ADVERTISEMENT

ರಾಜ್ಯದಲ್ಲಿರುವ ಕಾಂಗ್ರೆಸ್‌ನದ್ದು ಲಾಟರಿ ಸರ್ಕಾರ

ಚುನಾವಣಾ ಪ್ರಚಾರ ಸಭೆಯಲ್ಲಿ ಬಿಜೆಪಿ ಅಭ್ಯರ್ಥಿ ಡಿ.ಎನ್.ಜೀವರಾಜ್ ವ್ಯಂಗ್ಯ

​ಪ್ರಜಾವಾಣಿ ವಾರ್ತೆ
Published 6 ಮೇ 2018, 9:18 IST
Last Updated 6 ಮೇ 2018, 9:18 IST
ನರಸಿಂಹರಾಜಪುರದಲ್ಲಿ ಶನಿವಾರ ಬಿಜೆಪಿ ಚುನಾವಣಾ ಪ್ರಚಾರ ಸಭೆಯಲ್ಲಿ ಬಿಜೆಪಿ ಅಭ್ಯರ್ಥಿ ಡಿ.ಎನ್.ಜೀವರಾಜ್ ಮಾತನಾಡಿದರು.
ನರಸಿಂಹರಾಜಪುರದಲ್ಲಿ ಶನಿವಾರ ಬಿಜೆಪಿ ಚುನಾವಣಾ ಪ್ರಚಾರ ಸಭೆಯಲ್ಲಿ ಬಿಜೆಪಿ ಅಭ್ಯರ್ಥಿ ಡಿ.ಎನ್.ಜೀವರಾಜ್ ಮಾತನಾಡಿದರು.   

ನರಸಿಂಹರಾಜಪುರ: ‘ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ಫಲಾನುಭವಿಗಳನ್ನು ಲಾಟರಿ ಮೂಲಕ ಆಯ್ಕೆ ಮಾಡುವ ಸರ್ಕಾರ’ ಎಂದು ಶೃಂಗೇರಿ ಕ್ಷೇತ್ರ ಬಿಜೆಪಿ ಅಭ್ಯರ್ಥಿ ಡಿ.ಎನ್.ಜೀವರಾಜ್ ವ್ಯಂಗ್ಯವಾಡಿದರು.

ಇಲ್ಲಿನ ನೀರಿನ ಟ್ಯಾಂಕ್ ವೃತ್ತದ ಸಮುದಾಯ ಭವನದಲ್ಲಿ ಶನಿವಾರ ನಡೆದ ಬಿಜೆಪಿ ಚುನಾವಣಾ ಪ್ರಚಾರ ಸಭೆಯಲ್ಲಿ ಮತಯಾಚನೆ ಮಾಡಿ ಮಾತನಾಡಿದರು. ‘ಐದು ವರ್ಷಗಳಿಂದ ಆಡಳಿತ ನಡೆಸಿದ ಕಾಂಗ್ರೆಸ್ ಸರ್ಕಾರ ಸತ್ತುಹೋಗಿದೆ. ಬಡ ಕುಟುಂಬದವರು ಮರಣ ಹೊಂದಿದರೆ ಶವ ಸಂಸ್ಕಾರಕ್ಕೆ ನೀಡುವ ಸಹಾಯ ಧನವನ್ನು ಮೂರು ವರ್ಷಗಳಿಂದ ಬಿಡುಗಡೆ ಮಾಡಿಲ್ಲ. ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ಪ್ರತಿ ಕಿ.ಮೀ.ಗೆ ಕೇವಲ ₹850 ಅನುದಾನ ನೀಡಿದ್ದು ಇದರಿಂದ ಗ್ರಾಮೀಣ ರಸ್ತೆಗಳ ಅಭಿವೃದ್ಧಿ ಸಾಧ್ಯವಾಗಲಿಲ್ಲ. ಗ್ರಾಮೀಣ ರಸ್ತೆಗಳನ್ನು ಅಭಿವೃದ್ಧಿ ಪಡಿಸಬೇಕಾಗಿದ್ದ ಈ ಭಾಗದ ಜಿಲ್ಲಾ ಪಂಚಾಯಿತಿ ಸದಸ್ಯ ಕಳೆದು ಹೋಗಿದ್ದಾರೆ. ಕಾಂಗ್ರೆಸ್ ಚುನಾವಣಾ ಪ್ರಚಾರ ಸಭೆಯಲ್ಲಿ ವಿಧಾನಪರಿಷತ್ ಮಾಜಿ ಸದಸ್ಯರೊಬ್ಬರು ಹೋಗಳುವುದರಲ್ಲೇ ಕಾಲ ಕಳೆಯುತ್ತಿದ್ದಾರೆ. 58 ವರ್ಷಗಳಿಂದ ಕ್ಷೇತ್ರದಲ್ಲಿ ಆಡಳಿತ ನಡೆಸಿದ ಕಾಂಗ್ರೆಸ್ ಮತ್ತು ಜೆಡಿಎಸ್ ದಲಿತರ ಕಾಲೊನಿಗಳಲ್ಲಿ ಕಾಂಕ್ರಿಟ್ ರಸ್ತೆ ನಿರ್ಮಿಸಿಲ್ಲ. ತಾನು ಶಾಸಕನಾದ ಮೇಲೆ ಮೊದಲಬಾರಿಗೆ ಕಾಂಕ್ರಿಟ್ ರಸ್ತೆ, ಚರಂಡಿ ನಿರ್ಮಿಸಲಾಗಿದೆ’ ಎಂದರು.

