ADVERTISEMENT

`ರೈಲ್ವೆ ನಿಲ್ದಾಣಗಳಲ್ಲಿ ಮಳೆನೀರು ಸಂಗ್ರಹ'

​ಪ್ರಜಾವಾಣಿ ವಾರ್ತೆ
Published 17 ಜೂನ್ 2013, 9:46 IST
Last Updated 17 ಜೂನ್ 2013, 9:46 IST

ಬೀರೂರು: ನೈಋತ್ಯ ರೈಲ್ವೆ ವಿಭಾಗದಲ್ಲಿ ನೂತನವಾಗಿ ನಿರ್ಮಿಸುತ್ತಿರುವ ರೈಲ್ವೆ ನಿಲ್ದಾಣಗಳಲ್ಲಿ ಮಳೆನೀರು ಸಂಗ್ರಹ ಪದ್ಧತಿ ಅಳವಡಿಸುವುದಾಗಿ ಮೈಸೂರು ವಲಯ ವ್ಯವಸ್ಥಾಪಕ ವಿನೋದ್‌ಕುಮಾರ್ ತಿಳಿಸಿದರು.

ವಿಶ್ವ ಪರಿಸರ ದಿನ ಅಂಗವಾಗಿ ಶನಿವಾರ ಬೀರೂರು ರೈಲ್ವೆ ನಿಲ್ದಾಣದ ಸಿಬ್ಬಂದಿ ನಿವಾಸಗಳ ಬಳಿ ಸಸಿ ನೆಟ್ಟು ನೀರೆರೆದು ಅವರು ಮಾತನಾಡಿದರು.

ರೈಲ್ವೆ ಇಲಾಖೆ ಪ್ರಯಾಣಿಕರ ಅನುಕೂಲಗಳ ಬಗ್ಗೆ ಮಾತ್ರವಲ್ಲದೆ ಪರಿಸರದ ಬಗ್ಗೆಯೂ ವಿಶೇಷ ಕಾಳಜಿ ಹೊಂದಿದೆ. ಇಲಾಖೆಯ ಸಿಬ್ಬಂದಿ ನಿವಾಸಗಳ ಬಳಿ ಖಾಲಿ ಇರುವ ಜಾಗದಲ್ಲಿ ಸಸಿ ನೆಟ್ಟು ಪೋಷಿಸುವ ಯೋಜನೆ ಹಮ್ಮಿಕೊಳ್ಳಲಾಗಿದೆ. ಅಲ್ಲದೆ ಹರಿದು ಹೋಗಿ ವ್ಯರ್ಥವಾಗುವ ಮಳೆ ನೀರು ಸಂಗ್ರಹಿಸುವ ಸಲುವಾಗಿ ಇಂಗುಗುಂಡಿಗಳನ್ನೂ ನಿರ್ಮಿಸಲಾಗುವುದು ಎಂದು ಅವರು ತಿಳಿಸಿದರು.

ರೈಲ್ವೆ ಸಲಹಾ ಮಂಡಳಿ ಸದಸ್ಯ ವಿನಯ್‌ಕುಮಾರ್, ಕಡೂರು ರೈಲ್ವೆ ನಿಲ್ದಾಣದಲ್ಲಿ ಶೌಚಾಲಯ ವ್ಯವಸ್ಥೆ ಸರಿಯಾಗಿಲ್ಲ ಎಂದು ದೂರಿದರು.

ಈ ಸಮಯದಲ್ಲಿ ಸ್ಥಳೀಯ ಅಧಿಕಾರಿಗೆ ನಿರ್ದೇಶನ ನೀಡಿದ ವಿನೋದ್‌ಕುಮಾರ್, ಇನ್ನು ಮೂರು ದಿನಗಳಲ್ಲಿ ದೂರುಗಳ ಬಗ್ಗೆ ಚರ್ಚೆ ನಡೆಸಿ ವರದಿ ನೀಡಬೇಕು ಎಂದು ಸೂಚಿಸಿದರು.

ಬೀರೂರು ಪಟ್ಟಣದ ಭಾಗವತ್ ನಗರ ರಸ್ತೆ ವಿಚಾರವಾಗಿ ರೈಲ್ವೆ ಇಲಾಖೆಗೆ ಸೇರಿದ ಸ್ವತ್ತಿನಲ್ಲಿ ಖಾಸಗಿ ವ್ಯಕ್ತಿಗಳು ಓಡಾಡಲು ಅವಕಾಶವಿಲ್ಲ. ತರೀಕೆರೆ ಉಪವಿಭಾಗಾಧಿಕಾರಿಗಳ ಮನವಿ ಮೇರೆಗೆ ತಾತ್ಕಾಲಿಕ ವ್ಯವಸ್ಥೆ ಮಾಡಲಾಗಿದ್ದು, ಅಧಿಕಾರಿಗಳು ಮೂರು ತಿಂಗಳ ಒಳಗೆ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

ಇಲಾಖೆಯ ಎಡಿಆರ್‌ಎಂ ಡಾ.ರಾಜೇಶ್‌ಗುಪ್ತ, ಡಿಸಿಎಂ ಅನಿಲ್‌ಕುಮಾರ್, ಕಾಶಿವಿಶ್ವನಾಥ್, ಶ್ರೀನಿವಾಸ್ ಮತ್ತು ನಿಲ್ದಾಣ ವ್ಯವಸ್ಥಾಪಕ ನಂದಕುಮಾರ್ ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.