ADVERTISEMENT

ಭತ್ತ ವಶಕ್ಕೆ ರೈತ ಸಂಘ ಒತ್ತಾಯ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2011, 9:00 IST
Last Updated 3 ಫೆಬ್ರುವರಿ 2011, 9:00 IST

ಚಿಕ್ಕಮಗಳೂರು: ಅಕ್ರಮವಾಗಿ ಗೋದಾಮುಗಳಲ್ಲಿ ದಾಸ್ತನು ಮಾಡಿರುವ ಭತ್ತವನ್ನು ಅಧಿಕಾರಿಗಳು ತಕ್ಷಣ ವಶಪಡಿಸಿಕೊಳ್ಳಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘದ ತಾಲ್ಲೂಕು ಶಾಖೆ ಒತ್ತಾಯಿಸಿದೆ.

ಕಳೆದ ತಿಂಗಳು ಪ್ರತಿ ಕ್ವಿಂಟಾಲ್‌ಗೆ 1300ರಿಂದ 1400 ರೂಪಾಯಿಗಳವರೆಗೆ ಇದ್ದ ಭತ್ತದ ಬೆಲೆ ಈಗ ಕ್ವಿಂಟಾಲ್‌ಗೆ 900 ರೂಪಾಯಿಗಳಿಂದ 1000 ರೂಪಾಯಿಗೆ ಇಳಿದಿದೆ. ಒಮ್ಮೆಲೆ 300ರಿಂದ 400 ರೂಪಾಯಿಗಳು ಕುಸಿತ ಕಂಡಿದೆ. ಸುಗ್ಗಿ ಕಾಲ ಆರಂಭವಾಗಿರುವುದರಿಂದ ಭತ್ತದ ಬೆಲೆ ಮತ್ತಷ್ಟು ಕುಸಿಯುವ ಸಾಧ್ಯತೆಗಳಿವೆ ಎಂದು ತಾಲ್ಲೂಕು ಅಧ್ಯಕ್ಷ ಕೆ.ಪಿ.ಚಂದ್ರೇಗೌಡ ಮತ್ತು ಕಾರ್ಯದರ್ಶಿ ಟಿ.ಎ.ಮಂಜುನಾಥ ಪತ್ರಿಕಾ ಹೇಳಿಕೆಯಲ್ಲಿ ಆತಂಕ ವ್ಯಕ್ತಪಡಿಸಿದ್ದಾರೆ.

ಪ್ರತಿದಿನ 2ರಿಂದ 3ಲೋಡುಗಳಷ್ಟು ಭತ್ತ ಚಿಕ್ಕಮಗಳೂರು ಮಾರುಕಟ್ಟೆಯನ್ನು ತಲುಪುತ್ತಿದೆ. ಈ ಹಿಂದೆ ಇಲ್ಲಿಂದ ಮಹಾರಾಷ್ಟ್ರದ ಸಾಂಗ್ಲಿಗೆ ಭತ್ತವನ್ನು ನಿಯಮಿತವಾಗಿ ರವಾನಿಸಲಾಗುತ್ತಿತ್ತು. ಈ ಬಾರಿ ಅಲ್ಲಿ ಬೇಡಿಕೆ ಕಡಿಮೆಯಾಗಿರುವುದು ಬೆಲೆ ಕುಸಿತಕ್ಕೆ ಮುಖ್ಯ ಕಾರಣವಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.ಇದೇ ಸಂದರ್ಭವನ್ನು ದುರುಪಯೋಗ ಪಡಿಸಿಕೊಂಡಿರುವ ಕೆಲವರು ಗೋದಾಮಿನಲ್ಲಿ ಅಕ್ರಮವಾಗಿ ಭತ್ತವನ್ನು ಸಂಗ್ರಹಣೆಮಾಡಲು ಮುಂದಾಗಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ಸುಮಾರು 25ರಿಂದ 30ಸಾವಿರ ಚೀಲ ಭತ್ತವನ್ನು ಸಂಗ್ರಹಣೆ ಮಾಡಿರುವ ಸಾಧ್ಯತೆಗಳಿವೆ. ಬೆಲೆ ಕಡಿಮೆ ಇರುವಾಗ ಭತ್ತವನ್ನು ಸಂಗ್ರಹಿಸಿ, ಮೂರ್ನಾಲ್ಕು ತಿಂಗಳ ನಂತರ ಭತ್ತಕ್ಕೆ ಕೃತಕ ಅಭಾವ ಸೃಷ್ಟಿಸಿ ಹೆಚ್ಚುವರಿ ಬೆಲೆಗೆ ಮಾರಾಟಮಾಡುವ ಹುನ್ನಾರ ಕಂಡು ಬರುತ್ತಿದೆ ಎಂದು ಅವರು ಅನುಮಾನ ವ್ಯಕ್ತಪಡಿಸಿದ್ದಾರೆ.ರೈತರು ಭತ್ತವನ್ನು ದಾಸ್ತನು ಮಾಡಲು ಉಗ್ರಾಣಗಳು ಸಿಗುತ್ತಿಲ್ಲ. ಜಿಲ್ಲಾಧಿಕಾರಿಗಳು ಇತ್ತ ಗಮನ ಹರಿಸಿ ಅಕ್ರಮ ದಾಸ್ತಾನು ಇರುವ ಗೋದಾಮುಗಳನ್ನು ಪತ್ತೆಹಚ್ಚಿ ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ಅವರು ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.