ADVERTISEMENT

`ಶೇ 50ರಷ್ಟು ಸಾಲ ಕೃಷಿಗೆ ನೀಡಿ'

ತರೀಕೆರೆ: ಕ್ಷೇತ್ರ ಮಟ್ಟದ ಬ್ಯಾಂಕರ್ಸ್‌ ಸಭೆ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2012, 10:35 IST
Last Updated 12 ಡಿಸೆಂಬರ್ 2012, 10:35 IST

ತರೀಕೆರೆ: ಭಾರತೀಯ ರಿರ್ಸರ್ವ್ ಬ್ಯಾಂಕ್ ಮತ್ತು ಕೇಂದ್ರ ಸರ್ಕಾರ ಆದ್ಯತಾ ವಲಯಕ್ಕೆ ಹೆಚ್ಚಿನ ಸಾಲ ಸೌಲಭ್ಯವನ್ನು ಕಲ್ಪಿಸಿಕೊಡಲು ನಿರ್ಧರಿಸಿದ್ದು, ಗ್ರಾಮೀಣ ಮತ್ತು ರಾಷ್ಟ್ರೀಕೃತ ಬ್ಯಾಂಕುಗಳು ಈ ಕ್ಷೇತ್ರದಲ್ಲಿ ತೊಡಗಿಸಿಕೊಂಡವರಿಗೆ ಅಗತ್ಯ ಸಾಲವನ್ನು ನೀಡಲು ಮುಂದಾಗಬೇಕು ಎಂದು ನಬಾರ್ಡ್‌ನ ಜಿಲ್ಲಾ ಅಭಿವೃದ್ಧಿ ವ್ಯವಸ್ಥಾಪಕಿ ಅನುರಾಧ ನರಹರಿ ತಿಳಿಸಿದರು.

ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂ ಗಣದಲ್ಲಿ ಮಂಗಳವಾರ ನಡೆದ ಕ್ಷೇತ್ರ ಮಟ್ಟದ ಬ್ಯಾಂಕರ್ಸ್‌ ಸಭೆಯಲ್ಲಿ ಮಾತನಾಡಿದ ಅವರು, ರೈತರಿಗೆ ಕೇವಲ ಬೆಳೆಸಾಲ ನೀಡಿದರೆ ಸಾಲದು, ಆರ್‌ಬಿಐ ನಿರ್ದೇಶನದಂತೆ ಶೇ.50ರಷ್ಟು ಸಾಲವನ್ನು ಕೃಷಿ ಕ್ಷೇತ್ರಕ್ಕೆ ನೀಡಬೇಕು ಎಂದು ಬ್ಯಾಂಕ್‌ಗಳ ವ್ಯವಸ್ಥಾಪಕರಿಗೆ ಸೂಚನೆ ನೀಡಿದರು.

ಯಾವುದೇ ಬ್ಯಾಂಕುಗಳು ಸಾಲ ಮರುಸಂಗ್ರಹಣಕ್ಕೆ ಮುಂದಾಗದಿರುವುದು ವಿಷಾದದ ಸಂಗತಿಯಾಗಿದ್ದು, ವಿತರಣಾ ಕ್ಷೇತ್ರಕ್ಕೆ ನೀಡಿದಷ್ಟೇ ಪ್ರಾಮುಖ್ಯತೆಯನ್ನು ಈ ಕ್ಷೇತ್ರಕ್ಕೂ ಬ್ಯಾಂಕುಗಳು ನೀಡಬೇಕು. ಬ್ಯಾಂಕುಗಳು ಕ್ಷೇತ್ರದ ಪ್ರತಿ ಕುಟುಂಬಕ್ಕೂ ಶೂನ್ಯ ಬಂಡವಾಳದ ಉಳಿತಾಯ ಖಾತೆಯನ್ನು ತೆರೆಯುವಂತೆ ಸೂಚಿಸಿದ ಅವರು, ಇದುವರೆಗೂ ಸರ್ಕಾರದ ಯೋಜನೆಗಳ ಹಣಕಾಸು ವಹಿವಾಟನ್ನು ಸ್ಟೇಟ್ ಬ್ಯಾಂಕಿನ ವಿವಿಧ ಶಾಖೆಗಳು ನಿರ್ವಹಿಸಿತ್ತಿದ್ದು, ಇನ್ನು ಮುಂದೆ ಎಲ್ಲಾ ಬ್ಯಾಂಕುಗಳಿಗೆ ಇದರ ಕ್ಷೇತ್ರವನ್ನು ಆರ್‌ಬಿಐ ವಿಸ್ತರಿಸಿದೆ ಎಂದರು.

