ADVERTISEMENT

ಬಾಲ ಕಾರ್ಮಿಕರ ಮಕ್ಕಳಿಗೆ ಭವಿಷ್ಯ ರೂಪಿಸಿ

​ಪ್ರಜಾವಾಣಿ ವಾರ್ತೆ
Published 14 ಮೇ 2012, 8:55 IST
Last Updated 14 ಮೇ 2012, 8:55 IST

ಕಡೂರು: ಬಾಲ ಕಾರ್ಮಿಕರಾಗಿದ್ದ ಎಷ್ಟೋ ಮಕ್ಕಳು ಇಂದು ಉತ್ತಮ ವಿದ್ಯಾಭ್ಯಾಸದಿಂದ ಉನ್ನತ ಹುದ್ದೆಯನ್ನು ಅಲಂಕರಿಸುತ್ತಿದ್ದಾರೆ. ಶಾಲೆ ಬಿಟ್ಟ ಮಕ್ಕಳನ್ನು ಮರಳಿ ಶಾಲೆಗೆ ತರುತ್ತಿರುವುದೇ ಇದಕ್ಕೆ ಕಾರಣ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ರಂಗನಾಥಸ್ವಾಮಿ ತಿಳಿಸಿದರು.

ಸಾರ್ವಜನಿಕ ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕಾರ್ಮಿಕ ಇಲಾಖೆ ಮತ್ತು ವನಶ್ರೀ ಟ್ರಸ್ಟ್ ಸಾಗರ ಇವರ ಸಹಯೋಗದಲ್ಲಿ ಶೈಕ್ಷಣಿಕ ಜಾಗೃತಿ ಮೂಡಿಸುವ ಬಾಲ ಕಲಾ ಯಾತ್ರೆಯು ಭಾನುವಾರ ಪಟ್ಟಣಕ್ಕೆ ಆಗಮಿಸಿದಾಗ ಜಾಥಾವನ್ನು ಸ್ವಾಗತಿಸಿ ಅವರು ಮಾತನಾಡಿದರು.

ಕಳೆದ ಮೂರು ನಾಲ್ಕು ವರ್ಷಗಳಿಂದ ಸಾಗರದ ವನಶ್ರೀ ಟ್ರಸ್ಟ್ ಶಿಕ್ಷಣ ಕ್ಷೇತ್ರದಲ್ಲಿ ವಿನೂತನ ಪ್ರಯೋಗಗಳ ಮೂಲಕ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ತನ್ನದೇ ಆದ ಹೆಸರು ಗಳಿಸುತ್ತಿದ್ದು,ಈ ಬಾರಿ ಬಾಲ ಕಾರ್ಮಿಕರ ಮಕ್ಕಳಿಗೆ ಆತ್ಮವಿಶ್ವಾಸ ತುಂಬಿ  ಭವಿಷ್ಯ ರೂಪಿಸಲು  ಶ್ರಮಿಸುತ್ತಿರುವುದು ಶ್ಲಾಘನೀಯ ಎಂದರು.

ಸಾಗರದ ವನಶ್ರೀ ಟ್ರಸ್ಟ್‌ನ ವ್ಯವಸ್ಥಾಪಕ ಹೆಚ್.ಪಿ.ಮಂಜಪ್ಪ ಮಾತನಾಡಿ ಶಿಕ್ಷಣದಿಂದ ವಂಚಿತರಾಗಿ, ಅನಾಥ ನಿರ್ಗತಿಕ, ಗುಡ್ಡಗಾಡು, ಹಿಂದುಳಿದ ವರ್ಗದ ಮಕ್ಕಳನ್ನು ಗುರುತಿಸಿ ರಾಜ್ಯದಾದ್ಯಂತ ಜಾಥಾ 25 ಕ್ಕೂ ಹೆಚ್ಚಿನ ಜಿಲ್ಲಾ ಕೇಂದ್ರಗಳನ್ನು ಸಂಪರ್ಕಿಸಿ ಶಾಲೆಯಿಂದ ಹೊರಗುಳಿದ ಮತ್ತು ಬಾಲ ಕಾರ್ಮಿಕರಾಗಿದ್ದ ಮಕ್ಕಳನ್ನು ಮುಖ್ಯವಾಹಿನಿಗೆ ತರಲು ಮಕ್ಕಳೊಂದಿಗೆ ಬೆರೆತು, ವಿವಿಧ ಆಟಗಳನ್ನು ಪ್ರದರ್ಶಿಸಿ ಅವರ ಮನಒಲಿಸಿ ಶೈಕ್ಷಣಿಕವಾಗಿ ಮುಂದೆ ತರಲು ರಾಜ್ಯ ಪ್ರವಾಸ ಮಾಡಿ ಕನಿಷ್ಟ 50 ಕಾರ್ಯಕ್ರಮಗಳನ್ನು ನೀಡಿ ಜಾನಪದ,ಕೋಲಾಟ, ಮಲ್ಲಕಂಬ, ಸೈಕಲ್ ಸಾಹಸ, ವೀರಗಾಸೆ, ಡೊಳ್ಳುಕುಣಿತ, ನೃತ್ಯ, ಯೋಗಗಳನ್ನು ಪ್ರದರ್ಶಿಸಿ ಅವರ ಮನಸ್ಸನ್ನು ಪರಿವರ್ತಿಸುವುದಾಗಿ ತಿಳಿಸಿದರು.

ಶಿಕ್ಷಣ ಇಲಾಖೆಯ ಹರೀಶ್, ಕೆಎಲ್‌ವಿ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಶಿವ ಶಂಕರ್, ಧೃವತಾರೆ ಶಾಲೆಯ ಮುಖ್ಯ ಶಿಕ್ಷಕ ಲಕ್ಕಪ್ಪ, ನೂರಾರು ಶಾಲಾ ಮಕ್ಕಳು ವಿಶ್ವಭಾರತಿ ಶಾಲೆಯಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಜಾಥಾ ಮಾಡುವುದರ ಮೂಲಕ ಶಿಕ್ಷಣದ ಅರಿವನ್ನು ಮೂಡಿಸಲು ನಾಗರೀಕರ ಗಮನ ಸೆಳೆದರು. ಜಾಥಾದಲ್ಲಿ ಸಾಗರದ ವನಶ್ರೀ   ಟ್ರಸ್ಟ್‌ನ ಕಲಾವಿದರ ಸಾಂಸ್ಕೃತಿಕ ಕಾರ್ಯಕ್ರಮಗಳು ಮನರಂಜಿಸಿದವು. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.