ADVERTISEMENT

ಬರ ಪರಿಸ್ಥಿತಿ ಸಮರ್ಪಕ ನಿರ್ವಹಣೆಗೆ ಸಜ್ಜಾಗಿ:ಡಿ.ಸಿ

​ಪ್ರಜಾವಾಣಿ ವಾರ್ತೆ
Published 10 ಜನವರಿ 2014, 6:45 IST
Last Updated 10 ಜನವರಿ 2014, 6:45 IST

ಕಡೂರು: ರಾಜ್ಯ ಸರ್ಕಾರ ಕಡೂರು ತಾಲ್ಲೂಕನ್ನು ಬರಪೀಡಿತವೆಂದು ಘೋಷಿಸಿದ್ದು ತಾಲ್ಲೂಕಿನಲ್ಲಿ ಜನ –ಜಾನುವಾರುಗಳಿಗೆ ಕುಡಿಯುವ ನೀರು ಮತ್ತು ಮೇವು ಪೂರೈಕೆ ಸೇರಿದಂತೆ ಸಮರ್ಪಕವಾಗಿ ಮತ್ತು ಸಮರ್ಥವಾಗಿ ಬರ ಪರಿಸ್ಥಿತಿ ಎದುರಿಸಲು ಅಧಿಕಾ ರಿಗಳು ಸಜ್ಜಾಗಿರುವಂತೆ ಜಿಲ್ಲಾಧಿಕಾರಿ ಬಿ.ಎಸ್‌.ಶೇಖರಪ್ಪ ಸೂಚಿಸಿದರು.

ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಬುಧವಾರ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆ ನಡೆಸಿ ಅವರು ಮಾತನಾಡಿದರು.
ತಾಲ್ಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಪ್ರಮುಖವಾಗಿದ್ದು, ಅದಕ್ಕೆ ಸಂಬಂಧಿಸಿದಂತೆ ಮತ್ತು ಇತರೆ ಸಮಸ್ಯೆಗಳೂ ಸೇರಿದಂತೆ ಜನವರಿ 14ರ ಒಳಗೆ ಕ್ರಿಯಾ ಯೋಜನೆ ತಯಾರಿಸಿ ತರೀಕೆರೆ ಉಪವಿಭಾಗಾಧಿಕಾರಿಗಳಿಗೆ ಸಲ್ಲಿಸಬೇಕು, ವಾಸ್ತವ ಸಂಗತಿ ಮರೆಮಾಚಿ ಕಾಟಾಚಾರದ ವರದಿ ತಯಾರಿಸಿದ್ದು, ಕಂಡು ಬಂದರೆ ಕ್ರಮ ಅನಿವಾರ್ಯ. ಎಲ್ಲೆಲ್ಲಿ ಯಾವ ಯಾವ ಸಮಸ್ಯೆ ಇದೆ ಮತ್ತು ಪರಿಹಾರದ ವಿಧಾನ ಹೇಗೆ ಎಂಬ ಕುರಿತು ಜಿ.ಪಂ ಎಂಜಿನಿಯರ್‌ ನೇತೃತ್ವದಲ್ಲಿ ತಾಲ್ಲೂಕು ಪಂಚಾಯಿತಿ, ಪುರಸಭೆಗಳು ಮತ್ತು ಮೆಸ್ಕಾಂ ಸೇರಿದಂತೆ ಸಂಬಂಧಿತ ಇಲಾಖೆಗಳ ನಡುವೆ ಸಮನ್ವಯದ ಮೂಲಕ ಕ್ರಿಯಾ ಯೋಜನೆ ತಯಾರಿಸುವಂತೆ ಅವರು ತಾಕೀತು ಮಾಡಿದರು.

