ADVERTISEMENT

ಭಾರತೀಯ ಕಾಫಿ ವಿದ್ಯಾಲಯಕ್ಕೆ ರಜತ ಸಂಭ್ರಮ

ಎಚ್.ಎನ್.ಸತೀಶ್ ಜೈನ್
Published 16 ಜನವರಿ 2014, 6:47 IST
Last Updated 16 ಜನವರಿ 2014, 6:47 IST

ಸಿಆರ್ಎಸ್(ಬಾಳೆಹೊನ್ನೂರು): ಕೊಪ್ಪ ತಾಲ್ಲೂಕಿನ ಸೀಗೋಡು ಸಮೀಪದ ಕಾಫಿ ಸಂಶೋಧನಾ ಕೇಂದ್ರದ ಸಮೀಪ 1988-89ರಲ್ಲಿ ಎಲ್‌ಕೆಜಿಯಿಂದ ಆರಂಭಗೊಂಡ ಆಂಗ್ಲ ಮಾಧ್ಯಮ ಭಾರತೀಯ ಕಾಫಿ ವಿದ್ಯಾಲಯಕ್ಕೆ 25 ವರ್ಷ ತುಂಬಿದ್ದು, ಗುರುವಾರ ರಜತ ಮಹೋತ್ಸವ ಆಚರಣೆಗೆ ತಳಿರು ತೋರಣ, ಬಣ್ಣ ಅಲಂಕಾರದಿಂದ ಸಜ್ಚಾಗಿ ನವ ವಧುವಂತೆ ಕಂಗೊಳಿಸುತ್ತಿದೆ.

   1987ರಲ್ಲಿ ಕಾಫಿ ಕೇಂದ್ರದಲ್ಲೆ ಆಂಗ್ಲ ಮಾಧ್ಯಮ ಶಾಲೆ ತೆರೆಯಲು ಅಂದಿನ ಅಧಿಕಾರಿಗಳು, ಕಾಫಿ ಬೆಳೆಗಾರರು ಸೇರಿ  ನಿರ್ಧರಿಸಿದ ಪರಿಣಾಮ 14 ಜನ ಸದಸ್ಯರಿದ್ದ ಸಿ.ಆರ್.ಎಸ್ ಎಜುಕೇಷನ್ ಟ್ರಸ್ಟ್ ಅಸ್ತಿತ್ವಕ್ಕೆ ಬಂತು.  

ಆಂಗ್ಲ ಮಾಧ್ಯಮ ಶಾಲೆಯ ಅಗತ್ಯ ಕುರಿತು ಕಾಫಿ ಮಂಡಳಿಯ ಅಧಿಕಾರಿಗಳು ಅಂದಿನ ಕಾಫಿ ಮಂಡಳಿಯ ಉನ್ನತ ಅಧಿಕಾರಿಗಳಾದ ಜಿ.ವೈ.ಕೃಷ್ಣನ್ ಹಾಗೂ ಪಿ.ಕೆ.ರಾಮಯ್ಯ ಅವರ ಗಮನ ಸೆಳೆದರು. ಮನವಿಗೆ ಸ್ಪಂದಿಸಿದ ಅವರು ಕಾಫಿ ಸಂಶೋದನಾ ಕೇಂದ್ರದ ಪಕ್ಕದಲ್ಲೆ ಆಂಗ್ಲ ಮಾಧ್ಯಮ ಶಾಲೆ ತೆರೆಯಲು ನಿರ್ಧರಿಸಿದರು. 1988ರಲ್ಲಿ  ಭಾರತೀಯ ಕಾಫಿ ವಿದ್ಯಾಲಯ ಎಂಬ ನಾಮಾಂಕಿತದೊಂದಿಗೆ ಶಾಲೆ ಆರಂಭಗೊಂಡಿತು.

ಕಾಫಿ ಮಂಡಳಿಯ ಸಕಲ ನೆರವಿನೊಂದಿಗೆ ಮೂರು ಕೊಠಡಿಗಳಲ್ಲಿ ಶಾಲೆಯ ಪ್ರಥಮ ತರಗತಿಗಳನ್ನು ಎಲ್‌ಕೆಜಿ ಯೊಂದಿಗೆ ಆರಂಭಿಸಲಾಯಿತು. ಕೇವಲ 47 ವಿದ್ಯಾರ್ಥಿಗಳೊಂದಿಗೆ ಆರಂಭಗೊಂಡ ವಿದ್ಯಾಸಂಸ್ಥೆಯಲ್ಲಿ ಈ ಸಾಲಿನಲ್ಲಿ ಎಲ್‌ಕೆಜಿಯಿಂದ ಏಳನೇ ತರಗತಿಯವರೆಗಿನ 287 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಇಲ್ಲಿ ನುರಿತ ಮತ್ತು ಉತ್ತಮ ತರಬೇತಿ ಪಡೆದ ಶಿಕ್ಷಕರಿಂದ ಅತ್ಯುತ್ತಮ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ. ವಿದ್ಯಾಲಯದಲ್ಲಿ 14 ಶಿಕ್ಷಕರು ಸೇರಿದಂತೆ 20ಕ್ಕೂ ಹೆಚ್ಚು ಸಿಬ್ಬಂದಿಯನ್ನು ಹೊಂದಿದೆ.

