ADVERTISEMENT

ರಾಹುಲ್‌ ಗಾಂಧಿ ಜೆಡಿಎಸ್‌ ವಕ್ತಾರರೇ

ರಾಜ್ಯ ಯುವ ಘಟಕದ ಅಧ್ಯಕ್ಷ ಮಧು ಬಂಗಾರಪ್ಪ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2018, 6:48 IST
Last Updated 10 ಏಪ್ರಿಲ್ 2018, 6:48 IST
ಮಧು ಬಂಗಾರಪ್ಪ
ಮಧು ಬಂಗಾರಪ್ಪ   

ಚಿಕ್ಕಮಗಳೂರು:‘ಜೆಡಿಎಸ್‌ಗೆ ಓಟು ಚಲಾಯಿಸಿದರೆ ಬಿಜೆಪಿಗೆ ಹಾಕಿದಂತೆ ಎಂದು ರಾಹುಲ್‌ ಗಾಂಧಿ ಹೇಳಿದ್ದಾರೆ. ಹೀಗೆ ಹೇಳಲು ಅವರೇನು ನಮ್ಮ ಪಕ್ಷದ ವಕ್ತಾರರೇ’ ಎಂದು ಜೆಡಿಎಸ್‌ ಯುವ ಘಟಕದ ರಾಜ್ಯಾಧ್ಯಕ್ಷ ಮಧು ಬಂಗಾರಪ್ಪ ಇಲ್ಲಿ ಸೋಮವಾರ ಪ್ರಶ್ನಿಸಿದರು.

‘ರಾಷ್ಟ್ರೀಯ ಪಕ್ಷವೊಂದರ ಅಧ್ಯಕ್ಷರಾಗಿರುವ ರಾಹುಲ್‌ ಗಾಂಧಿಗೆ ನಮ್ಮ ಪಕ್ಷದ ಬಗ್ಗೆ ಮಾತನಾಡಲು ಯಾವ ಯೋಗ್ಯತೆ ಇದೆ. ಬಿಜೆಪಿಯ ‘ಬಿ’ ಟೀಂ ಜೆಡಿಎಸ್‌ ಎಂದು ಹೇಳಿದ್ದಾರೆ. ಹಾಗಾದರೆ, ರಾಹುಲ್‌ ಗಾಂಧಿ ಪಕ್ಕದಲ್ಲಿ ಕುಳಿತುಕೊಳ್ಳುವ ಸಿದ್ದರಾಮಯ್ಯ ಯಾವ ಟೀಮಿನವರು? ಮೂಲತಃ ಜೆಡಿಎಸ್‌ನವರು. ಕಾಂಗ್ರೆಸ್‌ನವರು ಬದುಕಿರುವುದೇ ಜೆಡಿಎಸ್‌ ಟೀಮಿನಿಂದ’ ಎಂದು ಪತ್ರಿಕಾಗೋಷ್ಠಿಯಲ್ಲಿ ಕುಟಕಿದರು.

ಬಿಜೆಪಿ ಮತ್ತು ಕಾಂಗ್ರೆಸ್‌ ವೈಯುಕ್ತಿಕ ಟೀಕೆಟಿಪ್ಪಣಿ ಮಾಡುತ್ತಿದ್ದು, ಮಾತಿನಲ್ಲಿ ಜೆಡಿಎಸ್‌ ಬಳಸಿಕೊಳ್ಳುತ್ತಿರುವುದು ಸರಿಯಲ್ಲ. ಜೆಡಿಎಸ್‌ ಬಗ್ಗೆ ಮಾತನಾಡಲು ಈ ಪಕ್ಷಗಳಿಗೆ ಯಾ ವ ನೈತಿಕ ಹಕ್ಕಿದೆ’ಎಂದರು.

ADVERTISEMENT

‘ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ ಎಂದು ರಾಹುಲ್‌ ಗಾಂಧಿ ಹೇಳಿದ್ದಾರೆ. ‘ಎಟಿಎಂ ಕಾರ್ಡ್‌’ ಚೆನ್ನಾಗಿ ಕೆಲಸ ಮಾಡುತ್ತಿರಬಹುದು. 2019ರ ಚುನಾವಣೆಗೆ ಅವರಿಗೂ ಒಂದು ಕಾರ್ಡ್‌ ಬೇಕಿದೆ. ಹೀಗಾಗಿ, ಈ ರೀತಿ ಹೇಳಿದ್ದಾರೆ’ ಎಂದು ಲೇವಡಿ ಮಾಡಿದರು.

