ADVERTISEMENT

ವಿದ್ಯುತ್ ಸಮಸ್ಯೆ; ಕುಡಿಯುವ ನೀರಿಗೆ ತತ್ವಾರ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2012, 9:40 IST
Last Updated 4 ಡಿಸೆಂಬರ್ 2012, 9:40 IST

ಮೂಡಿಗೆರೆ: ತಾಲ್ಲೂಕಿನಲ್ಲಿ ಜಾರಿಯಲ್ಲಿರುವ ಅನಿಯಮಿತ ವಿದ್ಯುತ್ ಕಡಿತದಿಂದಾಗಿ ಪಟ್ಟಣವೂ ಸೇರಿದಂತೆ ಬಹುತೇಕ ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಉಂಟಾಗಿದೆ. ತಕ್ಷಣವೇ ಪರಿಹಾರ ರೂಪಿಸಬೇಕು ಎಂದು ಮೆಸ್ಕಾಂ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್ ಅನಂತರಾಮ್ ಅವರಿಗೆ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಎಂ.ಎ.ಶೇಷಗಿರಿ ಆದೇಶಿಸಿದರು.

ಪಟ್ಟಣದ ತಾಲ್ಲೂಕು ಪಂಚಾಯತಿ ಸಭಾಂಗಣದಲ್ಲಿ ಸೋಮವಾರ ತಾಲ್ಲೂಕು ಪಂಚಾಯಿತಿ ಮತ್ತು ತಾಲ್ಲೂಕಿನ ವಿವಿಧ ಸಂಘಟನೆಗಳು ಮತ್ತು ಮೆಸ್ಕಾಂ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

ತಾಲ್ಲೂಕಿನಲ್ಲಿ ಇನ್ನೂ ಕಾಫಿ ಪಲ್ಪರ್ ಪ್ರಾರಂಭವಾಗಿಲ್ಲ. ಐ.ಪಿ.ಸೆಟ್‌ನ ರೈತರು ವರ್ಷವಿಡೀ ಶುಲ್ಕ ಪಾವತಿಸುತ್ತಾರೆ. ಆದರೆ ಅವರಿಗೆ ಅವಶ್ಯಕವಾದ ಸುಮಾರು 90 ದಿನಗಳಷ್ಟು ಕಾಲಾವಧಿಯಲ್ಲಿ ಸಮರ್ಪಕ ವಿದ್ಯುತ್ ಪೂರೈಕೆ ಮಾಡದಿರುವುದು ಶೋಷಣೆಯಲ್ಲವೇ ಎಂದು ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಬಿ.ಎನ್. ಜಯಂತ್ ಪ್ರಶ್ನಿಸಿದರು.

  ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ರಂಜನ್ ಅಜಿತ್ ಕುಮಾರ್ ಮಾತನಾಡಿ, ತಾಲ್ಲೂಕಿನಲ್ಲಿ ಹಲವು ಗ್ರಾಮಗಳಿಗೆ ಕುಡಿಯುವ ನೀರಿನ ಯೋಜನೆ ಕಾಮಗಾರಿ ಸಂಪೂರ್ಣ ಮುಕ್ತಾಯವಾಗಿದ್ದು, ವಿದ್ಯುತ್ ಸಂಪರ್ಕದ ಸಮಸ್ಯೆಯಿಂದಾಗಿ ಯೋಜನೆಗಳನ್ನು ಅನುಷ್ಠಾನ ಗೊಳಿಸಲಾಗಿಲ್ಲ ಎಂದರು. ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಲತಾ ಲಕ್ಷ್ಮಣ್ ಮಾತನಾಡಿ, ಪಟ್ಟಣಕ್ಕೆ ಕುಡಿಯುವ ನೀರನ್ನು ಒದಗಿಸುವ ಕಿತ್ಲೆಗಂಡಿ ಪಂಪ್‌ಸೆಟ್‌ಗೆ ಮುಖ್ಯ ಮಾರ್ಗದಿಂದಲೇ ಸಂಪರ್ಕ ಪಡೆದಿದ್ದು, ಅದರಲ್ಲಿಯೂ ವಿದ್ಯುತ್ ಕಡಿತ ಮಾಡುವುದರಿಂದ ಪಟ್ಟಣದ ಜನತೆಗೆ ಕುಡಿಯುವ ನೀರನ್ನು ಒದಗಿಸಲು ಸಮಸ್ಯೆಯಾಗುತ್ತಿದೆ ಎಂದರು.

