ADVERTISEMENT

ಸೀಗೋಡು: ಕಾಂಗ್ರೆಸ್ ಪ್ಲೆಕ್ಸ್ ವಿವಾದ

ಬಾಳೆಹೊನ್ನೂರು: ಎರಡು ಕಡೆಗಳಲ್ಲಿ ಕೈಕೊಟ್ಟ ಮತ ಯಂತ್ರ

​ಪ್ರಜಾವಾಣಿ ವಾರ್ತೆ
Published 13 ಮೇ 2018, 11:45 IST
Last Updated 13 ಮೇ 2018, 11:45 IST

ಬಾಳೆಹೊನ್ನೂರು: ಪಟ್ಟಣದ ಸುತ್ತಮುತ್ತ ಶನಿವಾರ ನಡೆದ ವಿಧಾನಸಭಾ ಚುನಾವಣೆ ವೇಳೆ ಎರಡು ಕಡೆಗಳಲ್ಲಿ ಮತ ಯಂತ್ರ ಕೈಕೊಟ್ಟಿದ್ದು, ಸೀಗೋಡಿನಲ್ಲಿ ಕಾಂಗ್ರೆಸ್ –ಬಿಜೆಪಿ ಕಾಯಕರ್ತರ ನಡುವೆ ವಾಗ್ವಾದ ಹೊರತುಪಡಿಸಿದರ ಉಳಿದಂತೆ ಶಾಂತಿಯುತವಾಗಿ ನೆರವೇರಿತು.

ಬೆಳಿಗ್ಗೆ ನಿಧಾನವಾಗಿ ಆರಂಭ ಗೊಂಡ ಮತದಾನ ಮಧ್ಯಾಹ್ನದ ವೇಳೆಗೆ ಚುರುಕಾಯಿತು. ಬಹುತೇಕ ಕಾಫಿ ತೋಟಗಳಲ್ಲಿ ಶನಿವಾರ ಬಟವಾಡೆ ಇದ್ದ ಹಿನ್ನೆಲೆಯಲ್ಲಿ ಮಧ್ಯಾಹ್ನದ ನಂತರ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಮಿಕರು ಮತಗಟ್ಟೆಗೆ ತೆರಳಿ ಮತದಾನ ಮಾಡಿದರು. ಬಹುತೇಕ ಮತಗಟ್ಟೆಗಳಲ್ಲಿ ವಿವಿಧ ಪಕ್ಷಗಳ ಮುಖಂಡರು ತಮ್ಮ ಪರವಿರುವ ಮತದಾರರನ್ನು ಮನೆಗಳಿಂದ ವಾಹನಗಳಲ್ಲಿ ಕರೆತಂದು ಮತ ಚಲಾವಣೆಯ ನಂತರ ವಾಪಸ್‌ ಮನೆಗೆ ಬಿಡುತ್ತಿದುದ್ದು ಕಂಡುಬಂತು.

ಮತಗಟ್ಟೆಯ ಸಮೀಪದಲ್ಲಿ ಎಲ್ಲ ಪಕ್ಷಗಳ ಕಾರ್ಯಕರ್ತರು ತಮ್ಮ ತಮ್ಮ ಪಕ್ಷಗಳಿಗೆ ಮತ ನೀಡುವಂತೆ ಕೊನೆ ಕ್ಷಣದಲ್ಲಿ ಯಾಚಿಸುತ್ತಿದ್ದ ದೃಶ್ಯ ಕಂಡು ಬಂತು.

ADVERTISEMENT

ಕೈ ಕೊಟ್ಟ ಮತಯಂತ್ರ: ಕೊಪ್ಪ ತಾಲ್ಲೂಕಿನ ಹೇರೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ವೀರಗಲ್ಲುಮಕ್ಕಿ ಮತಗಟ್ಟೆ ಹಾಗೂ ಬಾಳೆಹೊನ್ನೂರು ಸಮೀಪದ ಹಲಸೂರು ಮತಗಟ್ಟೆಗಳಲ್ಲಿ ಮತಯಂತ್ರ ಕೈ ಕೊಟ್ಟ ಪರಿಣಾಮ ಸುಮಾರು ಮುಕ್ಕಾಲು ಗಂಟೆ ನಂತರ ಮತದಾನ ಆರಂಭವಾಯಿತು. ಅಂಗವಿಕಲರಿಗೆ ಮತದಾನ ನಡೆಸಲು ಅನುಕೂಲವಾಗುವಂತೆ ಗಾಲಿಕುರ್ಚಿಗಳನ್ನು ಚುನಾವಣಾ ಆಯೋಗ ವ್ಯವಸ್ಥೆ ಕಲ್ಪಿಸಿತ್ತು.

