂ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಸುನೀತಾ ಚಿದಾನಂದ ಅಧಿಕಾರಿಗಳಿಗೆ ಎಚ್ಚರಿಸಿದರು.

ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಕರೆಯಲಾಗಿದ್ದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಮಳೆಯ ಕೊರತೆಯಿಂದ ತಾಲ್ಲೂಕಿನಲ್ಲಿರುವ ಬಹುತೇಕ ಕೆರೆಗಳು ನೀರಿಲ್ಲದೆ ಬತ್ತಿರುವುದರಿಂದ ಮೀನು ಸಾಕಾಣಿಕೆಗೆ ಪೆಟ್ಟು ಬಿದ್ದಿರುವುದಾಗಿ ಮೀನುಗಾರಿಕೆ ಇಲಾಖೆ ಅಧಿಕಾರಿ ಮಹಾದೇವ್ ಸಭೆಗೆ ಮಾಹಿತಿ ನೀಡಿದರು. ಅಯ್ಯನಕೆರೆಯ ಸಮೀಪದ ಹೊಂಡಗಳಲ್ಲಿ 8 ಲಕ್ಷ ಮೀನಿನ ಮರಿಗಳನ್ನು ಬೆಳೆಸಿದ್ದು ಕೆರೆಗಳು ಹರಾಜು ಆಗದೆ, ಮರಿಗಳನ್ನು ಖರೀದಿಸುವವರಿಲ್ಲದೆ ಮತ್ಸ್ಯ ಕೃಷಿ ನಲುಗಿದೆ ಎಂದು ತಿಳಿಸಿದರು.

ತೋಟಗಾರಿಕೆ ಇಲಾಖೆಯಿಂದ 24 ಫಲಾನುಭವಿಗಳಿಗೆ ತೆಂಗಿನ ಸಸಿಗಳನ್ನು ನೀಡಲಾಗುವುದು. ಅಲಂಕಾರಿಕ ಗಿಡ ಕೃಷಿ ಅಭಿವೃದ್ಧಿಗೆ ಸಹಾಯ ಧನ ನೀಡಲು ಇಲಾಖೆ ಮುಂದಾಗಿದೆ. 1 ಎಕರೆ ಮಾವು, ಸಪೋಟ ಬೆಳೆಯಲು 9 ಸಾವಿರ, ಪಪಾಯ ಬೆಳೆಯಲು 20 ಸಾವಿರ, ಬಾಳೆ ಗಿಡ ಖರೀದಿಸಲು ಒಂದು ಗಿಡಕ್ಕೆ 10 ರೂಗಳು, 1 ಹೆಕ್ಟೇರ್ ಗುಲಾಬಿ ಬೆಳೆಯಲು 35 ಸಾವಿರ ಮತ್ತು ಜೀವಸಾರ ಘಟಕ ತಯಾರು ಮಾಡಲು 30 ಸಾವಿರ ಸಹಾಯ ಧನವನ್ನು ನೀಡಲಾಗುವುದು ಎಂದು ತೋಟಗಾರಿಕೆ ಇಲಾಖೆಯ ಅಧಿಕಾರಿ ವೇದಮೂರ್ತಿ ಸಭೆಯ ಗಮನಕ್ಕೆ ತಂದರು.

ಅರಣ್ಯ ಇಲಾಖೆ ಪ್ರತಿ ಗ್ರಾಮ ಪಂಚಾಯಿತಿಗೆ 5 ಸಾವಿರ ಸಸಿಗಳನ್ನು ವಿತರಿಸಲು ಮುಂದೆ ಬಂದಿದ್ದು ಮಳೆ ಬಿದ್ದಿರುವ ಗ್ರಾಮ ಪಂಚಾಯಿತಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದು ಎಂದರು.
ಶಿಕ್ಷಣ ಇಲಾಖೆಯ `ಶಾಲೆಗೊಂದು ವನ ಮಗುವಿಗೊಂದು ಗಿಡ~ ಯೋಜನೆಯಡಿಯಲ್ಲಿ ಈಗಾಗಲೇ 69 ಶಾಲೆಗಳ ಪಟ್ಟಿ ಮಾತ್ರ ಬಂದಿದ್ದು ಉಳಿದ ಶಾಲೆಗಳು ಇಲಾಖೆಯಿಂದ ಗಿಡಗಳನ್ನು ಪಡೆಯಬಹುದಾಗಿದೆ ಎಂಬ ಮಾಹಿತಿಯನ್ನು ನೀಡಿದರು.