ಸಭೆಯ ಕೊನೆಯಲ್ಲಿ ಮಾತನಾಡಿದ ಮೆಸ್ಕಾಂ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್ ಅನಂತರಾಮ್, ತಾಲ್ಲೂಕಿಗೆ 4 ಮೆಗಾವಾಟ್ ವಿದ್ಯುತ್ ಬೇಡಿಕೆಯಿದ್ದು, ಪ್ರಸ್ತುತ  2 ಮೆಗಾವಾಟ್ ವಿದ್ಯುತ್ ನೀಡುತ್ತಿರುವುದರಿಂದ ಲೋಡ್ ಶೆಡ್ಡಿಂಗ್ ಅನಿವಾರ್ಯವಾಗಿದೆ. ಮೆಸ್ಕಾಂ ಇಲಾಕೆಯಲ್ಲಿ ಸಿಬ್ಬಂದಿ ಕೊರತೆಯಿರುವುದರಿಂದ ಸಮಸ್ಯೆ ಇನ್ನಷ್ಟು ಬಿಗಡಾಯಿಸಿದೆ. ಮೇಲಧಿಕಾರಿಗಳೊಂದಿಗೆ ಚರ್ಚಿಸಿ ಸಮಸ್ಯೆ ಬಗೆ ಹರಿಸುವುದಾಗಿ ಹೇಳಿದರು. ಮುಂದಿನ ಒಂದು ವಾರದೊಳಗೆ ಸಮಸ್ಯೆ ಬಗೆಹರಿಯದಿದ್ದರೆ ಮೆಸ್ಕಾಂ ಕಚೇರಿಯ ಮುಂಭಾಗದಲ್ಲಿ ಅಹೋರಾತ್ರಿ ಪ್ರತಿಭಟನೆ ನಡೆಸುವುದಾಗಿ ಸಭೆಯಲ್ಲಿ ಭಾಗವಹಿಸಿದ್ದ ಸಂಘಟನೆಗಳ ಪದಾಧಿಕಾರಿಗಳು ತಿಳಿಸಿದರು.

ಸಭೆಯಲ್ಲಿ ತಾ.ಪಂ. ಉಪಾಧ್ಯಕ್ಷೆ ಸುಮಾ ಸುರೇಶ್, ಮಾಜಿ ಅಧ್ಯಕ್ಷ ರಂಜನ್ ಅಜಿತ್ ಕುಮಾರ್, ಮೆಸಾಂ ಅಧಿಕಾರಿಗಳಾದ ಚಂದ್ರನಾಯ್ಕ, ಸತ್ತೀಶ್, ತಾಪಂ. ಸದಸ್ಯರಾದ ಅಣಜೂರು ಸುಬ್ರಾಯ, ಹೂವಮ್ಮ, ಅಜಾಲಯೂಬ್, ಕರವೇ ಅಧ್ಯಕ್ಷ ಪ್ರಸನ್ನ, ಹೊರಟ್ಟಿ ರಘು, ಬಾಲು, ಮುಸ್ಲಿಂ ಹಿತಾರಕ್ಷಣಾ ವೇದಿಕೆ ಅಧ್ಯಕ್ಷ ಕಿರುಗುಂದ ಅಬ್ಬಾಸ್, ಕಮಲಾಕ್ಷಮ್ಮ, ಪೂರ್ಣಿಮಾ ಮಲ್ಯ ಮತ್ತಿತರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.