ADVERTISEMENT

ಹುಲಿ ಯೋಜನೆ ಕೈಬಿಡಲು ಸಹಿ ಸಂಗ್ರಹ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2012, 7:50 IST
Last Updated 15 ಅಕ್ಟೋಬರ್ 2012, 7:50 IST

ಚಿಕ್ಕಮಗಳೂರು:  ಹುಲಿಯೋಜನೆ ಕೈಬಿಡುವಂತೆ ಒತ್ತಾಯಿಸಿ ನವೆಂಬರ್ 1ರಿಂದ 5ರವರೆಗೆ ಸಹಿ ಸಂಗ್ರಹಿಸಿ ರಾಷ್ಟ್ರಪತಿಗೆ ಕಳುಹಿಸಿಕೊಡಲಾಗುವುದು ಎಂದು ಅಖಿಲ ಭಾರತ ಕಿಸಾನ್ ಸಭಾದ ಜಿಲ್ಲಾ ಅಧ್ಯಕ್ಷ ಎನ್.ಆರ್.ಮಂಜುನಾಥ ತಿಳಿಸಿದರು.

ಯೋಜನೆ ವಿರೋಧಿಸಿ ಮೊದಲ ಹಂತವಾಗಿ ಗ್ರಾಮ ಪಂಚಾಯಿತಿಗಳು ಮೂಲಕ ನಿರ್ಣಯ ಕೈಗೊಂಡು ಸರ್ಕಾರಕ್ಕೆ ಕಳುಹಿಸಿಕೊಡಲಾಗಿದೆ. ಎರಡನೇ ಹಂತವಾಗಿ ಜೀಪ್ ರ‌್ಯಾಲಿ ನಡೆಸುವ ಮೂಲಕ ತಾಲ್ಲೂಕುಮಟ್ಟದ ಸಮಾವೇಶಗಳನ್ನು ನಡೆಸಲಾಗುವುದು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಚಿಕ್ಕಮಗಳೂರು ತಾಲ್ಲೂಕಿನ ಮಲ್ಲಂದೂರಿನಲ್ಲಿ ಹುಲಿ ಯೋಜನೆ ವ್ಯಾಪ್ತಿಗೆ ಒಳಪಡುವ  ಗ್ರಾಮಗಳ ಜನರ ಸಮಾವೇಶವನ್ನು ಮಲ್ಲಂದೂರಿನಲ್ಲಿ ನವೆಂಬರ್ 5ರಂದು  ನಡೆಸಲಾಗುವುದು ಎಂದರು.

ಹುಲಿ ಯೋಜನೆಯಿಂದ ಅರಣ್ಯ ಪ್ರದೇಶ ವ್ಯಾಪ್ತಿಗೆ ಒಳಪಡುವ ಜನರಿಗೆ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಕೇಂದ್ರ ಮತ್ತು ರಾಜ್ಯಸರ್ಕಾರಗಳ ಗಮನ ಸೆಳೆಯಲು, ಯೋಜನೆಯಿಂದ ಮುಂದಿನ ದಿನಗಳಲ್ಲಿ ಜನಜೀವನದ ಮೇಲೆ ಆಗುವ ದುಷ್ಪರಿಣಾಮಗಳ ಕುರಿತು ಜನರಲ್ಲಿ ಅರಿವು ಮೂಡಿ ಸಲು ಜನಾಂದೋಲನಾ ರೂಪಿಸಲಾಗುವುದು ಎಂದು ತಿಳಿಸಿದರು.

ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಹುಲಿಯೋಜನೆ ಕುರಿತು ದಿನಕ್ಕೊಂದು ಹೇಳಿಕೆ ನೀಡುತ್ತಿರುವುದನ್ನು ಗಮನಿ ಸಿದರೆ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ತಂತ್ರಗಾರಿಕೆ ಅನುಸರಿಸುತ್ತಿರುವುದು ಕಂಡುಬರುತ್ತಿದೆ ಎಂದು ಹೇಳಿದರು.

ಹದಿನೈದು ವರ್ಷಗಳಲ್ಲಿ ಭದ್ರಾ ವನ್ಯಜೀವಿ ವಿಭಾಗವನ್ನು ರಾಷ್ಟ್ರಮಟ್ಟದಲ್ಲಿ ಪ್ರಥಮ ಸ್ಥಾನಕ್ಕೆ ಏರಿಸಲು ಅಧಿಕಾರಿಗಳು ಯೋಜನೆ ರೂಪಿಸಿದಂತೆ ಕಂಡುಬರುತ್ತಿದೆ. ಅರಣ್ಯ ಪ್ರದೇಶದಲ್ಲಿ ವಾಸಿಸುವ ಜನರನ್ನು ಒಕ್ಕಲೆಬ್ಬಿಸುವುದಿಲ್ಲ ಎಂಬ ಹೇಳಿಕೆ ನೀಡುತ್ತಲೆ ಅವರು ಸ್ವಯಂ ಪ್ರೇರಿತವಾಗಿ ಹೊರಹೋಗುವ ಪರಿಸ್ಥಿತಿ ನಿರ್ಮಿಸುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.

ಕಿಸಾನ್ ಸಭಾ ಜಿಲ್ಲಾ ಕಾರ್ಯದರ್ಶಿ ಎಸ್.ವಿಜಯ ಕುಮಾರ್, ಸಿಪಿಐ ಜಿಲ್ಲಾ ಸಹಕಾರ್ಯದರ್ಶಿ ಜಿ.ರಘು, ಎಐವೈ ಎಫ್ ಜಿಲ್ಲಾ ಕಾರ್ಯದರ್ಶಿ ಹೆಡದಾಳ್‌ಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT