ADVERTISEMENT

ಬಸ್ ನಿಲುಗಡೆಗೆ ಒತ್ತಾಯಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 19 ಜುಲೈ 2013, 11:10 IST
Last Updated 19 ಜುಲೈ 2013, 11:10 IST

ಚಿಕ್ಕಮಗಳೂರು: ನಗರ ಸಮೀಪದ ಮುಗುಳುವಳ್ಳಿಯಲ್ಲಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ವೇಗದೂತ ವಾಹನಗಳ ನಿಲುಗಡೆಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ  ನೇತೃತ್ವದಲ್ಲಿ ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರು ಗುರುವಾರ ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ತಡೆದು ಪ್ರತಿಭಟನೆ ನಡೆಸಿದರು.

ಗ್ರಾಮವು ನಗರದಿಂದ 9 ಕಿ.ಮೀ. ದೂರದಲ್ಲಿದ್ದು, ವೇಗದೂತ ವಾಹನಗಳನ್ನು ನಿಲ್ಲಿಸದಿರುವುದರಿಂದ ಪ್ರತಿನಿತ್ಯ ಸುತ್ತಮುತ್ತಲ ಗ್ರಾಮಸ್ಥರು ಮತ್ತು ವಿದ್ಯಾರ್ಥಿಗಳು ನಗರಕ್ಕೆ ಬರಲು ಪರದಾಡುವಂತಾಗಿದೆ ಎಂದು ಪ್ರತಿಭಟನಾ ನಿರತರು ಹೇಳಿದರು.

ಆರದವಳ್ಳಿ, ಹುಲಿಚಿಕ್ಕನಹಳ್ಳಿ, ಗಿಡ್ಡೇನಹಳ್ಳಿ, ಹೆಜ್ಜೆಗೇನಹಳ್ಳಿ ಗ್ರಾಮಗಳ ವಿದ್ಯಾರ್ಥಿಗಳು ಸರಿಯಾದ ಸಮಯಕ್ಕೆ ಶಾಲಾ, ಕಾಲೇಜುಗಳಿಗೆ ಹೋಗಲಾಗದೆ ತೊಂದರೆಗೆ ಒಳಗಾಗುತ್ತಿದ್ದಾರೆ. ಸಾರ್ವಜನಿಕರು ನಗರಕ್ಕೆ ಬರಲು ಕಾಯುತ್ತಾ ಕುಳಿತರು ಬಸ್‌ಗಳನ್ನು ನಿಲುಗಡೆಗೊಳಿಸುತ್ತಿಲ್ಲ ಎಂದು ದೂರಿದ್ದಾರೆ.

ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರ ಪ್ರಯಾಣಕ್ಕೆ ತೊಂದರೆಯಾಗಿರುವುದನ್ನು ಅರಿತ ಕೆಎಸ್‌ಆರ್‌ಟಿಸಿ ಅಧಿಕಾರಿಗಳು ವೇಗದೂತ ವಾಹನಗಳನ್ನು ನಿಲುಗಡೆ ಗೊಳಿಸುವಂತೆ ಕಳೆದ ಜನವರಿ 3ರಂದು ಆದೇಶಿಸಿದ್ದರೂ ಮುಗುಳುವಳ್ಳಿ ಬಳಿ ಬಸ್‌ನಿಲ್ಲಿಸುತ್ತಿಲ್ಲ ಎಂದು ಪ್ರತಿಭಟನಾನಿರತರು ಹೇಳಿದರು.

ಬಸ್ ನಿಲುಗಡೆಗೆ ಒತ್ತಾಯಿಸಿ ರಸ್ತೆ ತಡೆ ನಡೆಸಿದ್ದರಿಂದ ಸಂಚಾರಕ್ಕೆ ಸ್ವಲ್ಪ ಹೊತ್ತು ಅಡಚಣೆಯಾಯಿತು. ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳು ಬಸ್ ನಿಲುಗಡೆಗೆ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ ಬಳಿಕ ಪ್ರತಿಭಟನೆ ಸ್ಥಗಿತಗೊಳಿಸಲಾಯಿತು.

ಕರ್ನಾಟಕ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುರುಶಾಂತಪ್ಪ, ಹಸಿರು ಸೇನೆ ಜಿಲ್ಲಾ ಅಧ್ಯಕ್ಷ ಎಚ್.ಕೆ.ಶಶಿಧರ್, ರಮೇಶ್, ತಾಲ್ಲೂಕು ಪ್ರಧಾನಕಾರ್ಯದರ್ಶಿ ಮಂಜುನಾಥ, ಜಿಲ್ಲಾ ಪಂಚಾಯಿತಿ ಸದಸ್ಯ ನಿರಂಜನ, ಎಂ.ಸಿ.ಬಸವರಾಜ್, ವಿದ್ಯಾರ್ಥಿಗಳಾದ ಎಂ.ವಿ.ದರ್ಶನ್, ಎಂ.ಜಿ.ಸಂದೀಪ, ಎಂ.ಆರ್. ದಿಲೀಪ್, ನವೀನ್, ಶರತ್, ಭರತ್  ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.