ADVERTISEMENT

ಮಾನವನ ಕುಕೃತ್ಯದಿಂದ ಪರಿಸರಕ್ಕೆ ಹಾನಿ

ವಿಶ್ವ ಪರಿಸರ ದಿನಾಚರಣೆ– ಪ್ರಧಾನ ಸಿವಿಲ್‌ ನ್ಯಾಯಾಧೀಶೆ ಎಂ.ಎಸ್‌. ಶಶಿಕಲಾ ಅಭಿಪ್ರಾಯ

​ಪ್ರಜಾವಾಣಿ ವಾರ್ತೆ
Published 6 ಜೂನ್ 2018, 11:57 IST
Last Updated 6 ಜೂನ್ 2018, 11:57 IST

ಮೂಡಿಗೆರೆ: ಜಗತ್ತಿನ ಜೀವಸಂಕುಲದ ಉಳಿವಿಗೆ ಸ್ವಚ್ಛ ಪರಿಸರದ ಅಗತ್ಯವಿದೆ ಎಂದು ಜೆಎಂಎಫ್‌ ನ್ಯಾಯಾಲಯದ ಪ್ರಧಾನ ಸಿವಿಲ್‌ ನ್ಯಾಯಾಧೀಶೆ ಎಂ.ಎಸ್‌. ಶಶಿಕಲಾ ಅಭಿಪ್ರಾಯಪಟ್ಟರು.

ಪಟ್ಟಣದ ಲೋಕವಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಅರಣ್ಯ ಇಲಾಖೆ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಮಂಗಳವಾರ ನಡೆದ ವಿಶ್ವ ಪರಿಸರ ದಿನಾಚರಣೆಯಲ್ಲಿ ಸಸಿನೆಟ್ಟು ಅವರು ಮಾತನಾಡಿದರು.

‘ಜಗತ್ತಿನಾದ್ಯಂತ ಪರಿಸರ ನಾಶವಾಗುತ್ತಿರುವುದು ಜೀವ ಸಂಕುಲದ ಉಳಿವಿಗೆ ಸಂಚಕಾರ ತಂದಿದೆ. ಅರಣ್ಯಸಂಪತ್ತಿನ ಕೊರತೆಯಿಂದ ಜಾಗತಿಕ ತಾಪಮಾನ ಏರಿಕೆಯಾಗಿ, ದಿನದಿಂದ ದಿನಕ್ಕೆ ಸಮುದ್ರಮಟ್ಟವು ಹೆಚ್ಚಳವಾಗುತ್ತಿದೆ. ಇದರಿಂದ ಜಗತ್ತಿನ ಕರಾವಳಿ ಭಾಗವು ಮುಳುಗಡೆಯಾಗುವ ಸಂದಿಗ್ಧತೆಯನ್ನು ಎದುರಿಸುತ್ತಿದೆ. ಇದನ್ನು ತಡೆಯುವ ಜವಾಬ್ದಾರಿ ಪ್ರತಿಯೊಬ್ಬ ವ್ಯಕ್ತಿಯ ಮೇಲಿದೆ ಎಂದರು.

ADVERTISEMENT

ಯಾವುದೇ ತಪ್ಪುಗಳನ್ನು ಮಾಡದ ಪ್ರಾಣಿಪಕ್ಷಿಗಳು, ಮಾನವನ ಕುಕೃತ್ಯದಿಂದ ಹಾನಿಗೊಳಗಾಗು ವಂತಾಗಿದೆ. ಪ್ರತಿಯೊಬ್ಬರೂ ಸಸಿಗಳನ್ನು ನೆಟ್ಟು ಹಾರೈಕೆ ಮಾಡುವ ಮೂಲಕ, ಉತ್ತಮ ಪರಿಸರ ನಿರ್ಮಾಣಕ್ಕೆ ಕೈ ಜೋಡಿಸಬೇಕು ಎಂದು ಅವರು ಹೇಳಿದರು.

