ADVERTISEMENT

ರೂ 3.50 ಕೋಟಿ ಕಾಮಗಾರಿಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2011, 8:30 IST
Last Updated 27 ಫೆಬ್ರುವರಿ 2011, 8:30 IST

ಚಿಕ್ಕಮಗಳೂರು: ವೇದಾನದಿಗೆ ಅಡ್ಡಲಾಗಿ ನಿರ್ಮಿಸಿರುವ ಪಿಕಪ್, ವಿವಿಧ ಗ್ರಾಮಗಳ ರಸ್ತೆ ಅಭಿವೃದ್ಧಿ ಹಾಗೂ ಪ್ರಾಥಮಿಕ ಆರೋಗ್ಯಕೇಂದ್ರ ಮತ್ತು ಬಸ್‌ನಿಲ್ದಾಣ ಸೇರಿದಂತೆ 3.50ಕೋಟಿ ರೂಪಾಯಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗೆ ಶನಿವಾರ ಶಾಸಕ ಸಿ.ಟಿ.ರವಿ ಶಂಕುಸ್ಥಾಪನೆ ನೆರವೇರಿಸಿದರು.

ಪಿಳ್ಳೇನಹಳ್ಳಿ ಮತ್ತು ಬಾಣೂರು ಗ್ರಾಮದಲ್ಲಿ ವೇದಾವತಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ತಲಾ 4ಲಕ್ಷ ರೂಪಾಯಿ ವೆಚ್ಚದ ಪಿಕಪ್, ದೇವನೂರು, ಹಳ್ಳದಹಳ್ಳಿ, ಎಸ್.ಕೊಪ್ಪಲು, ಕೇತುಮಾರನಹಳ್ಳಿ, ಗೊಲ್ಲರಹಟ್ಟಿ, ಸ್ವಾಮಿಕಟ್ಟೆ ಹಾಗೂ ಕಬ್ಬಳ್ಳಿಯಿಂದ ಗುಂಡು ಸಾಗರದವರೆಗೆ, ಲಂಬಾಣಿ ತಾಂಡ್ಯದ 1.47 ಕೋಟಿ ರೂಪಾಯಿ ವೆಚ್ಚದ ರಸ್ತೆ ಡಾಂಬರೀಕರಣ, ನಿಡಘಟ್ಟದ ಬಸ್ ನಿಲ್ದಾಣ, ಪ್ರಾಥಮಿಕ ಆರೋಗ್ಯ ಕೇಂದ್ರದ ನವೀಕರಣ ಕಾಮಗಾರಿಗೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಪ್ರಫುಲ್ಲಾ ಮಂಜುನಾಥ, ಜಿಲ್ಲಾ ಪಂಚಾಯಿತಿ ಸದಸ್ಯ ಕಲ್ಮರುಡಪ್ಪ ಮತ್ತು ಕಡೂರು ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ರತ್ನ ಗುದ್ದಲಿಪೂಜೆ ನೆರವೇರಿಸಿದರು.

ಈ ಎಲ್ಲಾ ಕಾಮಗಾರಿಗಳು ಇನ್ನೆರಡು ತಿಂಗ ಳೊಳಗೆ ಪೂರ್ಣಗೊಳ್ಳಲಿವೆ. ಅದೇ ರೀತಿ ನಿಡಘಟ್ಟ ಗ್ರಾಮದ ಮಾದರಿಯಲ್ಲೇ ಕಳಸಾಪುರ ಮತ್ತು ಸಖರಾಯಪಟ್ಟಣದಲ್ಲಿ ಬಸ್‌ನಿಲ್ದಾಣಗಳನ್ನು ನಿರ್ಮಿಸುವ ಗುರಿಹೊಂದಲಾಗಿದೆ ಎಂದು ಶಾಸಕ ಸಿ.ಟಿ.ರವಿ ಸುದ್ದಿಗಾರರಿಗೆ ತಿಳಿಸಿದರು.ಶಾಸಕ ಸ್ಥಾನವನ್ನು ಸವಾಲಾಗಿ ಒಡ್ಡಿ ಕಡೂರು, ಚಿಕ್ಕಮಗಳೂರು ಹೆದ್ದಾರಿ ರಸ್ತೆಯನ್ನು 2011ರೊಳಗೆ ಕೆಲಸ ಆರಂಭಿಸಲಾಗುವುದೆಂದು ಪುನರುಚ್ಚರಿಸಿದರು. ಜನರು ನೀಡಿರುವ ಅಧಿಕಾರ ಜನರ ಕೆಲಸಕ್ಕೆ ಮೀಸಲಿಡುವುದಾಗಿ ತಿಳಿಸಿದರು.

ಈಗಾಗಲೇ ಜಿಲ್ಲೆಯ ಐದು ಮಂದಿ ಶಾಸಕರು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್ ಬಿಡುಗಡೆ ಗೊಳಿಸು ವಂತೆ ಮನವಿ ಮಾಡಿರುವುದಾಗಿ ಹೇಳಿದರು. ದೀನ್‌ದಯಾಳ್ ಗ್ರಾಮೀಣ ಸಂಶೋಧನಾ ಕೇಂದ್ರವನ್ನು ಮುಖ್ಯಮಂತ್ರಿಗಳು ಈ ಜಿಲ್ಲೆಗೆ ನೀಡು ತ್ತಾರೆಂಬ ವಿಶ್ವಾಸ ಇದೆ. ಅದನ್ನು ಕಡೂರು, ಚಿಕ್ಕಮಗಳೂರು ನಡುವೆ ಸ್ಥಾಪಿಸ ಲಾಗುವುದೆಂದರು.

ಕಡೂರು, ಚಿಕ್ಕಮಗಳೂರು ರೈಲ್ವೆ ಕಾಮಗಾರಿಗೆ ಕೇಂದ್ರ ಸರ್ಕಾರ ಬಿಡುಗಡೆ ಗೊಳಿಸುವಷ್ಟು ಮೊತ್ತದ ಹಣವನ್ನು ರಾಜ್ಯ ಸರ್ಕಾರವೂ ನೀಡಿ ಆದಷ್ಟು ಬೇಗ ಕಾಮಗಾರಿ ಪೂರ್ಣಗೊಳಿಸುವಂತೆ ನೋಡಿಕೊಳ್ಳಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.