ಜಿಲ್ಲಾ ಲೀಡ್ ಬ್ಯಾಂಕ್ ವ್ಯವಸ್ಥಾಪಕ ಅರುಣ್ ಕುಲಕರ್ಣಿ ಮಾತನಾಡಿ, ಕೇಂದ್ರ ಸರ್ಕಾರ 2003 ರಲ್ಲಿ ನಡೆಸಿದ ಸರ್ವೆ ಪ್ರಕಾರ ಶೇ.50ರಷ್ಟು ರೈತರು ಮಾತ್ರ ಬ್ಯಾಂಕಿನ ಸೌಲಭ್ಯ ಪಡೆದುಕೊಳ್ಳುತ್ತಿದ್ದಾರೆ. ಆದರೆ ಬ್ಯಾಂಕ್‌ಗಳು ನಿಜವಾದ ರೈತರು ಎಷ್ಟು ಪ್ರಮಾಣದಲ್ಲಿ ಬ್ಯಾಂಕಿಂಗ್ ಸೌಲಭ್ಯ ಪಡೆದಿದ್ದಾರೆ ಎಂದು ಮಾಹಿತಿ ಸಂಗ್ರಹಿಸಿಲ್ಲ ಎಂದ ಅವರು ಕ್ಷೇತ್ರದ ರಾಷ್ಟ್ರೀಕೃತ ಬ್ಯಾಂಕುಗಳು ಸಾಧಿಸಿದ ಅಂಕಿ ಅಂಶವನ್ನು ಸಭೆಯ ಗಮನಕ್ಕೆ ತಂದರು.

ತರೀಕೆರೆ ಮತ್ತು ಕಡೂರು ತಾಲ್ಲೂಕು ಬ್ಯಾಂಕಿಂಗ್ ಕ್ಷೇತ್ರದಲ್ಲಿ ಅತ್ಯಂತ ಹಿಂದುಳಿದಿದ್ದು, ಜನರಲ್ಲಿ ಬ್ಯಾಂಕಿಂಗ್ ಮೂಲಕ ಆಗಬಹುದಾದ ಅನುಕೂಲತೆ ಗಳ ಕುರಿತು ಅರಿವು ಮೂಡಿಸಲು ಬೀದಿ ನಾಟಕ ಮತ್ತು ಯಕ್ಷಗಾನವನ್ನು ಹಮ್ಮಿಕೊಳ್ಳಲಾಗುವುದು. ಬ್ಯಾಂಕರ್ಸ್‌ ಸಭೆಗೆ ಸತತವಾಗಿ ಗೈರುಹಾಜರಾ ಗುತ್ತಿರುವ ವ್ಯವಸ್ಥಾಪಕರ ವಿರುದ್ಧ ಶಿಸ್ತುಕ್ರಮಕ್ಕೆ ಶಿಫಾರಸು ಮಾಡಲಾಗುವುದು ಎಂದು ಎಚ್ಚರಿಸಿದರು.

ಗ್ರಾಮೀಣ ಅಭ್ಯುದಯ ಆರ್ಥಿಕ ಸಾಕ್ಷರತೆ ಮತ್ತು ಸಾಲ ಸಮಾಲೋಚನ ಟ್ರಸ್ಟ್‌ನ ವ್ಯವಸ್ಥಾಪಕ ಆನಂದಾಚಾರ್ ಮಾತನಾಡಿ, ಸಾಮಾನ್ಯ ಜನರಿಗೆ ಬ್ಯಾಂಕಿ ಸೇವೆಗಳು ಮತ್ತು ಸರ್ಕಾರದ ವಿವಿಧ ಇಲಾ ಖೆಯ ಮೂಲಕ ಅವರಿಗೆ ತಲುಪ ಬಹುದಾದ ಸವ ಲತ್ತುಗಳನ್ನು ಕುರಿತು ಸಾಕ್ಷರತೆಯನ್ನು ಮೂಡಿಸ ಲಾಗುತ್ತಿದೆ ಎಂದರು.

ಸರ್ಕಾರದ ವಿವಿಧ ಇಲಾಖೆಗಳ ಡ್ರಾಯಿಂಗ್ ಅಧಿಕಾರಿಗಳು ಮತ್ತು ತಾಲ್ಲೂಕಿನ ಬ್ಯಾಂಕುಗಳ ವ್ಯವಸ್ಥಾಪಕರು ಆಯಾ ಬ್ಯಾಂಕಿನ ಮತ್ತಿ ಇಲಾಖೆಯಲ್ಲಿನ ಅಭಿವೃದ್ಧಿಯ ಅಂಕಿ ಅಂಶವನ್ನು ನೀಡಿದರು. ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕರಿ ಸಿ.ದೇವರಾಜಪ್ಪ, ಕೆನರಾ ಬ್ಯಾಂಕ್ ವ್ಯವಸ್ಥಾಪಕ ಸಿ.ಬಿ.ಶ್ಯಾಮ್‌ಸುಂದರ್, ಪಿಎಲ್‌ಡಿ ಬ್ಯಾಂಕ್ ವ್ಯವಸ್ಥಾಪಕ ಬಾಲಗಂಗಾಧರ್ ಶೆಟ್ಟಿ ಮತ್ತು ವಿವಿಧ ಇಲಾಖೆಯ ಅಧಿಕಾರಿಗಳು ಬ್ಯಾಂಕ್ ವ್ಯವಸ್ಥಾಪಕರು ಇದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.