ನ್ಯಾಯಾಲಯದ ಹೆಚ್ಚುವರಿ ಸಿವಿಲ್‌ ನ್ಯಾಯಾಧೀಶೆ ಪ್ರಕೃತಿ ಕಲ್ಯಾಣ್‌ ಪುರ್‌ ಮಾತನಾಡಿ, ‘ಮುಂದಿನ ಪೀಳಿಗೆಗೂ ಉತ್ತಮ ಪರಿಸರ
ವನ್ನು ಬಿಟ್ಟುಕೊಡುವುದು ನಮ್ಮೆಲ್ಲರ ಜವಬ್ದಾರಿಯಾಗಿದೆ. ಇಂಗಾಲದ ಪ್ರಮಾಣವನ್ನು ತ್ವರಿತವಾಗಿ ಕಡಿಮೆಗೊಳಿಸುವ ಅನಿವಾರ್ಯತೆಯಿದ್ದು, ಗಿಡಮರಗಳನ್ನು ಹೆಚ್ಚು ಬೆಳೆಯುವ ಮೂಲಕ ಪರಿಸರದ ಸಮತೋಲನವನ್ನು ಕಾಪಾಡಿಕೊಳ್ಳಬೇಕು’ ಎಂದರು.

ವಕೀಲರ ಸಂಘದ ಅಧ್ಯಕ್ಷ ಅಶೋಕ್‌ ಮಾತನಾಡಿ, ‘ಪರಿಸರ ಮಾಲಿನ್ಯದಿಂದ ಎಲ್ಲ ಜೀವಿಗಳ ಜೀವನ ಚಕ್ರವೇ ಅದಲು ಬದಲಾಗುತ್ತದೆ. ಪರಿಸರ ಸಂರಕ್ಷಣೆ ಮಾಡಿಕೊಳ್ಳದಿದ್ದರೆ ಭವಿಷ್ಯದಲ್ಲಿ ಆಮ್ಲಜನಕವನ್ನು ಖರೀದಿಮಾಡುವ ಕಾಲ ಎದುರಾದರೂ ಅಚ್ಚರಿ ಪಡಬೇಕಿಲ್ಲ. ಆದ್ದರಿಂದ ಮಾನವನು ಜಾಗೃತನಾಗಿ ಸಸಿಗಳನ್ನು ನೆಟ್ಟು ಮುಂದಿನ ಪೀಳಿಗೆಗೆ ಉತ್ತಮ ಪರಿಸರವನ್ನು ಬಿಟ್ಟುಕೊಡಬೇಕು’ ಎಂದರು.

ಕಾರ್ಯಕ್ರಮದಲ್ಲಿ ವಲಯ ಅರಣ್ಯಾಧಿಕಾರಿ ಪ್ರಹ್ಲಾದ್‌, ವಕೀಲರ ಸಂಘದ ಕಾರ್ಯದರ್ಶಿ ಸುರೇಶ್‌, ವಕೀಲರಾದ ಡಿ.ಕೆ. ಪ್ರಸನ್ನ, ದೇವರಾಜ್‌, ಶಿಕ್ಷಕ ನವೀನ್‌, ಗ್ರಾಮಸ್ಥರಾದ ಲೋಕವಳ್ಳಿ ರಮೇಶ್‌ ಮುಂತಾದವರಿದ್ದರು.

ಪರಿಸರದ ಮೇಲೆ ಮಾನವ ನಿಂದಲೇ ಹೆಚ್ಚು ಹಾನಿಯಾಗುತ್ತಿದ್ದು, ಇದರ ಪರಿಣಾಮ ಮಾತ್ರ ಜಗತ್ತಿನ ಎಲ್ಲಾ ಜೀವರಾಶಿಗಳು ಅನುಭವಿಸುವಂತಾಗಿದ
- ಎಂ.ಎಸ್‌. ಶಶಿಕಲಾ, ಸಿವಿಲ್‌ ನ್ಯಾಯಾಧೀಶೆ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.