ADVERTISEMENT

ಭುವನಕೋಟೆ ರಸ್ತೆ ಅವ್ಯವಸ್ಥೆ: ಬಾಳೆಗಿಡ ನೆಟ್ಟು ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 25 ಜೂನ್ 2013, 10:56 IST
Last Updated 25 ಜೂನ್ 2013, 10:56 IST

ಜಯಪುರ (ಬಾಳೆಹೊನ್ನೂರು): ಭುವನಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೂತೊಳ್ಳಿ, ಹೆದ್ಸೆ ಗ್ರಾಮಸ್ತರು ರಸ್ತೆ ಅವ್ಯವಸ್ಥೆ ವಿರೋಧಿಸಿ ಕೆಸರಿನಿಂದ ಕೂಡಿದ ರಸ್ತೆಯ ಮಧ್ಯದಲ್ಲಿ ಬಾಳೆಗಿಡ ನೆಟ್ಟು ಭಾನುವಾರ ಪ್ರತಿಭಟನೆ ನಡೆಸಿದರು.

ಲೋಕನಾಥಪುರದಿಂದ ಮೂತೊಳ್ಳಿ, ಒಪ್ಪಗ ಮೂಲಕ ಹೆದ್ಸೆಗೆ ಸಾಗುವ ಪಂಚಾಯಿತಿ ರಸ್ತೆಗೆ ಕಳೆದ ಎರಡು ತಿಂಗಳ ಹಿಂದೆ ಪಂಚಾಯಿತ ವತಿಯಿಂದ ಒಂದು ಲಕ್ಷ ರೂಪಾಯಿ ವ್ಯಯಿಸಿ ಜಲ್ಲಿ ಹಾಕಲಾಗಿತ್ತು. ಆದರೆ ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದ ಪರಿಣಾಮ ಸಂಚಾರ ದುಸ್ತರವಾಗಿದೆ.

ಮೂತೊಳ್ಳಿ ಗ್ರಾಮದಲ್ಲಿ ಸುಮಾರು 400ಕ್ಕೂ ಹೆಚ್ಚು ಜನ ವಾಸಿಸುತ್ತಿದ್ದು ಗ್ರಾಮಕ್ಕೆ ಕುಡಿಯುವ ನೀರು, ವಿದ್ಯುತ್, ಸಮರ್ಪಕ ರಸ್ತೆ ಸೌಕರ್ಯಗಳಿಲ್ಲದೆ ಪರದಾಡುವಂತಾಗಿದೆ. ಇದರಿಂದ ಬೇಸತ್ತ ನೂರಾರು ಜನ ಭಾನುವಾರ ರಸ್ತೆ ಮಧ್ಯದಲ್ಲಿ ಬಾಳೆಗಿಡ ನೆಟ್ಟು ಪ್ರತಿಭಟಿಸಿದರು.

ರಸ್ತೆ ಅವ್ಯವಸ್ಥೆಯಿಂದಾಗಿ ಶಾಲಾ ಕಾಲೇಜುಗಳಿಗೆ, ಪಟ್ಟಣಕ್ಕೆ ತೆರಳುವ ಗ್ರಾಮಸ್ಥರಿಗೆ ತೀವ್ರ ತೊಂದರೆ ಉಂಟಾಗಿದೆ. ಇತ್ತೀಚೆಗೆ ಈ ರಸ್ತೆಯಲ್ಲಿ ವಾಹನ ಉರುಳಿಬಿದ್ದ ಪರಿಣಾಮ ಇಬ್ಬರಿಗೆ ಗಾಯವಾಗಿದೆ. ಶಾಸಕ ಡಿ.ಎನ್.ಜೀವರಾಜ್ ವೈಫಲ್ಯವೆ ಈ ದುಃಸ್ಥಿತಿಗೆ ಕಾರಣ ಎಂದು ಪ್ರತಿಭಟನಾಕಾರರು ದೂರಿದ್ದಾರೆ.

ಪ್ರತಿಭಟನಾಕಾರರನ್ನು ಭುವನಕೋಟೆ ಗ್ರಾಮ ಪಂಚಾಯಿತಿ ಅಧ್ಯಕ್ಷರು ದೂರವಾಣಿ ಮೂಲಕ ಸಂಪರ್ಕಿಸಿ ತಕ್ಷಣ ರಸ್ತೆ ದುರಸ್ತಿಗೊಳಿಸುವ ಭರವಸೆ ನೀಡಿದ ಹಿನ್ನೆಲೆಯಲ್ಲಿ ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಹಿಂಪಡೆದರು. ನಿಗದಿತ ಅವಧಿಯೊಳಗೆ ದುರಸ್ತಿ ನಡೆಸಲು ಆಡಳಿತ ಯಂತ್ರ ವಿಫಲವಾದಲ್ಲಿ ಮುಖ್ಯ ರಸ್ತೆ ತಡೆದು ಪ್ರತಿಭಟಿಸುವುದಾಗಿ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.

ಪ್ರತಿಭಟನೆಯಲ್ಲಿ ಗ್ರಾಮದ ಲಕ್ಷ್ಮೀ ನಾರಾಯಣ, ಎಂ.ಎಸ್.ಸುಬ್ರಮ್ಮಣ್ಯ, ಎಂ.ಪಿ.ನಾಗೇಶ್, ಮೂತೊಳ್ಳಿ ರವಿ, ಪದ್ಮಾ, ಎಂ.ಕೆ.ಗೋಪಾಲ, ರಮೇಶ, ಸದಾನಂದ, ಜಯಾ, ಬಾಬು, ಸುಶೀಲಾ ಮತ್ತಿತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.