ಜಿಲ್ಲಾಪಂಚಾಯಿತಿ ಎಂಜಿನಿಯರ್‌ ಪ್ರಭಾಕರರಾವ್‌ ಮಾಹಿತಿ ನೀಡಿ, ತಾಲ್ಲೂಕಿನ 71ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ, 47ಗ್ರಾಮಗಳಲ್ಲಿ ಓವರ್‌ಹೆಡ್‌ ಟ್ಯಾಂಕ್‌ ನಿರ್ಮಾಣವಾಗಬೇಕಿದೆ, ಟ್ಯಾಂಕರ್‌ ಮೂಲಕ ನೀರು ಪೂರೈಸುವ ಸ್ಥಿತಿ ಇಲ್ಲ, ಹಳ್ಳಿಗಳಲ್ಲಿ ನಿರ್ಮಿಸಿರುವ ಜಾನುವಾರು ಕುಡಿಯುವ ನೀರು ತೊಟ್ಟಿಗಳು ನೀರಿನ ಕೊರತೆಯಿಂದ ಖಾಲಿ ಬಿದ್ದಿವೆ, ಹಳ್ಳಿಗಳಲ್ಲಿನ ಅಂತರ್ಜಲ ಕೊರತೆ ಇದಕ್ಕೆ ಕಾರಣ ಎಂಬ ಮಾಹಿತಿ ನೀಡಿದಾಗ ಈ ಸಮಯದಲ್ಲಿ ಮಧ್ಯ ಪ್ರವೇಶಿಸಿದ ಜಿಲ್ಲಾಧಿಕಾರಿಗಳು ಕುಡಿಯುವ ನೀರು ಕಾಮಗಾರಿಗೆ ಎಷ್ಟು ಹಣ ಬಂದಿದೆ? ಎಷ್ಟು ಹಣ ವಿನಿಯೋಜನೆಯಾಗಿದೆ ಎಂದು ಪ್ರಶ್ನಿಸಿದರು.

ಕುಡಿಯುವ ನೀರು ಕಾಮಗಾರಿಗೆ ₨8.99ಕೋಟಿ ಹಣ ಬಂದಿದ್ದು ಕೇವಲ ₨2ಕೋಟಿ ಹಣ ಖರ್ಚಾಗಿದೆ ಎಂಬ ಮಾಹಿತಿ ಸಿಕ್ಕ ತಕ್ಷಣ ಸಿಟ್ಟಿಗೆದ್ದು, ಜನರು ಮತ್ತು ಜಾನುವಾರುಗಳಿಗೆ ಕುಡಿಯುವ ನೀರು ಸಿಗುತ್ತಿಲ್ಲ ಎಂದು ನಿತ್ಯ ಹೆಣಗಾಡುತ್ತಿದ್ದರೆ ಸರ್ಕಾರದ ಹಣ ಬಳಸಿ ಸಮಸ್ಯೆ ಬಗೆ ಹರಿಸಲು ಸಾಧ್ಯವಿಲ್ಲವೇ? ಹಣವನ್ನು ನಿಗದಿತ ಕೆಲಸಕ್ಕೆ ವೆಚ್ಚ ಮಾಡದೆ ಸುಮ್ಮನೆ ಉಳಿಸಿಕೊಂಡರೆ ಅರ್ಥವೇನು? ಸಾಮಾನ್ಯ ಕ್ರಿಯಾಯೋಜನೆ ತಯಾರಿಸಿ ಕೆಲಸ ಮಾಡಲು ಸಾಧ್ಯವಿಲ್ಲವೇ ಎಂದು ಪ್ರಶ್ನಿಸಿದಾಗ ಎಂಜಿನಿಯರ್‌ ನಿರುತ್ತರರಾದರು.

ಕಡೂರು ಮತ್ತು ಬೀರೂರು ಪುರಸಭೆಯ ಅಧಿಕಾರಿಗಳು ಕೂಡಾ ಕುಡಿಯುವ ನೀರು ಸಮಸ್ಯೆಯನ್ನು ಸಮರ್ಪಕವಾಗಿ ನಿರ್ವಹಿಸತಕ್ಕದ್ದು, ನಿರ್ವಹಣೆಯ ಜೊತೆ ಪರಿಹಾರ ಮಾರ್ಗಗಳು ಮತ್ತು ಪಟ್ಟಣಗಳ ನೈರ್ಮಲ್ಯದ ಕುರಿತು ಕ್ರಮ ವಹಿಸ ಬೇಕು. ನೀರು–ನೈರ್ಮಲ್ಯ ಕುರಿತು ದೂರುಗಳು ಬಂದಲ್ಲಿ ಕಠಿಣ ಕ್ರಮ ಅನಿವಾರ್ಯವಾಗಲಿದೆ ಎಂದು ಎಚ್ಚರಿಸಿದರು. ತಾಲ್ಲೂಕು ವೈದ್ಯಾಧಿಕಾ ರಿಗಳು ಹಳ್ಳಿಗಳಲ್ಲಿನ ಕುಡಿಯುವ ನೀರಿನ ಮಾದರಿಗಳನ್ನು ಪರಿಶೀಲಿಸಿ ನೀರಿನಲ್ಲಿರುವ ಫ್ಲೋರೈಡ್‌ ಅಂಶದ ಬಗ್ಗೆ ವರದಿ ನೀಡಬೇಕು ಮತ್ತು ಬೇಸಿ ಗೆಯಲ್ಲಿ ಸಾಂಕ್ರಾಮಿಕ ರೋಗಗಳ ಹರಡುವಿಕೆ ತಡೆಗಟ್ಟಲು ಮುಂಜಾ ಗ್ರತಾ ಕ್ರಮ ವಹಿಸಬೇಕು ಎಂದರು.

