ADVERTISEMENT

ರಾಜಕೀಯ ಪಕ್ಷಕ್ಕೆ ಬದ್ಧತೆ ಇಲ್ಲ

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2011, 9:10 IST
Last Updated 27 ಫೆಬ್ರುವರಿ 2011, 9:10 IST

ಬೀರೂರು: ಎಲ್ಲ ರಾಜಕೀಯ ಪಕ್ಷಗಳಲ್ಲಿ ಶಿಸ್ತು, ನೀತಿ ಮತ್ತು ಬದ್ಧತೆ ಕಡಿಮೆಯಾಗಿದ್ದು, ಯುವಕರ ಪಾಲ್ಗೊಳ್ಳುವಿಕೆಯಿಂದ ಸ್ವಚ್ಛ ರಾಜಕಾರಣದ ಹೊಸ ಶಕೆ ಆರಂಭವಾಗಬೇಕಿದೆ ಎಂದು ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಬೈರೇಗೌಡ ಅಭಿಪ್ರಾಯಪಟ್ಟರು.

ಬೀರೂರಿನ ಪತ್ರೆ.ಕೆ.ಚನ್ನವೀರಪ್ಪಯ್ಯ ಕಲ್ಯಾಣಮಂದಿರದಲ್ಲಿ ಶನಿವಾರ ನಡೆದ ಯುವ ಕಾಂಗ್ರೆಸ್ ಸದಸ್ಯತ್ವ ನೋಂದಣಿ ಮತ್ತು ಜಾಗೃತಿ ಅಭಿಯಾನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ದೇಶ ಶೇ.70ರಷ್ಟಿರುವ ಯುವಕರ ಸಾಧನೆಗಳಿಂದ ಎಲ್ಲ ರಂಗಗಳಲ್ಲಿ ಅಪಾರ ಬದಲಾವಣೆಯೊಂದಿಗೆ ಮುನ್ನುಗ್ಗುತ್ತಿದ್ದು ಎರಡು ಪ್ರಮುಖ ಕ್ಷೇತ್ರಗಳಾದ ರಾಜಕಾರಣ ಮತ್ತು ಕೃಷಿಯಲ್ಲಿ ಯುವಕರ ಪಾಲ್ಗೊಳ್ಳುವಿಕೆ ಕಡಿಮೆಯಾಗಿದೆ. ಇದು ಬೆಳವಣಿಗೆಗೆ ಪೂರಕವಾದ ಸಂಗತಿಯಲ್ಲ,ಹಾಗಾಗಿ ಇಂದಿನ ಯುವಕರು ಈ ಕ್ಷೇತ್ರಗಳಲ್ಲಿ ಹೆಚ್ಚು ಗುರುತಿಸಿಕೊಳ್ಳಬೇಕು ಎಂದು ಅವರು ಕರೆ ನೀಡಿದರು.
ಯುವ ಕಾಂಗ್ರೆಸ್ ಸ್ಪಷ್ಟ ಮತ್ತು ವ್ಯವಸ್ಥಿತ ಸಂಘಟನೆಯ ಮೂಲಕ ಸುಭದ್ರ ಕಾರ್ಯಕರ್ತರ ಪಡೆ ರಚಿಸಲಿದೆ. ತಿಂಗಳ ಅವಧಿಯಲ್ಲಿ ಸದಸ್ಯತ್ವ ನೋಂದಣಿ ನಡೆಯಲಿದ್ದು ನಂತರ ರಾಹುಲ್ ಗಾಂಧಿ ಕಾಂಗ್ರೆಸ್ ಪುನಶ್ಚೇತನಕ್ಕಾಗಿ ರಾಜ್ಯದಲ್ಲಿ ಸಂಚಾರ ನಡೆಸಲಿದ್ದಾರೆ ಎಂದರು.

ವಿಧಾನ ಪರಿಷತ್ ವಿರೋಧಪಕ್ಷದ ನಾಯಕಿ ಮೋಟಮ್ಮ ಮಾತನಾಡಿ, ರೈತರ ಪರ ಎಂದು ಕೃಷಿ ಬಜೆಟ್ ಮಂಡಿಸಿರುವ ಬಿಜೆಪಿ ಸರ್ಕಾರ ಏನೂ ಹೊಸತನ್ನು ನೀಡಿಲ್ಲ,ನಾನಾ ಇಲಾಖೆಗಳ ಹಣ ಕಡಿತಗೊಳಿಸಿ ಕೃಷಿಗೆ ಮೀಸಲು ಎಂದು ಘೋಷಿಸಿದ್ದಾರೆ ಅಷ್ಟೆ. ಪ್ರಮುಖವಾಗಿ ಗ್ರಾಮೀಣಾಭಿವೃದ್ಧಿ ಮತ್ತು ವಸತಿ ಯೋಜನೆಗಳನ್ನು ಕಡೆಗಣಿಸಿರುವ ಇವರು ಒಂದೂ ಜೀವಂತಿಕೆ ಇರುವ ಯೋಜನೆಯನ್ನು ರೂಪಿಸಿಲ್ಲ ಎಂದು ಆರೋಪಿಸಿ ಕಾಂಗ್ರೆಸ್ ತನ್ನ ಅಧಿಕಾರಾವಧಿಯಲ್ಲಿ ಬಡವರಿಗಾಗಿಯೇ ಅನೇಕ ಯೋಜನೆಗಳನ್ನು ರೂಪಿಸಿದೆ ಆದರೆ ಪ್ರಚಾರಕ್ಕಾಗಿ ಘೋಷಣೆಗಳನ್ನು ಹೊರಡಿಸಿಲ್ಲ ಎಂದು ನುಡಿದರು.

ಕಾಂಗ್ರೆಸ್ ಮುಖಂಡರಾದ ಬಿ.ಎಲ್. ಶಂಕರ್, ಜಯಪ್ರಕಾಶ್ ಹೆಗ್ಡೆ, ಕೆ.ಬಿ.ಮಲ್ಲಿಕಾರ್ಜುನ, ಎಂ.ಎಲ್.ಮೂರ್ತಿ, ರಾಷ್ಟ್ರೀಯ ಯುವ ಕಾಂಗ್ರೆಸ್‌ನ ಬಿಶ್ವರಂಜನ್ ಮೊಹಂತಿ, ಮಹಿಮಾ ಪಟೇಲ್ ಮಾತನಾಡಿದರು.ಜಿಲ್ಲಾ ಯುವ ಕಾಂಗ್ರೆಸ್‌ನ ಸಚಿನ್‌ಮೀಗಾ, ಬೀರೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎಂ.ವಿನಾಯಕ, ಕೆ.ಎಂ.ಕೆಂಪರಾಜು, ಎಸ್.ಎಂ.ನಾಗರಾಜ್, ಸವಿತಾ ರಮೇಶ್, ಸಾವಿತ್ರಿಗಂಗಣ್ಣ, ಬಿ.ಎನ್.ಚಂದ್ರಪ್ಪ, ಧೃವಕುಮಾರ್ ಮತ್ತು ನೂರಾರು ಕಾರ್ಯಕರ್ತರು ಪಾಲ್ಗೊಂಡರು.            

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.