ADVERTISEMENT

ಶಾಸಕ ಸಿ.ಟಿ. ರವಿ ದತ್ತ ಮಾಲೆಧಾರಣೆ

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2013, 8:40 IST
Last Updated 10 ಡಿಸೆಂಬರ್ 2013, 8:40 IST

ಚಿಕ್ಕಮಗಳೂರು: ಶಾಸಕ ಹಾಗೂ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ನಗರದ ಕಾಮಧೇನು ಗಣಪತಿ ದೇವಾಲಯದಲ್ಲಿ ಸೋಮವಾರ ದತ್ತಮಾಲಾ ಧಾರಣೆ ಮಾಡಿದರು.

ಬೆಳಿಗ್ಗೆ ಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ, ದೇವಾಲಯದ ಧರ್ಮಾಧಿಕಾರಿ ನಂಜುಂಡ ಸ್ವಾಮಿ ಅವರಿಂದ ದತ್ತ ಮಾಲೆ ಹಾಕಿಸಿಕೊಂಡು ವ್ರತ ಆಚರಣೆಯ ಸಂಕಲ್ಪ ಮಾಡಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿ ಕಳೆದ 16 ವರ್ಷಗಳ ಹಿಂದೆ ಆರಂಭವಾದ ದತ್ತಮಾಲಾ ಅಭಿಯಾನ ನಿರಂತರವಾಗಿ ನಡೆದುಕೊಂಡು ಬರುತ್ತಿದೆ. ದತ್ತಪೀಠಕ್ಕೆ ಸಂಬಂಧಿಸಿದಂತೆ ಈಗಾಗಲೇ ಸರ್ವೋಚ್ಛ ನ್ಯಾಯಾಲಯಲ್ಲಿ ವಿಚಾರಣೆ ನಡೆ ಯುತ್ತಿದ್ದು, ಕೆಳ ಹಂತದ ನ್ಯಾಯಾಲಯದ ತೀರ್ಪಿ ನಂತೆ ಸರ್ವೋಚ್ಛ ನ್ಯಾಯಾಲಯದಲ್ಲೂ ಹಿಂದೂಗಳ ಪರ ತೀರ್ಪು ಬರುವ ವಿಶ್ವಾಸವಿದೆ ಎಂದರು.

ಎಲ್ಲಾ ಮೂಲ ದಾಖಲೆಗಳಲ್ಲಿ ದತ್ತಪೀಠದ ಬಗ್ಗೆ ಸೂಕ್ತ ಉಲ್ಲೇಖ ಇದ್ದರೂ ಕೆಲವೊಂದು ಸಮಾಜ ಘಾತಕ ಶಕ್ತಿಗಳು ದತ್ತಪೀಠವನ್ನು ವಿವಾದವನ್ನಾಗಿ ಮಾಡುತ್ತಿರುವುದು ಖಂಡನೀಯ. ಮುಂದಿನ ಆರು ತಿಂಗಳೊಳಗೆ ಸರ್ವೋಚ್ಛ ನ್ಯಾಯಾಲಯ ತೀರ್ಪು ಪ್ರಕಟಿಸಲಿದ್ದು ಆ ತೀರ್ಪಿಗಾಗಿ ಕಾತರರಾಗಿದ್ದೇವೆ ಎಂದರು.

ದತ್ತ ಜಯಂತಿ ಕಾರ್ಯಕ್ರಮವನ್ನು ವಿಶ್ವಹಿಂದೂ ಪರಿಷತ್, ಬಜರಂಗ ದಳ ಮತ್ತು ದತ್ತಪೀಠ ಸಂವರ್ಧನಾ ಸಮಿತಿ ಮುಂದಾಳತ್ವ ವಹಿಸುತ್ತಿದ್ದು ಬಿಜೆಪಿ ಸಂಪೂರ್ಣ ಬೆಂಬಲ ನೀಡಲಿದೆ ಎಂದರು. ಪಕ್ಷದ ನಗರ ಘಟಕ ಅಧ್ಯಕ್ಷ ವರಸಿದ್ದಿ ವೇಣು ಗೋಪಾಲ್, ಸಂಘಟನಾ ಕಾರ್ಯದರ್ಶಿ ಸೀತಾರಾಮ ಭರಣ್ಯ ಮತ್ತಿತರರು ಮಾಲಾಧಾರಣೆ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.