ADVERTISEMENT

ಭದ್ರಾನದಿ ನೀರಿನ ಮಟ್ಟ ಏರಿಕೆ

ಕಳಸದಲ್ಲಿ ಮಳೆ ಬಿರುಸು

​ಪ್ರಜಾವಾಣಿ ವಾರ್ತೆ
Published 18 ಜೂನ್ 2013, 6:23 IST
Last Updated 18 ಜೂನ್ 2013, 6:23 IST

ಕಳಸ: ಹೋಬಳಿಯಾದ್ಯಂತ ಕಳೆದ ವಾರದಿಂದ ಸತತವಾಗಿ ಭಾರಿ ಮಳೆ ಸುರಿಯುತ್ತಿದೆ.

ಜೂನ್ 8ರಂದು ಆರಂಭಗೊಂಡ ಮಳೆಯು ಪ್ರತಿದಿನವೂ ಹದವಾಗಿ ಸುರಿಯುತ್ತಿದೆ. ಕಳೆದ ವರ್ಷ ಮಳೆಯ ಪ್ರಮಾಣ ಕೇವಲ 95 ಅಂಗುಲ ಆಗಿತ್ತು.  ಆದರೆ ಈಗಾಗಲೇ ಬಾರಿ ಈಗಾಗಲೇ 20 ಅಂಗುಲ ಮಳೆ ಆಗಿದ್ದು, ವಾಡಿಕೆಯ 120 ಅಂಗುಲಕ್ಕೆ ಏರಬಹುದು ಎಂಬ ನಂಬಿಕೆ ಮೂಡಿಸಿದೆ.

ಮಳೆಯ ಜತೆಗೆ ಆಗಾಗ್ಗೆ ಬೀಸುವ ರಭಸವಾದ ಗಾಳಿಯು ಚಳಿ ಹೆಚ್ಚಿಸಿದೆ. ಕಾಫಿ ತೋಟಗಳಲ್ಲಿ ಮರಗಳು ನೆಲಕ್ಕೆ ಉರುಳಿದರೆ ಅಡಿಕೆ ತೋಟಗಳಲ್ಲಿ ಅಡಿಕೆ ಮರಗಳೂ, ಬಾಳೆ ಗಿಡಗಳು ಮುರಿದು ಬಿದ್ದಿವೆ.   ಮಳೆಯಿಂದಾಗಿ ಬತ್ತದ ಕೃಷಿ ಚುರುಕಾಗಿದ್ದು, ಗದ್ದೆಯಲ್ಲಿ ಉಳುಮೆ, ಅಗಡಿಯ ಕೆಲಸಗಳು ನಡೆದಿವೆ.

ಆದರೆ ಮಳೆಯು ಕಾಫಿ ತೋಟದಲ್ಲಿ ಕೆಲಸವನ್ನು ಬಹುತೇಕ ಸ್ಥಗಿತಗೊಳಿಸಿದೆ. ಕಾಫಿ ಗಿಡಗಳಿಗೆ ಗೊಬ್ಬರ ನೀಡುವ ಮತ್ತು ಕಾಫಿ ಗಿಡ ಕಸಿ ಮಾಡುವ ಬೇಸಿಗೆ ಕಾಲದ ಕೆಲಸಗಳು ಈ ಬಾರಿ ಬಹುತೇಕ ತೋಟಗಳಲ್ಲಿ ಮುಗಿದಿಲ್ಲ. ಮಳೆಯಲ್ಲಿ ಈ ಕೆಲಸಗಳು ಅಸಾಧ್ಯವಾಗಿರುವುದರಿಂದ ಕೆಲ ಬೆಳೆಗಾರರು ಸಹಜ ಕಾಫಿ ಕೃಷಿ ಪ್ರಯೋಗಕ್ಕೆ ಕೈಹಾಕಿದಂತಾಗಿದೆ.

ಮಳೆ ಬಿಡುವು ನೀಡಿದರೆ ಅಡಿಕೆ ಕೊಳೆ ರೋಗಕ್ಕೆ ಔಷಧಿ ಸಿಂಪಡಿಸುವ ಕೆಲಸ ತುರ್ತಾಗಿ ನಡೆಯಬೇಕಿದೆ. ಮಳೆಯು ಚಹಾತೋಟದಲ್ಲಿ ಭರ್ಜರಿ ಸೊಪ್ಪು ಚಿಗುರಿಸಿದೆ. ಆದರೆ ಸೊಪ್ಪು ಕೊಯ್ಯಲು ಕಾರ್ಮಿಕರ ಕೊರತೆಯಿಂದಾಗಿ ಉತ್ಪತ್ತಿ ಕೈ ಸೇರದೆ ನಷ್ಟವಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.