ADVERTISEMENT

ರೈತರಿಗೆ ಶೌಚಕ್ಕೆ ಬಯಲೇ ಗತಿ!

ಪಂಚನಹಳ್ಳಿಯ ಗೋಶಾಲೆ: ಮೇವು, ನೀರು ಸಮರ್ಪಕ ಪೂರೈಕೆ

ಬಿ.ಜೆ.ಧನ್ಯಪ್ರಸಾದ್
Published 2 ಜೂನ್ 2017, 13:18 IST
Last Updated 2 ಜೂನ್ 2017, 13:18 IST
ಕಡೂರು ತಾಲ್ಲೂಕಿನ ಪಂಚನಹಳ್ಳಿ ಗೋಶಾಲೆಯಲ್ಲಿರುವ ಜಾನುವಾರು
ಕಡೂರು ತಾಲ್ಲೂಕಿನ ಪಂಚನಹಳ್ಳಿ ಗೋಶಾಲೆಯಲ್ಲಿರುವ ಜಾನುವಾರು   

ಪಂಚನಹಳ್ಳಿ (ಚಿಕ್ಕಮಗಳೂರು): ಜಿಲ್ಲೆ ಯ ಕಡೂರು ತಾಲ್ಲೂಕಿನ ಪಂಚನ ಹಳ್ಳಿಯಲ್ಲಿ ಜಿಲ್ಲಾಡಳಿತವು ತೆರೆದಿರುವ ಗೋಶಾಲೆಯಲ್ಲಿ ಶೌಚಾಲಯ ವ್ಯವಸ್ಥೆ ಕಲ್ಪಿದಿರುವುದರಿಂದ ರೈತರಿಗೆ ಸಮಸ್ಯೆಯಾಗಿ ಪರಿಣಮಿಸಿದೆ.

ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣದಲ್ಲಿ ತೆರೆದಿರುವ ಈ ಗೋಶಾ ಲೆಯಲ್ಲಿ ಕಡೂರು, ಅರಸೀಕೆರೆ ತಾಲ್ಲೂಕು, ಹುಳಿಯಾರು ಸುತ್ತಮುತ್ತ ಲಿನ ಗ್ರಾಮಗಳ ರೈತರ ಸುಮಾರು 6,000 ಜಾನುವಾರುಗಳಿಗೆ ಆಶ್ರಯ ಕಲ್ಪಿಸಲಾಗಿದೆ. ನೂರಾರು ರೈತರು ಇಲ್ಲಿ ಜಾನುವಾರುಗಳೊಂದಿಗೆ ಬೀಡುಬಿಟ್ಟಿದ್ದಾರೆ. ಆವರಣದಲ್ಲಿ ಶೌಚಾಲಯಗಳು ಇದ್ದರೂ, ಅವು ಬಳಕೆಗೆ ಯೋಗ್ಯವಾಗಿಲ್ಲ ದಿರುವುದರಿಂದ ರೈತರು ಬಹಿರ್ದೆಸೆಗೆ ಬಯಲನ್ನೇ ಆಶ್ರಯಿಸಬೇಕಾಗಿದೆ.

‘ಗೋಶಾಲೆಯಲ್ಲಿ ಮೇವು, ನೀರಿನ ವ್ಯವಸ್ಥೆ ಚೆನ್ನಾಗಿದೆ. ಶೌಚಾಲಯ ವ್ಯವಸ್ಥೆ ಇಲ್ಲದಿರುವುದು ಸಮಸ್ಯೆಯಾಗಿದೆ. ಬಹಿರ್ದೆಸೆಗೆ ಸುತ್ತಲಿನ ಹೊಲಗಳನ್ನು ಅವಲಂಬಿಸಬೇಕಾಗಿದೆ. ಶೌಚಾಲಯ ಸೌಲಭ್ಯ ಕಲ್ಪಿಸಲು ಸಂಬಂಧಪಟ್ಟವರು ಕ್ರಮ ವಹಿಸಬೇಕು’ ಎಂದು ರೈತ ನಿಂಗಪ್ಪ ‘ಪ್ರಜಾವಾಣಿ’ಯೊಂದಿಗೆ ಅಳಲು ತೋಡಿಕೊಂಡರು.

ನೂರಾರು ರೈತರು ಜಾನುವಾರು ಗಳೊಂದಿಗೆ ಗೋಶಾಲೆಯಲ್ಲಿ ಬೀಡು ಬಿಟ್ಟಿದ್ದಾರೆ. ಬಯಲಲ್ಲೇ ನಿತ್ಯಕರ್ಮ ಮುಗಿಸಬೇಕಾಗಿದೆ. ಸ್ವಚ್ಛತೆ ಸಮಸ್ಯೆ ಯಿಂದ ರೋಗರುಜಿನಗಳು ಹರಡುವ ಸಾಧ್ಯತೆ ಇದೆ ಎಂದು ರೈತ ಮಂಜು ನಾಥ್‌ ಆತಂಕ ವ್ಯಕ್ತಪಡಿಸಿದರು.