ಸೀಗೋಡಿನಲ್ಲಿ ಫ್ಲೆಕ್ಸ್ ವಿವಾದ: ಹೇರೂರು ಸಮೀಪದ ಸೀಗೋಡಿನ ಮತಗಟ್ಟ ಬಳಿ ಕಾಂಗ್ರೆಸ್ ಅಭ್ಯರ್ಥಿ ಟಿ.ಡಿ.ರಾಜೇಗೌಡ ಅವರ ಪ್ಲೆಕ್ಸ್ ಹಾಕಿದ್ದು, ಎರಡೂ ಪಕ್ಷಗಳ ಕಾರ್ಯಕರ್ತರ ನಡುವಿನ ಘರ್ಷಣೆಗೆ ಕಾರಣವಾಯಿತು.

ಆ ಪ್ಲೆಕ್ಸ್ ಗಳನ್ನು ಸ್ಥಳದಿಂದ ತೆರವುಗೊಳಿಸುವಂತೆ ಬಿಜೆಪಿ ಜಿಲ್ಲಾ ಪಂಚಾಯಿತಿ ಸದಸ್ಯೆ ಸುಜಾತ ಕೃಷ್ಣಪ್ಪ ತಿಳಿಸಿದಾಗ ಕಾಂಗ್ರೆಸ್ ಕಾರ್ಯಕರ್ತರು ವಾಗ್ವಾದ ಮಾಡಲು ಮುಂದಾದರು. ಆ ವೇಳೆ ಕಾಂಗ್ರೆಸ್‌ನ ಸೀಗೋಡು ಸಮೀಪದ ಕಾರಗದ್ದೆಯ ಕೆ.ಪಿ.ಸಂದರ್ಶ ಹಾಗೂ ರಮೇಶ್ ಎಂಬುವವರು ಏರು ದ್ವನಿಯಲ್ಲಿ ನನ್ನನ್ನು ಪ್ರಶ್ನಿಸಿ, ನಿಂದಿಸಿ ಚಾಲಕನಿಗೆ ಥಳಿಸಲು ಯತ್ನಿಸಿದ ಹಿನ್ನೆಲೆಯಲ್ಲಿ ಅವರ ವಿರುದ್ಧ ಬಾಳೆಹೊನ್ನೂರು ಠಾಣೆಯಲ್ಲಿ ದೂರು ನೀಡುವುದಾಗಿ ಸುಜಾತ ಕೃಷ್ಣಪ್ಪ ತಿಳಿಸಿದ್ದಾರೆ.

ಹೇರೂರು, ಕುಂದೂರು ಮತಗಟ್ಟೆ ಬಳಿಯಲ್ಲಿ ಇದೇ ರೀತಿಯ ಫ್ಲೆಕ್ಸ್ ಗಳನ್ನು ಕಾಂಗ್ರೆಸ್ ಮುಖಂಡರು ಹಾಕಿದ್ದರು. ಅದನ್ನು ಕಂಡು ಬಿಜೆಪಿ ಮುಖಂಡರು ಆಕ್ಷೇಪಿಸಿದ ನಂತರ ಅವುಗಳನ್ನು ತೆರವುಗೊಳಿಸಲಾಯಿತು.

ನಕ್ಸಲ್ ಪೀಡಿತ ಪ್ರದೇಶದಲ್ಲಿ ಬಿಗಿ ಬಂದೋಬಸ್ತ್: ಕೊಪ್ಪ ತಾಲ್ಲೂಕಿನ ನಕ್ಸಲ್ ಪೀಡಿತ ಪ್ರದೇಶಗಳಾದ ಬೈರೇದೇವರು, ಮೆಣಸಿನಹಾಡ್ಯ, ಕಿತ್ಲಗುಳಿ ಸೇರಿದಂತೆ ಅತಿ ಸೂಕ್ಷ್ಮ ಮತಗಟ್ಟೆಗಳಲ್ಲಿ 8 ರಿಂದ 15 ಜನ ಬಿಎಸ್‌ಎಫ್ ಯೋಧರನ್ನು ನಿಯೋಜಿಸಲಾಗಿತ್ತು.

ಟಿ.ಡಿ.ರಾಜೇಗೌಡ, ಪ್ರವೀಣ್ ಖಾಂಡ್ಯ ಮತದಾನ: ಕಾಂಗ್ರೆಸ್ ಅಭ್ಯರ್ಥಿ ಟಿ.ಡಿ.ರಾಜೇಗೌಡ ಅವರು ಖಾಂಡ್ಯದಲ್ಲಿ ಬಾಸಾಪುರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತಮ್ಮ ಪತ್ನಿ ಪುಷ್ಪಾ ಅವರೊಂದಿಗೆ ಬಂದು ಮತ ಚಲಾಯಿಸಿದರು. ಪಕ್ಷೇತರ ಅಭ್ಯರ್ಥಿ ಪ್ರವೀಣ್ ಖಾಂಡ್ಯ ಅವರು ಕಡಬಗೆರೆಯ ಜ್ಯೋತಿರ್ ವಿಕಾಸ್ ಶಾಲೆಯಲ್ಲಿ ಮತ ಚಲಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.