ADVERTISEMENT

ವಿಟಿಯು ಕುಲಪತಿ ಮಹೇಶಪ್ಪ ವಜಾಕ್ಕೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2012, 10:25 IST
Last Updated 12 ಏಪ್ರಿಲ್ 2012, 10:25 IST

ಶೃಂಗೇರಿ: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ ಡಾ. ಮಹೇಶಪ್ಪ ಅವರನ್ನು ವಜಾಗೊಳಿಸುವಂತೆ ಒತ್ತಾಯಿಸಿ ಎಬಿವಿಪಿ ಕಾರ್ಯಕರ್ತರು ಪಟ್ಟಣದ ಭಾರತೀಚೌಕದಲ್ಲಿ  ಬುಧವಾರ ಪ್ರತಿಭಟನೆ ನಡೆಸಿ ಪ್ರತಿಕೃತಿ ದಹಿಸಿದರು.

ನಂತರ ತಾಲ್ಲೂಕು ಕಚೇರಿಗೆ ತೆರಳಿದ ವಿದ್ಯಾರ್ಥಿಗಳು ತಹಶೀಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಎಬಿವಿಪಿ ನಗರ ಕಾರ್ಯದರ್ಶಿ ರಂಜಿತ್, ವಿಟಿಯು ಕುಲಪತಿ ಡಾ.ಮಹೇಶಪ್ಪ ಅವರು ಕುಲಾಧಿಪತಿಗಳೂ ಆದ ರಾಜ್ಯಪಾಲರಿಗೆ ತಪ್ಪು ಮಾಹಿತಿಕೊಟ್ಟು ಆಯ್ಕೆ ಆಗಿರುವ ಕುರಿತಂತೆ ರಾಜ್ಯ ಹೈಕೋರ್ಟ್ ಇತ್ತೀಚಿಗೆ ಆದೇಶ ಕೊಟ್ಟಿದೆ.
 
ರಾಜ್ಯಪಾಲರ ಸಂವಿಧಾನದತ್ತ ಅಧಿಕಾರದಲ್ಲಿ ಮಧ್ಯಪ್ರವೇಶಿಸಲು ಇಚ್ಛಿಸಿದ ನ್ಯಾಯಾಲಯ ಡಾ. ಮಹೇಶಪ್ಪ ವಿರುದ್ಧ ಕ್ರಮ ಕೈಗೊಳ್ಳುವಂತೆ ರಾಜ್ಯಪಾಲರಿಗೆ ನಿರ್ದೇಶಿಸಿದೆ. ಆದ ಕಾರಣ ನೈತಿಕ ಹೊಣೆ ಹೊತ್ತು ಡಾ. ಮಹೇಶಪ್ಪ ಅವರು ತಕ್ಷಣ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದರು.

ಕೆಲವೇ ದಿನಗಳಲ್ಲಿ ಅವಧಿ ಮುಗಿಯಲಿರುವ ಮಹೇಶಪ್ಪ ಅವರಿಗೆ ತನಿಖೆ ಹೆಸರಿನಲ್ಲಿ ಇನ್ನೂ ಸ್ವಲ್ಪ ಸಮಯಾವಕಾಶ ಕೊಡುವ ಹುನ್ನಾರ ನಡೆದಿದ್ದು, ರಾಜ್ಯಪಾಲರೂ ಸಹ ಅವರ ಕುರಿತು ಮೃದುಧೋರಣೆ ತಳೆಯುತ್ತಿರುವುದು ಖಂಡನೀಯ.
 
ವಿಶ್ವವಿದ್ಯಾಲಯದ ಕುಲಪತಿಯಂತಹ ಸ್ಥಾನದಲ್ಲಿ ಡಾ.ಮಹೇಶಪ್ಪ ಅವರಂತಹ ಕಳಂಕಿತ ವ್ಯಕ್ತಿಗಳಿರುವುದು ವಿ.ವಿ.ಯ ಪಾವಿತ್ರ್ಯ ಹಾಳು ಮಾಡುತ್ತದೆ. ಆರೋಪ ಸಾಬೀತಾಗಿರುವಾಗಲೂ ಅವರು ಅಧಿಕಾರದಲ್ಲಿ ಮುಂದುವರೆಯುವುದು ನಾಚಿಕೆಗೇಡಿನ ಸಂಗತಿ. ಆದ ಕಾರಣ ರಾಜ್ಯಪಾಲರು ಈ ಕೂಡಲೆ ಮಹೇಶಪ್ಪ ಅವರನ್ನು ವಜಾಗೊಳಿಸಿ ರಾಜ್ಯದ ವಿದ್ಯಾರ್ಥಿಗಳಿಗೆ ನ್ಯಾಯ ದೊರಕಿಸಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ದಿವೀರ್‌ಮಲ್ನಾಡ್, ಪ್ರಸನ್ನ, ಶ್ರೇಯಸ್ ಮತ್ತಿತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.