ADVERTISEMENT

ಬಿಜೆಪಿ ಗೆಲುವಿಗೆ ಕಾಂಗ್ರೆಸ್ ಬೆಂಬಲ

​ಪ್ರಜಾವಾಣಿ ವಾರ್ತೆ
Published 20 ಜನವರಿ 2011, 9:25 IST
Last Updated 20 ಜನವರಿ 2011, 9:25 IST

ತರೀಕೆರೆ:  ಕಾಂಗ್ರೆಸ್ ಮುಖಂಡರು ಬಿಜೆಪಿ ಅಭ್ಯರ್ಥಿಗಳಿಗೆ ಮತ ಹಾಕಿಸಲು ಮುಂದಾಗಿದ್ದರಿಂದ ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷಕ್ಕೆ ಹಿನ್ನಡೆಯಾಯಿತು ಎಂದು  ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಎಚ್.ದೇವರಾಜ್ ಆರೋಪಿಸಿದರು.

ಇಲ್ಲಿನ ಎಂ.ಜಿ.ಹಾಲ್‌ನಲ್ಲಿ ಬುಧವಾರ ನಡೆದ ಜಿಲ್ಲಾ ಮತ್ತು ತಾಲ್ಲೂಕು ಪಂಚಾತಿಯಿ ಚುನಾಯಿತ ಸದಸ್ಯರ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಜಾತ್ಯಾತೀತ ಮತಗಳು ಹಂಚಿ ಹೋಗದಂತೆ ತಡೆಯಲು ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆ ವೇಳೆ ಜಿಲ್ಲಾ ಮಟ್ಟದಲ್ಲಿ ಹೊಂದಾಣಿಕೆ ಮಾಡಿಕೊಳ್ಳಲು ಕಾಂಗ್ರೆಸ್ ಅಧ್ಯಕ್ಷರಿಗೆ ಮಾಡಿಕೊಂಡ ಮನವಿಗೆ ಸಕಾರಾತ್ಮಕ ಉತ್ತರ ಸಿಗಲಿಲ್ಲ ಎಂದು ಅವರು ವಿಷಾದಿಸಿದರು.

ಅಧಿಕಾರ ವಿಕೇಂದ್ರಿಕರಣದ ಉದ್ದೇಶ ಮತ್ತು ಗ್ರಾಮಾಭಿವೃದ್ಧಿಯ ಬಗ್ಗೆ ಕಾಳಜಿ ಇಲ್ಲದ ಬಿಜೆಪಿಯನ್ನು ಜನತೆ ಗೆಲ್ಲಿಸಿದ್ದು ವಿಪರ್ಯಾಸವೆಂದ ಅವರು, ಬಿಜೆಪಿ ಹೇಗೆ ಪಂಚಾಯಿತಿಯಲ್ಲಿ ಅಧಿಕಾರಕ್ಕೆ ಬಂತು ಎಂಬುದರ ಮೇಲೆ ಚರ್ಚೆ ನಡೆಯಬೇಕಿದೆ ಎಂದು ಅಭಿಪ್ರಾಯಪಟ್ಟರು.ಮಾಜಿ ಶಾಸಕ ಎಸ್.ಎಲ್.ಧಮೇಗೌಡ ಮಾತನಾಡಿ, ಹಣ-ಹೆಂಡ ಹಂಚಿಕೆಯಿಂದ ಹೇಗೆ ಅಧಿಕಾರ ಹಿಡಿಯಬಹುದೆಂದು ಬಿಜೆಪಿ ತೋರಿಸಿಕೊಟ್ಟಿದೆ. ಕಾಂಗ್ರೆಸ್ ಮುಖಂಡರು ಬಿಜೆಪಿಯೊಂದಿಗೆ ಸೇರಿ ಪ್ರಜಾಪ್ರಭುತ್ವದ ವ್ಯವಸ್ಥೆಯನ್ನು ಬುಡಮೇಲು ಮಾಡಿ ಜೆಡಿಎಸ್ ಅನ್ನು ಮುಗಿಸಲು ರೂಪಿಸಿದ್ದ ಸಂಚನ್ನು ತರೀಕೆರೆ ಕ್ಷೇತ್ರದ ಜನತೆ ತಪ್ಪಿಸಿ ಜೆಡಿಎಸ್‌ಗೂ ಕ್ಷೇತ್ರದಲ್ಲಿ ಕಾರ್ಯಕರ್ತರ ದೊಡ್ಡ ಪಡೆಯಿದೆ ಎಂದು ತೋರಿಸಿದ್ದಾರೆ ಎಂದರು.

ಜಿಲ್ಲಾ ಪಂಚಾಯಿತಿಗೆ ಒಂದು ಸ್ಥಾನ ಮತ್ತು ತಾಲ್ಲೂಕು ಪಂಚಾಯಿತಿಗೆ ಮೂರು ಸ್ಥಾನವನ್ನು ಗೆಲ್ಲುಸುವ ಮೂಲಕ ಪಕ್ಷವನ್ನು ಬೆಂಬಲಿಸಿದ ಜನತೆಗೆ ಅಭಿನಂದಿಸುವುದಾಗಿ ಹೇಳಿದರು.ಚುನಾವಣೆಯಲ್ಲಿ ಗೆದ್ದ ಮತ್ತು ಸೋತ ಅಭ್ಯರ್ಥಿಗಳು ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಸಭೆ ಇದಾಗಿದ್ದು, ಕಾರ್ಯಕರ್ತರು ಧೃತಿಗೆಡದೆ ಪಕ್ಷದ ಏಳಿಗೆಗಾಗಿ ದುಡಿಯುವಂತೆ ಕರೆ ನೀಡಿದ ಅವರು, ಇಂದಿನ ಯುವ ಸಮೂಹ ಮುಕ್ತ ಮತ್ತು ನ್ಯಾಯಯುತ ಚುನಾವಣೆ ನಡೆಯುವಂತಾಗಲು ಮುಂದಾಗ ಬೇಕು ಎಂದರು.

ಜಿಲ್ಲಾ ಪಂಚಾಯಿತಿಯ ಪರಾಜಿತ ಅಭ್ಯರ್ಥಿ ಎಂ.ಡಿ.ದೇವೇಗೌಡ, ತಾಲ್ಲೂಕು ಪಂಚಾಯಿತಿ ಸದಸ್ಯರಾದ ಎಂ.ಸೀತಾರಾಮು, ಲತಾ, ಧರಣೇಶ್ ಮುಖಂಡರಾದ ಟಿ.ಎಲ್.ಕೃಷ್ಣಮೂರ್ತಿ, ತಾಲ್ಲೂಕು ಘಟಕದ ಅಧ್ಯಕ್ಷ ಮಲ್ಲಿಕಾರ್ಜುನಪ್ಪ, ಈಶ್ವರಪ್ಪ, ಶಿವಶಂಕರ್ ಕಾರ್ಯಕ್ರಮಲ್ಲಿ ಉಪಸ್ಥಿತರಿದ್ದು ಮಾತನಾಡಿದರು.ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯರಾದ ಶಾರದಮ್ಮ, ಪಿ.ಲೋಕೇಶ್, ಎಸ್.ಕೆ.ಕೃಷ್ಣಪ್ಪ, ಅಬ್ದುಲ್ ರಹಮಾನ್, ಲಿಂಗದಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಯೋಗೀಶ್, ರಾಮಚಂದ್ರ, ಮಹಾಬಲ, ವೆಂಕಟೇಶ್, ನಂಜುಡಪ್ಪ ಭಾಗವಹಿಸಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.