ಕಡೂರು: ಮಾನವ ಹಣ, ಸಂಪತ್ತು ಗಳಿಸುವ ತವಕದಲ್ಲಿ ಆರೋಗ್ಯವನ್ನು ಕಳೆದುಕೊಳ್ಳುತ್ತಿದ್ದಾನೆ ಎಂದು ಕಡೂರು ಯಳನಾಡು ಮಠದ ಜ್ಞಾನಪ್ರಭು ಸಿದ್ಧರಾಮ ದೇಶಿಕೇಂದ್ರ ಸ್ವಾಮಿ ವಿಷಾದ ವ್ಯಕ್ತಪಡಿಸಿದರು.
ಶಾಂತಿವನ ಟ್ರಸ್ಟ್ ಧರ್ಮಸ್ಥಳ, ಕ್ಷೇತ್ರ ಗ್ರಾಮಾಭಿವೃದ್ಧಿ ಯೋಜನೆ ಕಡೂರು ಸಂಯುಕ್ತಾಶ್ರಯದ್ಲ್ಲಲಿ ಗುರುವಾರ ಶಾರದ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಿದ್ದ 20 ನೇ ಯೋಗ ಆರೋಗ್ಯ ಶಿಬಿರದ ಸಾನಿಧ್ಯ ವಹಿಸಿ ಮಾತನಾಡಿದರು.
ಆಧುನಿಕತೆಯ ಸೋಗಿಗೆ ಮೊರೆ ಹೋಗಿರುವ ಯುವಕರು ಐಟಿ, ಬಿಟಿ ಕ್ಷೇತ್ರದಲ್ಲಿ ರಾತ್ರಿ ಹಗಲೆನ್ನದೆ ಹಣ- ಅಧಿಕಾರ, ಸಂಪತ್ತು ಗಳಿಸಲು ದುಡಿಯುತ್ತಿದ್ದು, ಆರೋಗ್ಯದ ಕಡೆ ಗಮನ ಹರಿಸದೆ ಅಲ್ಪಾಯುಷ್ಯ ರಾಗುತ್ತಿದ್ದಾರೆ. ಇದು ಭಾರತೀಯ ಸಂಸ್ಕೃತಿಗೆ ಮಾರಕವಾಗಿದೆ ಎಂದರು.
ವೈಜ್ಞಾನಿಕ ಯುಗವು ಸ್ಪರ್ಧಾತ್ಮಕವಾಗಿ ಬೆಳೆಯುತ್ತಿದೆ. ಎಲ್ಲಾ ಕ್ಷೇತ್ರಗಳಲ್ಲೂ ಹೆಚ್ಚುತ್ತಿರುವ ಪೈಪೋಟಿಯನ್ನು ದಿನನಿತ್ಯವೂ ಅನುಭವಿಸುತ್ತಿದ್ದೇವೆ. ಒತ್ತಡ, ನಿರಾಶೆ, ಖಿನ್ನತೆ ಮಾನವನ ಮನಸ್ಸನ್ನು ತೀವ್ರವಾಗಿ ಕಾಡುತ್ತಿವೆ. ಮಾನಸಿಕ ನೆಮ್ಮದಿಗೆ ಯೋಗ ಮಾಡುವುದೊಂದೆ ಪರಿಹಾರವಾಗಿದೆ ಎಂದರು.
ಯೋಗವು ಭಾರತದ ಒಂದು ಪುರಾತನ, ಆಧ್ಯಾತ್ಮಿಕ ವಿಜ್ಞಾನ. ಋಷಮುನಿಗಳು ಧ್ಯಾನದ ಮೂಲಕ ಪಡೆದ ಸೂಕ್ಮ ಜ್ಞಾನವೇ ಯೋಗ. ಯೋಗವು ದೈಹಿಕ, ಮಾನಸಿಕ, ಭಾವನಾತ್ಮಕ, ಬೌದ್ಧಿಕ ಅಸಮತೋಲ ನವನ್ನು ನಿವಾರಿಸಿ ಸರ್ವತೋಮುಖ ಸಮತೋಲನವನ್ನು ತಂದು ಆರೋಗ್ಯ ವನ್ನು ಸ್ಥಿರಗೊಳಿಸುವ ವಿದ್ಯೆಯಾಗಿದೆ.
ಆದ್ದರಿಂದ ಯೋಗವನ್ನು ದಿನನಿತ್ಯ ಅಭ್ಯಸಿಸುವುದರಿಂದ ಶರೀರವನ್ನು ಆರೋಗ್ಯದಿಂದ ಇಡಲು ಸಾಧ್ಯ ಎಂದರು.
ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಕೆ.ಎಂ. ಕೆಂಪರಾಜು ಮಾತನಾಡಿ ನಗರ ಪಟ್ಟಣಗಳಿಗೆ ಮಾತ್ರ ಸೀಮಿತವಾಗಿದ್ದ ಯೋಗವು ಕ್ಷೇತ್ರದ ಸಹಕಾರದಿಂದ ಗ್ರಾಮೀಣ ಪ್ರದೇಶಗಳತ್ತ ಮುಖ ಮಾಡಿರುವುದು ಶ್ಲಾಘನೀಯ ಎಂದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲ್ಲೂಕು ಯೋಜನಾ ಧಿಕಾರಿ ದಿನೇಶ್, ಶೃಂಗೇರಿ ಶಾರದ ಮಠದ ಕಾರ್ಯನಿರ್ವಾಹಕ ಕೆ.ಸಿ. ದತ್ತಾತ್ರಿ, ಧರ್ಮಸ್ಥಳ ಶಾಂತಿವನ ಟ್ರಸ್ಟ್‌ನ ಯೋಗ ನೈತಿಕ ಶಿಕ್ಷಣದ ನಿರ್ದೇಶಕ ಶಶಿಕಾಂತ ಜೈನ್, ರಾಘವೇಂದ್ರ ಯೋಗ ಶಿಕ್ಷಣದ ಪ್ರಾಚಾರ್ಯ ಗಿರೀಶ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.