‘ಧರ್ಮದ ಹೆಸರಿನಲ್ಲಿ ಜಾತಿ ವಿಭಜನೆ ಮಾಡುವ, ಮತ ಕೇಳುವ ಕೆಲಸವನ್ನು ಬಿಜೆಪಿ ಮತ್ತು ಕಾಂಗ್ರೆಸ್‌ ಮಾಡುತ್ತಿವೆ. ರಾಷ್ಟ್ರೀಯ ಪಕ್ಷಗಳು ಕರಾವಳಿ ಭಾಗದಲ್ಲಿ ಧರ್ಮದ ಹೆಸರಿನಲ್ಲಿ ಹಿಂದೂ ಮತ್ತು ಮುಸ್ಲಿಂ ಮತ ಓಲೈಕೆಯಲ್ಲಿ ತೊಡಗಿರುವುದನ್ನು ಕಾಣಬಹುದು. ಬಿಜೆಪಿಗೆ ಕೋಮುವಾದಿ ಪಕ್ಷ ಎಂಬ ಹಣೆಪಟ್ಟಿಯೇ ಇದೆ. ಕಾಂಗ್ರೆಸ್‌ ಢೋಂಗಿ ಜಾತ್ಯತೀತ ಪಕ್ಷವಾಗಿದೆ. ಬಿಜೆಪಿಯುವರು ಧರ್ಮ ಒಡೆದರೆ, ಕಾಂಗ್ರೆಸ್‌ನವರು ಜಾತಿ ಒಡೆಯುತ್ತಾರೆ’ ಎಂದು ದೂಷಿಸಿದರು.

‘ಸಹಕಾರ ಬ್ಯಾಂಕುಗಳಲ್ಲಿನ ರೈತರ ₹ 8,500 ಸಾವಿರ ಕೋಟಿ ಸಾಲಮನ್ನಾ ಮಾಡಿದ್ದೇವೆ ಎಂದು ಸಿದ್ದರಾಮಯ್ಯ ಹೇಳುತ್ತಾರೆ. ಈ ಬಾಬ್ತಿಗೆ ಈವರೆಗೆ ಬಿಡುಗಡೆ ಮಾಡಿರುವುದು ₹ 1,800 ಕೋಟಿ ಅಷ್ಟೇ. ರೈತರ ಸಾಲಮನ್ನಾ ಮಾಡಿದ್ದೇವೆ ಎಂದು ಹೇಳಲು ಇವರಿಗೆ ಏನು ಯೋಗ್ಯತೆ ಇದೆ’ ಎಂದು ಪ್ರಶ್ನಿಸಿದರು.

‘ಪ್ರಧಾನಿ ನರೇಂದ್ರ ಮೋದಿ ಅವರು ಮಹದಾಯಿ ಸಮಸ್ಯೆ ಪರಿಹರಿಸುವ ಬಗ್ಗೆ ಒಂದು ಮಾತನಾಡಿಲ್ಲ. ಕರಾವಳಿ ಭಾಗದ್ಲಲಿ ಬಿಜೆಪಿ ಕಾರ್ಯಕರ್ತರು ಮೃತಪಟ್ಟಿರುವುದನ್ನು ಉಲ್ಲೇಖಿಸುತ್ತಾರೆ. ಮುಸ್ಲಿಮರು ಮೃತಪಟ್ಟಿದ್ದನ್ನು ಯಾಕೆ ಹೇಳಲ್ಲ. ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಅವರು ವಿರೋಧ ಪಕ್ಷದವರನ್ನು ಪ್ರಾಣಿಗಳಿಗೆ ಹೋಲಿಸಿದ್ದಾರೆ. ಇದು ಅವರ ಸಂಸ್ಕೃತಿ ಏನು ಎಂಬುದನ್ನು ಇದು ತಿಳಿಸುತ್ತದೆ’ ಎಂದು ಹೇಳಿದರು.

