ADVERTISEMENT

ಬಲಿಗೆ ಕೃಷಿಕರ ಬಗಲಲ್ಲಿ ವಿಷದ ಬಾಟಲಿ!

ರವಿ ಕೆಳಂಗಡಿ
Published 10 ಫೆಬ್ರುವರಿ 2014, 10:46 IST
Last Updated 10 ಫೆಬ್ರುವರಿ 2014, 10:46 IST
ಕಳಸ ಹೋಬಳಿ ಬಲಿಗೆಯಲ್ಲಿ ಇನಾಂ ಕೃಷಿಕರ ಧರಣಿ ಬೆಂಬಲಿಸಲು ಭಾನುವಾರ ಮಹಿಳೆಯರು ಗಮನಾರ್ಹ ಸಂಖ್ಯೆಯಲ್ಲಿ ಸೇರಿದ್ದ ದೃಶ್ಯ.
ಕಳಸ ಹೋಬಳಿ ಬಲಿಗೆಯಲ್ಲಿ ಇನಾಂ ಕೃಷಿಕರ ಧರಣಿ ಬೆಂಬಲಿಸಲು ಭಾನುವಾರ ಮಹಿಳೆಯರು ಗಮನಾರ್ಹ ಸಂಖ್ಯೆಯಲ್ಲಿ ಸೇರಿದ್ದ ದೃಶ್ಯ.   

ಕಳಸ: ಮೂಡಿಗೆರೆ ತಾಲ್ಲೂಕಿನ ಕಟ್ಟ ಕಡೆಯ ಗ್ರಾಮವಾದ ಬಲಿಗೆಯ ಕಡಿವೆಯ ಸುತ್ತಲೂ ರಮಣೀಯ ಪರಿಸರ ಇದ್ದರೆ ಅಲ್ಲೇ ನೆರೆದಿದ್ದ ಜನರು ಮಾತ್ರ ಆಕ್ರೋಶದಿಂದ ಕುದಿಯು ತ್ತಿದ್ದರು. ಮೈದಾನದಲ್ಲೇ ಗಂಜಿ ಬೇಯಿಸಿ ಅಲ್ಲೇ ಮಲಗಿ ಬಹುತೇಕ ನಿರಾಶ್ರಿತರಂತೆ ಬದುಕು ಸಾಗಿಸುತ್ತಿ ರುವ ನೂರಾರು ಗ್ರಾಮಸ್ಥರ ಚಿಂತೆ ಒಂದೇ. ತಲೆತಲಾಂತರದಿಂದ ಪಾಲಿಸಿ ಕೊಂಡು ಬಂದ ಕೃಷಿ ಆಧರಿತ ಜೀವನವನ್ನು ಅರಣ್ಯ ಇಲಾಖೆ ಬಲಿಕೊ ಡುವ ಯತ್ನದಲ್ಲಿರುವಾಗ ಅದನ್ನು ವಿರೋಧಿಸುವುದು ಹೇಗೆ ಎಂಬುದು.

ನಾಲ್ಕು ದಿನಗಳಿಂದ ಇನಾಂ ಭೂಮಿ ವಾಸಿಗಳ ಧರಣಿ, ಪ್ರತಿಭಟನೆಗಳಿಗೆ ಯಾವುದೇ ಫಲ ಸಿಗದ ಹಿನ್ನೆಲೆಯಲ್ಲಿ ಕೃಷಿಕರು ಭಾನುವಾರ ಹತಾಶ ಸ್ಥಿತಿಗೆ ತಲುಪಿದ್ದಾರೆ. ಅರಣ್ಯ ಇಲಾಖೆಯು ಸೋಮವಾರ ಇನಾಂ ಭೂಮಿ ಖುಲ್ಲಾ ಮಾಡಲು ಪೊಲೀಸರ ನೆರವು ಕೋರಿದೆ. ಹೆಚ್ಚಿನ ಸಂಖ್ಯೆಯ ಪೊಲೀಸ್‌ ಪಡೆಯ ಭೀತಿ ಈಗಾಗಲೇ ಬಲಿಗೆಯಲ್ಲಿ ಆತಂಕ ತಂದಿದೆ.

