ADVERTISEMENT

ಮೇವು ಬೆಳೆ: ಮಿನಿಕಿಟ್ ಖರೀದಿಗೆ ಹಣ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2012, 7:00 IST
Last Updated 13 ಅಕ್ಟೋಬರ್ 2012, 7:00 IST

ತರೀಕೆರೆ: ಜಾನುವಾರುಗಳಿಗೆ ಮೇವು ಬೆಳೆಯಲು 15 ಸಾವಿರ ಮಿನಿಕಿಟ್ ಖರೀದಿಸಲು ರೂ. 20ಲಕ್ಷ ಹಣವನ್ನು ತಕ್ಷಣ ಬಿಡುಗಡೆ ಮಾಡಲಾಗುವುದು. ನೀರಿನ ಲಭ್ಯತೆಯಿರುವಲ್ಲಿ ಮೇವು ಬೆಳೆಯಲು ರೈತರನ್ನು ಪ್ರೋತ್ಸಾಹಿಸುವಂತೆ ಜಿಲ್ಲಾಧಿಕಾರಿ ಅಂಜನ್‌ಕುಮಾರ್ ಪಶು ಸಂಗೋಪನಾ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಇಲ್ಲಿನ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಬರಪರಿಹಾರ ಸಭೆಯಲ್ಲಿ ಅವರು ಮಾತನಾಡಿದರು.

ಬರಗಾಲದ ಅವಧಿಯಲ್ಲಿ ಎಲ್ಲೆಲ್ಲಿ ಮೇವು ದಾಸ್ತಾನು ಮಾಡಬೇಕು ಮತ್ತು 150ಟನ್ ಒಣಮೇವು ಮತ್ತು 50 ಟನ್ ಹಸಿರು ಮೇವನ್ನು ಸಂಹಗ್ರಹಿಸಲು, ಎಲ್ಲಿ ಅಗತ್ಯವಿದೆಯೋ ಅಲ್ಲಿ ತಕ್ಷಣವೇ ಗೋ ಶಾಲೆ ತೆರೆಯುವಂತೆ ಸೂಚನೆ ನೀಡಿದರು.

ರಸಗೊಬ್ಬರವನ್ನು ಹೆಚ್ಚು ಬೆಲೆಗೆ ಮಾರಾಟ ಮಾಡುತ್ತಿರುವ ಖಾಸಗಿ ಗೊಬ್ಬರ ವಿತರಕರ ಮೇಲೆ ಶಿಸ್ತುಕ್ರಮ ಕೈಗೊಂಡು ಅವರ ಅನುಮತಿಯನ್ನು ರದ್ದುಗೊಳಿಸುವಂತೆ ಕಟ್ಟುನಿಟ್ಟಿನ ಆದೇಶಿಸಿದ ಜಿಲ್ಲಾಧಿಕಾರಿ, ಸುವರ್ಣ ಭೂಮಿ ಯೋಜನೆಯಲ್ಲಿ ಮಿಕ್ಕ ಫಲಾನುಭವಿಗಳಿಗೆ ಶೀಘ್ರದಲ್ಲಿ ಹಣವಿತರಿಸಲಾಗುವುದು ಎಂದರು.

ಕೆಟ್ಟಿರುವ ಮತ್ತು ಸ್ಥಗಿತಗೊಂಡಿರುವ ಕೊಳವೆ ಬಾವಿಗಳನ್ನು ಪುನಶ್ಚೇತನಗೊಳಿಸಲು ಹೈಡ್ರೋಪ್ರೆಷರ್ ಯಂತ್ರವನ್ನು ಪ್ರಾಯೋಗಿಕವಾಗಿ ಹಲವೆಡೆ ಬಳಸಬೇಕು. ಜಾನುವಾರುಗಳಿಗೆ ಕುಡಿಯುವ ನೀರು ಒದಗಿಸಲು ನೀರಿನ ತೊಟ್ಟಿ ನಿರ್ಮಿಸುವಂತೆ ತಿಳಿಸಿದ ಅವರು, ತರೀಕೆರೆ ಪಟ್ಟಣಕ್ಕೆ ಕುಡಿಯುವ ನೀರನ್ನು ಶಾಶ್ವತವಾಗಿ ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಶಾಸಕ ಡಿ.ಎಸ್.ಸುರೇಶ್ ಮಾತನಾಡಿ ತಾಲ್ಲೂಕಿನ ಅಜ್ಜಂಪುರ, ಕುಡ್ಲೂರು, ಶಿವನಿಯ ಬಯಲು ಪ್ರದೇಶಕ್ಕೆ ನೀರನ್ನು ಪೂರೈಸಲು ಆದ್ಯತೆ ನೀಡಬೇಕು. ಮಳೆ ಬಂದರೂ ಮೇವಿನ ಲಭ್ಯತೆಯ ಕೊರತೆಯ ಕಾರಣ ಅಧಿಕಾರಿಗಳು ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎಂದರು.

ತಹಶೀಲ್ದಾರ್ ರಂಜಿತಾ ಮಾತನಾಡಿ, ತಾಲ್ಲೂಕಿಗೆ 821 ಲಕ್ಷ ರೂ. ಹಣವನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿದ್ದು, ಈ ಬಗ್ಗೆ ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶದ ಜನರಿಗೆ ಕುಡಿಯುವ ನೀರು ವಿತರಿಸುವ ಕ್ರಿಯಾಯೋಜನೆ ಸಿದ್ಧವಾಗಿದೆ ಎಂದರು.

ಪಶುಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಕೊಟ್ರೇಶಪ್ಪ, ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಸಿದ್ದರಾಜು, ಪಂಚಾಯಿತಿ ಇಲಾಖೆ ಎಇಇ ಗಣೇಶ್ ಇಲಾಖೆ ಕೈಗೊಂಡಿರುವ ಕ್ರಮಗಳನ್ನು ವಿವರಿಸಿದರು.

ಜಿ.ಪಂ. ಸ್ಥಾಯಿಸಮಿತಿ ಅಧ್ಯಕ್ಷ ಕೆ.ಆರ್.ಆನಂದಪ್ಪ, ಮಾಜಿ ಉಪಾಧ್ಯಕ್ಷ ಶಂಬೈನೂರು ಆನಂದಪ್ಪ ಉಪ ವಿಭಾಗಾಧಿಕಾರಿ ಅನುರಾಧ, ಚಿಕ್ಕಮಗಳೂರು ಉಪ ವಿಭಾಗಾಧಿಕಾರಿ ಪ್ರಶಾಂತ್, ಪಂಚಾಯಿತಿ ಇಒ ಸಿ.ದೇವರಾಜಪ್ಪ, ತಾಲ್ಲೂಕಿನ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.