ರಾಸಿಗೆ ತಲಾ 5 ಕೆ.ಜಿ, ಕರುವಿಗೆ 2.5 ಕೆ.ಜಿಯಂತೆ ಒಣ ಮೇವು ವಿತರಿಸಲಾಗು ತ್ತಿದೆ. ಹಸಿ ಮೇವಾದರೆ ತಲಾ ರಾಸಿಗೆ 12 ಕೆ.ಜಿ, ಕರುವಿಗೆ 6 ಕೆ.ಜಿ.ಯಂತೆ ಪೂರೈಸಲಾಗುತ್ತಿದೆ. ತೊಟ್ಟಿಗಳನ್ನು ನಿರ್ಮಿಸಿ ಕೊಳವೆಬಾವಿಗಳಿಂದ ನೀರಿನ ಸೌಲಭ್ಯ ಕಲ್ಪಿಸಲಾಗಿದೆ.

ನಾಲ್ಕು ಗೋದಾಮುಗಳಲ್ಲಿ ಮೇವು ಸಂಗ್ರಹಿಸಲಾಗಿದೆ. ರೈತರಿಗೆ ಕಾರ್ಡ್‌ ವಿತರಿಸಿ ಸರದಿಯಲ್ಲಿ ಮೇವು ವಿತರಿಸಲಾಗುತ್ತಿದೆ. ದಿನಕ್ಕೆ 3,200 ಕ್ವಿಂಟಲ್‌ ಮೇವು ಒದಗಿಸಲಾಗುತ್ತಿದೆ. ಆರ್ಟ್‌ ಆಫ್‌ ಲಿವಿಂಗ್‌ನ ವ್ಯಕ್ತಿ ವಿಕಾಸ ಕೇಂದ್ರದ 16 ಸಿಬ್ಬಂದಿ ಗೋಶಾಲೆಯ ಕಾಯಕ ನಿರ್ವಹಿಸುತ್ತಿದ್ದಾರೆ ಎಂದು ಆರ್ಟ್‌ ಆಫ್‌ ಲಿವಿಂಗ್‌ನ ಸ್ವಯಂ ಸೇವಕ ಮಹೇಶ್‌ ತಿಳಿಸಿದರು.

ಒಂದು ರಾಸಿಗೆ ₹ 70 ಮತ್ತು ಕರು ವಿಗೆ ₹ 35 ರಂತೆ ನಿರ್ವಹಣಾ ಸಂಸ್ಥೆಗೆ ವೆಚ್ಚ ಭರಿಸಲಾಗುತ್ತಿದೆ. ರಾಸುಗಳ ಆರೋಗ್ಯದ ಬಗ್ಗೆ ಪಶುಸಂಗೋಪನೆ ಇಲಾಖೆ ವೈದ್ಯರು ನಿಗಾ ವಹಿಸುತ್ತಿದ್ದಾರೆ ಎಂದು ಪಶುಸಂಗೋಪನಾ ಇಲಾಖೆ ಉಪನಿರ್ದೇಶಕ ಡಾ.ಪ್ರಭುಲಿಂಗು ತಿಳಿಸಿದರು.

ಗೋಶಾಲೆಯ ಅಕ್ಕಪಕ್ಕದ ಊರು ಗಳು ರೈತರು ಊಟವನ್ನು ಮನೆಯಿಂದ ತರುವ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಊರಿನ 15–20 ಮನೆಗಳವರು ಒಟ್ಟಾಗಿ ಒಂದೊಂದು ದಿನ ಒಬ್ಬರಂತೆ ಊಟ ಒಯ್ಯುತ್ತಿದ್ದಾರೆ.

ಇನ್ನು ದೂರದ ಊರು ಗಳವರು ಚಕ್ಕಡಿಯಡಿ, ಗುಡಾರದೊಳಗೆ ಸ್ಟೌ, ಪಾತ್ರೆ ಇಟ್ಟುಕೊಂಡು ಅಡುಗೆ ಮಾಡಿಕೊಳ್ಳಲು ವ್ಯವಸ್ಥೆ ಮಾಡಿಕೊಂಡಿ ದ್ದಾರೆ. ಶ್ರಮದಾನದ ಮೂಲಕ  ರೈತರೇ ರಾಸುಗಳ ಸಗಣಿಯನ್ನು ಟ್ರ್ಯಾಕ್ಟರ್‌ಗೆ ತುಂಬಿಸುತ್ತಾರೆ.

ದೂರದ ಊರುಗಳಿಂದ ಬಂದು ಬೀಡುಬಿಟ್ಟಿರುವ ರೈತರಿಗೆ ಊಟದ ವ್ಯವಸ್ಥೆ ಮಾಡಿದರೆ ಅನುಕೂಲವಾಗು ತ್ತದೆ. ಈ ನಿಟ್ಟಿನಲ್ಲಿ ಸಂಬಂಧಪಟ್ಟವರು ಗಮನಹರಿಸಬೇಕು ಎಂದು ರೈತರ ಚಂದ್ರಪ್ಪ ಕೋರಿದರು.

ರೈತರಿಗೆ ಕೃಷಿ ಜತೆಗೆ ಅಳವಡಿಸಿಕೊ ಳ್ಳಬಹುದಾದ ಉಪಕಸುಬಗಳು ಕುರಿತು ಅಧಿಕಾರಿಗಳು ಮಾಹಿತಿ ನೀಡುವ ಕಾಯಕದಲ್ಲಿ ತೊಡಗಿದ್ದಾರೆ.  ಪಶು ಸಂಗೋಪನೆ, ತೋಟಗಾರಿಕೆ, ಕೃಷಿ, ಕಂದಾಯ ಇಲಾಖೆ ಅಧಿಕಾರಿಗಳು ಸವಲತ್ತುಗಳ ಮಾಹಿತಿ ಒದಗಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.