ತಾಲ್ಲೂಕಿನಲ್ಲಿ ಎರಡು ಡೆಂಗಿ ಜ್ವರ, 11 ಮಲೇರಿಯ, ಒಂದು ಇಲಿ ಜ್ವರದ ಪ್ರಕರಣಗಳು ದಾಖಲಾಗಿದೆ. ಡೆಂಗಿಜ್ವರ ಹರಡದಂತೆ ಪಟ್ಟಣ, ಗ್ರಾಮ ಪಂಚಾಯಿತಿಗಳಲ್ಲಿ ನೀರು ನಿಲ್ಲುವುದನ್ನು ತಡೆಗಟ್ಟಬೇಕು ಸ್ವಚ್ಛತೆ ಕಾಪಾಡಲು ಎಲ್ಲರು ಮುಂದಾಗಿ ಆರೋಗ್ಯ ಇಲಾಖೆಗೆ ಸಹಕಾರ ನೀಡಬೇಕೆಂದು ಮನವಿ ಮಾಡಿದರು. ಈಡಿಪಸ್ ಸೊಳ್ಳೆಗಳು ಬೆಳೆಯುತ್ತಿರುವ ಲಾರ್ವಾಗಳನ್ನು ಬಾಟಲ್‌ನಲ್ಲಿ ತಂದು ಪ್ರದರ್ಶಿಸಿ ಅಧ್ಯಕ್ಷರ ಗಮನ ಸೆಳೆದರು.

ತಾಲ್ಲೂಕಿನಲ್ಲಿ 4 ಸಾವಿರ ಮನೆಗಳಲ್ಲಿ ಈಡಿಪಸ್ ಸೊಳ್ಳೆಗಳು ಬೆಳೆಯುವ ಲಾರ್ವಾಗಳು ಕಾಣಿಸಿಕೊಂಡಿದ್ದು ಇವುಗಳು ಬೆಳೆಯದಂತೆ ನಾಶ ಪಡಿಸಲಾಗಿದೆ. ಯಾವುದೇ ಗ್ರಾಮ, ಪಟ್ಟಣದಲ್ಲಿ ಜ್ವರ, ವಾಂತಿ, ಬೇಧಿ ಪ್ರಕರಣಗಳು ಕಂಡು ಬಂದರೆ ಕೂಡಲೆ ವೈದ್ಯರನ್ನು ಸಂಪರ್ಕಿಸಲು ತಾಲ್ಲೂಕು ವೈದ್ಯಾಧಿಕಾರಿ ಡಾ. ಪ್ರಭು ಮನವಿ ಮಾಡಿದರು.

ಮೆಸ್ಕಾಂ, ಲೋಕೋಪಯೋಗಿ, ಜಿ.ಪಂ. ಎಂಜಿನಿಯರ್ ವಿಭಾಗ, ಸಮಾಜ ಕಲ್ಯಾಣ, ಬಿಸಿಎಂ, ಶಿಕ್ಷಣ ಇಲಾಖೆಯ ಪ್ರಗತಿಯನ್ನು ಸಭೆಯಲ್ಲಿ ಅಧ್ಯಕ್ಷೆ ಸುನೀತಾಚಿದಾನಂದ ಪರಿಶೀಲಿಸಿದರು.

ಸಭೆಯಲ್ಲಿ ಉಪಾಧ್ಯಕ್ಷೆ ಜಯಾಬಾಯಿ, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಟಿ.ಎನ್. ಮೂರ್ತೊ, ವ್ಯವಸ್ಥಾಪಕ ರಾಮನಾಯ್ಕ, ಯೋಜನಾಧಿಕಾರಿ ಮಹೇಶ್ವರಪ್ಪ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.