‘ಕೇಂದ್ರದ ಬಿಜೆಪಿ ಮತ್ತು ರಾಜ್ಯದಲ್ಲಿನ ಕಾಂಗ್ರೆಸ್‌ ಏನೇನು ಮಾಡಿವೆ ಎಂಬುದು ಜನರಿಗೆ ಗೊತ್ತಿದೆ. ರಾಜ್ಯದಲ್ಲಿ ಪ್ರಾದೇಶಿಕ ಪಕ್ಷದ ಅನಿವಾರ್ಯ ಇದೆ. ಎರಡೂ ರಾಷ್ಟ್ರೀಯ ಪಕ್ಷಗಳಿಗಿಂತ ನಾವು ಮುಂದೆ ಇದ್ದೇವೆ. ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಅವರು ಸಮಾವೇಶದ ಮೂಲಕ ಪ್ರತಿದಿನ ಸುಮಾರು 50 ಸಾವಿರದಿಂದ ಒಂದು ಲಕ್ಷ ಜನರನ್ನು ತಲುಪುತ್ತಿದ್ದಾರೆ. ಈ ಬಾರಿ ಜನರು ಜೆಡಿಎಸ್‌ ಬೆಂಬಲಿಸಲಿದ್ದಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಜೆಡಿಎಸ್‌ ಅಧಿಕಾರಕ್ಕೆ ಬಂದರೆ 1 ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಗುಡಿ ಕೈಗಾರಿಕೆಗೆ ಮಾರುಕಟ್ಟೆ, ಅರಣ್ಯ ಇಲಾಖೆಯಿಂದ ಗಿಡ ನೆಟ್ಟು ಪೋಷಿಸುವ ಕಾರ್ಯಕ್ರಮ, ಪ್ರವಾಸೋದ್ಯಮ ಅಭಿವೃದ್ಧಿ ಮೂಲಕ ಉದ್ಯೋಗ ಸೃಷ್ಟಿಸಲಾಗುವುದು. ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಎರಡು ಲಕ್ಷ ಹುದ್ದೆಗಳು ಖಾಲಿ ಇವೆ. ಈ ಖಾಲಿ ಹುದ್ದೆಗಳಿಗೆ ಹೊರಗುತ್ತಿಗೆ ಆಧಾರದಲ್ಲಿ ನೇಮಿಸಿಕೊಂಡಿದ್ದಾರೆ. ಖಾಲಿ ಹುದ್ದೆಗಳನ್ನೆಲ್ಲ ತುಂಬುವುದು ನಮ್ಮ ಆದ್ಯತೆ’ ಎಂದು ಹೇಳಿದರು.‘ಬಿಜೆಪಿ ಮತ್ತು ಕಾಂಗ್ರೆಸ್‌ ಜತೆ ಜೆಡಿಎಸ್‌ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ ಎಂದು ಈಗಾಗಲೇ ನಮ್ಮ ವರಿಷ್ಠರು ಸ್ಪಷ್ಟಪಡಿಸಿದ್ದಾರೆ. ಸ್ಪಷ್ಟ ಬಹುಮತ ಬರದಿದ್ದರೆ ವಿರೋಧ ಪಕ್ಷದ ಸ್ಥಾನದಲ್ಲಿ ಕೂರುತ್ತೇವೆ’ ಎಂದು ಪ್ರತಿಕ್ರಿಯಿಸಿದರು.

‘ಜೆಡಿಎಸ್‌ ಈಗಾಗಲೇ ಘೋಷಿಸಿರುವ 126 ಕ್ಷೇತ್ರಗಳ ಪೈಕಿ 80 ಕ್ಷೇತ್ರಗಳಲ್ಲಿ ಗೆಲ್ಲುವ ಭರವಸೆ ಇದೆ. ಗೀತಾ ಶಿವರಾಜಕುಮಾರ್‌ ಅವರು ಈ ಭಾಗದಲ್ಲಿ ಎರಡು ದಿನ ಪ್ರಚಾರ ಮಾಡಲಿದ್ದಾರೆ’ ಎಂದರು.

ಬಿ.ಬಿ.ನಿಂಗಯ್ಯ, ಬಿ.ಎಚ್‌.ಹರೀಶ್‌, ಚಂದ್ರಶೇಖರ್‌, ರಂಜನ್‌ ಅಜಿತ್‌ಕುಮಾರ್‌, ಹೊಲದಗದ್ದೆ ಗಿರೀಶ್‌, ರಮೇಶ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.