‘ಪ್ರಾಣ ಕೊಟ್ಟೇವು ಭೂಮಿ ಬಿಡೆವು’ ಎಂದು ಈಗಾಗಲೇ ಘೋಷಿಸಿರುವ ಕೃಷಿಕರು ಭಾನುವಾರ ಕಿಸೆಯಲ್ಲಿ ವಿಷದ ಬಾಟಲಿಗಳನ್ನು ಇಟ್ಟುಕೊಂಡು ಧರಣಿಯಲ್ಲಿ ಕುಳಿತಿದ್ದಾರೆ. ಭಾನುವಾರವೂ  ರಾಜಕೀಯ ಪಕ್ಷಗಳ ಮುಖಂಡರು ಬಲಿಗೆಗೆ ಭೇಟಿ ನೀಡಿ ಹೋರಾಟಕ್ಕೆ ಬೆಂಬಲ ನೀಡುವ ಭರವಸೆಯನ್ನು ಪುನರುಚ್ಚರಿಸಿದ್ದಾರೆ. ಆದರೆ ‘ನಮಗೆ ಕುತ್ತಿಗೆಗೆ ಬಂದಾಗ ಮಾತ್ರ ಇಲ್ಲಿಗೆ ಬಂದು ಕಾಗೆ ಹಾರಿಸುವ ರಾಜಕಾರಣಿಗಳು ಬೇಡ. ಇನಾಂ, ಅರಣ್ಯ ಯಾವುದರ ಬಗ್ಗೆಯೂ ಗೊತ್ತಿಲ್ಲದ ನಮ್ಮ ಬದು ಕುವ ಹಕ್ಕನ್ನು ಶಾಶ್ವತವಾಗಿ ಉಳಿಸಿಕೊ ಡುವವರು ಬೇಕು’ ಎಂದು ಗ್ರಾಮದ ಯುವಕ ಸವಿಂಜಯ ಹೇಳುತ್ತಾರೆ.

‘ಅರಣ್ಯ ಇಲಾಖೆಯವರು ಬಲಿಗೆಗೆ ಬರದಂತೆ ಕಳಸ ಮತ್ತು ಹೊರನಾ ಡಿನಲ್ಲೇ ತಡೆಯುತ್ತೇವೆ. ಬಲ ಪ್ರಯೋಗ ಮಾಡಿದರೆ ವಿಷ ಕುಡಿಯು ತ್ತೇವೆ’ ಎಂದು ಹೋರಾಟದ ಮುಂಚೂಣಿ ವಹಿಸಿರುವವರು ಎಚ್ಚರಿಸುತ್ತಾರೆ.‘ಕಳಸದಿಂದ ಕೊಟ್ಟಿಗೆಹಾರ, ಚಿಕ್ಕಮ ಗಳೂರಿನ ಬಾಬಾಬುಡನ್‌ಗಿರಿ ತನಕ ಸಾವಿರಾರು ಎಕರೆ ಒತ್ತುವರಿ ಮಾಡಿ ಕಾಫಿ, ಟೀ ತೋಟ ಮಾಡಿದವರನ್ನು ಬಿಟ್ಟು ಒಂದೆರಡೆಕರೆ ಭೂಮಿ ಇರುವ ನಮ್ಮ ಮೇಲೆ ಯಾಕೆ ಕಣ್ಣು...? ಎಂದು ಬಲಿಗೆಯ ವೃದ್ಧರೊಬ್ಬರು ಪ್ರಶ್ನಿಸಿದ್ದು ಸಂವಿಧಾನದ ಸಾಮಾಜಿಕ ನ್ಯಾಯದ ಘೋಷಣೆ ಅಣಕಿಸುವಂತಿತ್ತು.
–ರವಿ ಕೆಳಂಗಡಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.