ಬಿಜೆಪಿ ರಾಜ್ಯ ಅಲ್ಪಸಂಖ್ಯಾತ ಘಟಕದ ಪಿ.ಜೆ.ಅಂಟೋಣಿ ಮಾತನಾಡಿ, ರಾಜ್ಯ ಸರ್ಕಾರ ಅಲ್ಪಸಂಖ್ಯಾತರು ಮತ್ತು ಬಹುಸಂಖ್ಯಾತರನ್ನು ತುಷ್ಟೀಕರಣ ಮಾಡುವ ಕೆಲಸ ಮಾಡುತ್ತಿದೆ ಎಂದು ದೂರಿದರು.

ADVERTISEMENT

ಮುಖಂಡರಾದ ಬಿ.ಎಸ್.ಆಶೀಶ್‌ ಕುಮಾರ್, ಕೆ.ಪಿ.ಸಂಪತ್ ಕುಮಾರ್, ಸುಧಾಕರ ಆಚಾರಿ, ಜಯಶ್ರೀ ಮೋಹನ್, ಸಾವಿತ್ರಿ, ಪುಣ್ಯಪಾಲ್ ಮಾತನಾಡಿದರು.ಮುಖಂಡರಾದ ಎಂ.ಆರ್.ರವಿಶಂಕರ್, ಆರ್.ರಾಜಶೇಖರ್, ಜಿ.ಎಂ.ಪ್ರಕಾಶ್ ಇದ್ದರು.

ದೇವೇಗೌಡರಿಗೆ ದ್ರೋಹ: ಆರೋಪ

ಮಾಜಿ ವಿಧಾನಪರಿಷತ್ ಸದಸ್ಯರೊಬ್ಬರು ದೇವೇಗೌಡರು ಮತ್ತು ಕುಮಾರಸ್ವಾಮಿಗೆ ದ್ರೋಹ ಮಾಡಿ ಕಾಂಗ್ರೆಸ್ ಸೇರ್ಪಡೆಗೊಂಡಿದ್ದಾರೆ ಎಂದು ಬಿಜೆಪಿ ಅಭ್ಯರ್ಥಿ ಜೀವರಾಜ್ ಆರೋಪಿಸಿದರು.

ಪಟ್ಟಣದಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ದೇವೇಗೌಡರು ತಂದೆ ಸಮಾನ, ಕುಮಾರಸ್ವಾಮಿ ಸಹೋದರನ ಸಮಾನ ಎಂದು ಹೇಳಿದ್ದವರು ಎರಡು ಬಾರಿ ವಿಧಾನಪರಿಷತ್ ಸದಸ್ಯರನ್ನಾಗಿ ಆಯ್ಕೆ ಮಾಡಿದ್ದ ಜೆಡಿಎಸ್ ಅಭ್ಯರ್ಥಿಯ ಪರ ಚುನಾವಣೆ ಪ್ರಚಾರ ಮಾಡಲಿಲ್ಲ ಎಂದು ಜರಿದರು. ಕಾಂಗ್ರೆಸ್ ಗೆದ್ದರೆ ಮಂತ್ರಿಯಾಗುತ್ತೇನೆ ಎಂದು ಹೇಳಿಕೆ ನೀಡುತ್ತಿದ್ದಾರೆ. ಶೃಂಗೇರಿ ಈಡಿಗರ ಸಮುದಾಯ ಭವನಕ್ಕೆ ₹1ಕೋಟಿ ಅನುದಾನ ನೀಡುತ್ತೇವೆ, ವಿಶ್ವಕರ್ಮ ಸಮುದಾಯ ಭವನಕ್ಕೆ ಅನುದಾನ ನೀಡುತ್ತೇವೆ ಎನ್ನುತ್ತಿದ್ದಾರೆ. ಬ್ರಾಹ್ಮಣ ಸಮುದಾಯದವರನ್ನು ಕರೆದು ಬಿಳಿ ಕಾಗದ ಮೇಲೆ ಬರೆದ ಸಹಿ ತೋರಿಸಿ ಸಮುದಾಯ ಭವನಕ್ಕೆ ಅನುದಾನ ಬಿಡುಗೆಯಾಗಿದೆ ತೋರಿಸುತ್ತಿದ್ದಾರೆ. ಮುಖ್ಯಮಂತ್ರಿಗಳು ಶಂಕುಸ್ಥಾಪನೆ ಮಾಡಿದ ₹20 ಕೋಟಿ ವೆಚ್ಚದ ಹಂದೂರು ಗ್ರಾಮದ ಸೇತುವೆ ಕಾಮಗಾರಿ ಇನ್ನೂ ಆರಂಭವಾಗಿಲ್ಲ ಎಂದು ಜರಿದರು.

**
ಬಿಜೆಪಿ ಪಕ್ಷಕ್ಕೆ ನಿಷ್ಠಾವಂತನಾಗಿರುವುದನ್ನು ಪರಿಗಣಿಸಿ ಪಕ್ಷದ ವರಿಷ್ಠರು ಕ್ಷೇತ್ರದಲ್ಲಿ 6ನೇ ಬಾರಿ ಪಕ್ಷದ ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಿದ್ದಾರೆ
- ಡಿ.ಎನ್.ಜೀವರಾಜ್, ಬಿಜೆಪಿ ಅಭ್ಯರ್ಥಿ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.