 ಪಶುಸಂಗೋಪನಾ ಇಲಾಖೆಯ ಅಧಿಕಾರಿ ಡಾ.ಲಿಂಗರಾಜ್‌ ಜಾನು ವಾರು ಕುರಿತ ಪ್ರಶ್ನೆಗೆ ಉತ್ತರಿಸಿ ತಾಲ್ಲೂಕಿನಲ್ಲಿ 1.22ಲಕ್ಷ ಜಾನುವಾ ರುಗಳಿದ್ದು ನಿತ್ಯ ಪ್ರತಿ ಪಶುವಿಗೆ 5ಕಿಲೋ ಮೇವು ಅಗತ್ಯವಿದ್ದು ಒಟ್ಟಾರೆ ನಿತ್ಯ 610ಟನ್‌ ಮೇವು ಅಗತ್ಯವಿದೆ. ತಾಲ್ಲೂಕಿನಲ್ಲಿ ಹಿಂಗಾರಿನಲ್ಲಿ ಬೆಳೆಯಲಾದ ರಾಗಿ, ಜೋಳ, ಬೇಸಗೆ ಜೋಳ ಮುಂತಾದ ಆಹಾರಧಾನ್ಯಗಳ ಕಟಾವಿನ ಮೂಲಕ ಸುಮಾರು 1.82ಲಕ್ಷ ಟನ್‌ ಮೇವು ಲಭ್ಯವಿದ್ದು ಮಳೆಗಾಲದವರೆಗೆ ಮೇವು ಕೊರತೆಯ ಸಮಸ್ಯೆ ಉದ್ಭವಿಸುವುದಿಲ್ಲ ಎಂದರು.

ತಾಲ್ಲೂಕು ತಹಶೀಲ್ದಾರರು ಟಾಸ್ಕ್‌ಫೋರ್ಸ್‌ ಸಭೆ ನಡೆಸಿ ಗ್ರಾಮ ಲೆಕ್ಕಿಗರು ಮತ್ತು ಕಂದಾಯ ನಿರೀಕ್ಷಕ ರಿಂದ ಗ್ರಾಮಗಳ ಪರಿಸ್ಥಿತಿ ಕುರಿತು ವರದಿ ತರಿಸಿಕೊಳ್ಳಬೇಕು ಎಂದು ತಹಶೀಲ್ದಾರ್‌ ತಿಮ್ಮಾಬೋವಿ ಯವರಿಗೆ ಸೂಚಿಸಿ, ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾ ಧಿಕಾರಿ ತಾಲ್ಲೂಕಿನ ಎಲ್ಲ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಮತ್ತು ಪಂಚಾಯಿತಿ ಕಾರ್ಯದರ್ಶಿಗಳ ಮೂಲಕ ವಾಸ್ತವ ಸ್ಥಿತಿಯ ಬಗ್ಗೆ ವರದಿ ನೀಡಬೇಕು. 24 ಗಂಟೆಗಳೂ ನಿರಂತರ ಲಭ್ಯವಿರುವಂತೆ ಸಹಾಯವಾಣಿ ಸ್ಥಾಪಿಸಿ ಜನರ ದೂರು–ದುಮ್ಮಾನಗಳ ವರದಿಯನ್ನು ದಾಖಲಿಸಿ ನಿತ್ಯವೂ ತಮ್ಮ ಗಮನಕ್ಕೆ ನೀಡಬೇಕು ಎಂದರು.

ಸಭೆಯಲ್ಲಿ ತರೀಕೆರೆ ಉಪ ವಿಭಾಗಾಧಿಕಾರಿ ಜಿ.ಅನುರಾಧಾ, ತಹಶೀಲ್ದಾರ್‌ ತಿಮ್ಮಾಬೋವಿ, ತಾ.ಪಂ ಇಒ ಮೂಕಪ್ಪಗೌಡ, ಜಿ.ಪಂ. ಎಂಜಿನಿಯರ್‌ ಪ್ರಭಾಕರರಾವ್‌ ಹಾಗೂ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.