ADVERTISEMENT

ಮಕ್ಕಳ ಅಂಗವೈಕಲ್ಯ-ಜಾಗ್ರತೆ ಅಗತ್ಯ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2012, 9:15 IST
Last Updated 20 ಫೆಬ್ರುವರಿ 2012, 9:15 IST

ತರೀಕೆರೆ: ಅಂಗವೈಕಲ್ಯತೆ  ಹೋಗಲಾಡಿಸಲು ಸರ್ಕಾರ ಸಾಕಷ್ಟು ಮುಂಜಾಗ್ರತಾ ಕ್ರಮವನ್ನು ಕೈಗೊಂಡಿದೆ ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕಾಧಿಕಾರಿ ಸಿ.ದೇವರಾಜ್ ತಿಳಿಸಿದರು.

ಇಲ್ಲಿನ ಸಾರ್ವಜನಿಕ ಆಸ್ಪತ್ರೆ ಭಾನುವಾರ ಆವರಣದಲ್ಲಿ ಏರ್ಪಡಿಸಿದ್ದ ಪಲ್ಸ್ ಪೋಲಿಯೊ ಹನಿ ಹಾಕುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಜಾಗತಿಕ ಮಟ್ಟದಲ್ಲಿ ಏಕ ಕಾಲದಲ್ಲಿ ಎಲ್ಲಾ ಕಡೆ ಹನಿ ಹಾಕುವುದರಿಂದ ಪೋಲಿಯೊ ನಿರ್ಮೂಲನೆ ಸಾಧ್ಯ ಎಂದರು.

ಜನತೆಗೆ ಈ ಬಗ್ಗೆ ಅರಿವು ಮೂಡಿಸಲು ಆಶಾ ಕಾರ್ಯಕರ್ತೆಯರು ಮುಂದಾಗಬೇಕು, ಮಲೇರಿಯ, ಸಿಡುಬು ಮತ್ತು ಕಾಲರಾದಂತ  ರೋಗಗಳನ್ನು ಗಡಿದಾಟಿಸಿದ ನಾವು ಪೋಲಿಯೊ  ಬಗ್ಗೆ ತೋರುತ್ತಿರುವ ಉದಾಸೀನತೆ  ಕೈ ಬಿಡಬೇಕು ಎಂದರು.

ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಪ್ರಸನ್ನ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಮಲ್ಲಿಕಾರ್ಜುನ್, ರೋಟರಿ ಅಧ್ಯಕ್ಷ ಶ್ರೀಧರ್, ಗ್ಯಾಸ್ ರಾಜಣ್ಣ, ಶಶಾಂಕ್, ಪ್ರವೀಣ್ ನಹರ್, ಡಾ.ಗಿರೀಶ್, ಡಾ.ಎನ್.ಆಚಾರ್ಯ, ಡಾ.ಅಂಜನಾ ಆಚಾರ್ಯ, ಡಾ.ಶರತ್, ಡಾ.ದೇವರಾಜ್ ಮುಂತಾ ದವರು ಇದ್ದರು.

6418 ಮಕ್ಕಳಿಗೆ ಪೋಲಿಯೊ ಹನಿ
ನರಸಿಂಹರಾಜಪುರ:
ಭಾನುವಾರ ನಡೆದ ಪಲ್ಸ್ ಪೋಲಿಯೊ ಹನಿ ಕಾರ್ಯಕ್ರಮದಲ್ಲಿ 97 ಬೂತ್‌ಗಳಲ್ಲಿ ಒಟ್ಟು 6418 ಮಕ್ಕಳಿಗೆ ಹನಿ ಹಾಕಲಾಗಿದ್ದು, ಒಟ್ಟು ಶೇಕಡ 89ರಷ್ಟು ಗುರಿ ಸಾಧಿಸಲಾಗಿದೆ.

ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಪಲ್ಸ್ ಪೋಲಿಯೊ ಕಾರ್ಯಕ್ರಮಕ್ಕೆ ತಹಸೀಲ್ದಾರ್ ಜೆ.ಕೃಷ್ಣಮೂರ್ತಿ ಚಾಲನೆ ನೀಡಿದರು. ಸರ್ಕಾರಿ ಆಸ್ಪತ್ರೆ ವೈದ್ಯ ಡಾ.ಬಾಲಕೃಷ್ಣ ಇದ್ದರು.  

ತಾಲ್ಲೂಕಿನ ವ್ಯಾಪ್ತಿಯಲ್ಲಿ ಒಟ್ಟು 7184 ಮಕ್ಕಳಿಗೆ ಪಲ್ಸ್ ಪೋಲಿಯೊ ಲಸಿಕೆ ಹಾಕುವ ಗುರಿ ಹೊಂದಲಾಗಿತ್ತು. ಸೋಮವಾರ ಮತ್ತು ಮಂಗಳವಾರ ಮನೆ ಮನೆಗೆ ತೆರಳಿ ಪಲ್ಸ್ ಪೋಲಿಯೊ ಹನಿ ಹಾಕುವುದರ ಮೂಲಕ ಶೇಕಡ 100ರಷ್ಟು ಗುರಿ ತಲುಪಲಾಗುವುದು ಎಂದು ಮೂಲಗಳು ತಿಳಿಸಿವೆ. ಭಾನುವಾರ ನಡೆದ ಪಲ್ಸ್‌ಪೋಲಿಯೊ ಕಾರ್ಯಕ್ರಮದಲ್ಲಿ 219 ವಲಸೆ ಬಂದ ಮಕ್ಕಳಿಗೂ  ಹನಿ ಹಾಕಲಾಗಿದೆ. 


ಜಿಲ್ಲೆಯಲ್ಲಿ ಶೇ 84ರಷ್ಟು ಸಾಧನೆ
ಚಿಕ್ಕಮಗಳೂರು:
ಜಿಲ್ಲೆಯ ವಿವಿಧ ಭಾಗದಲ್ಲಿ ಭಾನುವಾರ ಪಲ್ಸ್ ಪೋಲಿಯೊ ಲಸಿಕೆ ಹಾಕುವ ಕಾರ್ಯಕ್ರಮ ನಡೆಯಿತು.
ಜಿಲ್ಲೆಯಾದ್ಯಂತ ಒಟ್ಟಾರೆ ಶೇ 84 ರಷ್ಟು ಪೋಲಿಯೊ ಗುರಿ ಸಾಧಿಸಲಾಗಿದೆ. 1.20 ಲಕ್ಷ ಮಕ್ಕಳಿಗೆ ಹನಿ ಹಾಕುವ ಗುರಿ ಇಟ್ಟುಕೊಳ್ಳಲಾಗಿತ್ತು. ಗ್ರಾಮಾಂತರ ಪ್ರದೇಶದಲ್ಲಿ ಸೋಮವಾರವೂ ಹನಿ ಹಾಕುವ ಕಾರ್ಯ ನಡೆಯಲಿದೆ. ನಗರ ಪ್ರದೇಶದಲ್ಲಿ ಮೂರು ದಿನ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.