ಸುಸಜ್ಜಿತವಾದ ಶಾಲಾ ಕಟ್ಟಡ, ವಿದ್ಯಾರ್ಥಿಗಳ ಅನುಕೂಲಕ್ಕಾಗಿ ವಿದ್ಯಾರ್ಥಿ ನಿಲಯ,  ವಿಶಾಲವಾದ ಆಟದ ಮೈದಾನ, ಎಲ್ಲಾ ವಿಧದ ಕ್ರೀಡಾ ಸಾಮಗ್ರಿಗಳು, ವಿಜ್ಞಾನ ಪ್ರಯೋ ಗಾಲಯ, ಗ್ರಂಥಾಲಯ, ವ್ಯವಸ್ಥಿತ ಕಂಪ್ಯೂಟರ್ ಕೇಂದ್ರ ಹೊಂದಿದ್ದು, ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡಲಾಗುತ್ತಿದೆ.

ಮುಖ್ಯವಾಗಿ ಪ್ರಕೃತಿಯ ಮಡಿಲಿನಲ್ಲಿ ಪ್ರಶಾಂತ ವಾತಾವರಣದಲ್ಲಿರುವ ವಿದ್ಯಾಲಯವು ಮಕ್ಕಳಿಗೆ ಮೌಲ್ಯವರ್ಧಿತ ಶಿಕ್ಷಣ ನೀಡುವಲ್ಲಿ ಪ್ರಮುಖ ಆದ್ಯತೆ ನೀಡಿದೆ. ಗ್ರಾಮೀಣ ವಿಭಾಗದ ವಿದ್ಯಾರ್ಥಿಗಳನ್ನು ಅವರನ್ನು ಮನೆಯಂಗಳ ದಿಂದಲೇ ವಿದ್ಯಾಲಯಕ್ಕೆ ಕರೆದುಕೊಂಡು ಹೋಗಲು ಉತ್ತಮ ವಾಹನ ಸೌಲಭ್ಯವಿದ್ದು, ಚಿಕ್ಕಮಕ್ಕಳ ವಿಷಯದಲ್ಲಿ ನುರಿತ ಶಿಕ್ಷಕರಿಂದ ಹೆಚ್ಚಿನ ಮುತುವರ್ಜಿ ವಹಿಸಲಾಗುತ್ತಿದೆ. ಇಲ್ಲಿನ ವಿದ್ಯಾರ್ಥಿಗಳು ಪ್ರತೀ ವರ್ಷವೂ ಕ್ರೀಡಾಚಟುವಟಿಕೆ ಹಾಗೂ ಇತರೆ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ರಾಜ್ಯ ಮತ್ತು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗುತ್ತಿರುವುದು ಗಮನಾರ್ಹ.

ಶೀಘ್ರದಲ್ಲಿ 8ನೇ ತರಗತಿ ಪ್ರಾರಂಭವಾಗಲಿದ್ದು, ವಿದ್ಯಾರ್ಥಿಗಳಿಗೆ ಟ್ರಸ್ಟ್ ಇನ್ನೂ ಹೆಚ್ಚಿನ ಅನುಕೂಲ ಮಾಡಿಕೊಡುವ ಪ್ರಯತ್ನ ನಡೆಸಿದೆ.
ಇಲ್ಲಿ ಕಲಿತ ವಿದ್ಯಾರ್ಥಿಗಳು ರಾಜ್ಯ, ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಉನ್ನತ ಹುದ್ದೆಗಳಲ್ಲಿ ಗುರುತಿಸಿಕೊಂಡು ವಿಶೇಷ ಛಾಪನ್ನೂ ಮೂಡಿಸಿದ್ದಾರೆ. ಸತತ 25 ವರ್ಷಗಳ ಸುಧೀರ್ಘ ಮತ್ತು ಸಾರ್ಥಕ ಶಿಕ್ಷಣ ಸೇವೆಯಲ್ಲಿರುವ ಟ್ರಸ್ಟ್ ಇದೀಗ ರಜತ ಮಹೋತ್ಸವದ ಸಂಭ್ರಮದಲ್ಲಿದ್ದು, ಇದೇ 16ರಂದು ವಿಶೇಷ ಬೆಳ್ಳಿ ಹಬ್ಬವನ್ನು ಆಯೋಜಿಸಲಾಗಿದೆ.

ಗುರುವಾರ ಸಂಜೆ 5ರಿಂದ ನಡೆಯುವ ಬೆಳ್ಳಿಹಬ್ಬದ ವಿಶೇಷ ಸಂಭ್ರಮಾಚರಣೆಗೆ ಶಿಕ್ಷಕ ವೃಂದ, ವಿದ್ಯಾರ್ಥಿಗಳು ಕಳೆದ ಒಂದು ತಿಂಗಳಿನಿಂದ ಸಜ್ಜಾಗುತ್ತಿದ್ದು ಕಾರ್ಯಕ್ರಮಗಳ ತಾಲೀಮು ಮುಗಿಲು ಮುಟ್ಟಿದೆ. 

ರಂಭಾಪುರಿ ಶ್ರೀಗಳ ಸಾನಿಧ್ಯದಲ್ಲಿ ಕಾರ್ಯಕ್ರಮ ಬಾಳೆಹೊನ್ನೂರಿನ ರಂಭಾಪುರಿ ಪೀಠದ ಜಗದ್ಗುರು ವೀರ ಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ಭಾರತೀಯ ಕಾಫಿ ವಿದ್ಯಾಲಯದ ರಜತ ಸಂಭ್ರಮ ಕಾರ್ಯಕ್ರಮ ಸಾನಿಧ್ಯ ವಹಿಸಲಿದ್ದು, ಶಾಸಕ ಡಿ.ಎನ್.ಜೀವರಾಜ್, ಟ್ರಸ್ಟ್ ಅಧ್ಯಕ್ಷ ಹಾಗೂ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ. ಮಕ್ಕಳಿಂದ ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.