ADVERTISEMENT

‘ಎಸ್ಸೆಸ್ಸೆಲ್ಸಿ ಫಲಿತಾಂಶ ಹೆಚ್ಚಿಸಲು ಶ್ರಮಿಸಿ’

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2013, 8:49 IST
Last Updated 10 ಡಿಸೆಂಬರ್ 2013, 8:49 IST
ತರೀಕೆರೆ ತಾಲ್ಲೂಕು ಪಂಚಾಯಿತಿ  ಕೆಡಿಪಿ ಸಭೆ  ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಶಕುಂತಲ ನಾಗರಾಜ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು.
ತರೀಕೆರೆ ತಾಲ್ಲೂಕು ಪಂಚಾಯಿತಿ ಕೆಡಿಪಿ ಸಭೆ ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಶಕುಂತಲ ನಾಗರಾಜ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು.   

ತರೀಕೆರೆ (ಲಕ್ಕವಳ್ಳಿ):  ತಾಲ್ಲೂಕಿನ ಸರ್ಕಾರಿ ಶಾಲೆಗಳ ಎಸ್.ಎಸ್. ಎಲ್. ಸಿ. ಪರೀಕ್ಷಾ ಫಲಿತಾಂಶ ಉತ್ತಮ ಗೊಳಿಸಲು ಶಿಕ್ಷಣ ಇಲಾಖೆ ಅಧಿಕಾರಿ ಗಳು ಮುಂದಾಗಬೇಕು ಎಂದು ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಾಹಣಾಧಿಕಾರಿ ದೇವರಾಜ್ ತಿಳಿಸಿದರು.
ತಾಲ್ಲೂಕು ಪಂಚಾಯಿತಿ ಸಭಾಂಗ ಣದಲ್ಲಿ ಸೋಮವಾರ ನಡೆದ ಕೆಡಿಪಿ ಸಭೆಯಲ್ಲಿ ಅವರು ಮಾತನಾಡಿದರು.

ಸಾಮಾಜಿಕ ಅರಣ್ಯ ಯೋಜನೆ ಅಡಿಯಲ್ಲಿ ಸಸಿ ನೆಡುವ ಮತ್ತು ವಿತರಿಸುವ ಕಾರ್ಯಕ್ರಮಗಳು ಅನುಷ್ಟಾನಗೊಳ್ಳದೇ ಇರುವ ಬಗ್ಗೆ ದೂರುಗಳು ಬಂದಿದ್ದು, ಅವುಗಳ ಬಗ್ಗೆ ಕ್ರಮ ವಹಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು. ರಂಗೇನಹಳ್ಳಿ ಮತ್ತು ಲಕ್ಕವಳ್ಳಿ ಗ್ರಾಮದ ಅಕ್ಷರ ದಾಸೋಹದ ಅಡಿಯಲ್ಲಿ ನಿರ್ಮಿಸಿರುವ ಕಟ್ಟಡ ಕಾಮಗಾರಿಗಳು ಕಳಪೆಯಿಂದ ಕೂಡಿದ್ದು, ಈ ಬಗ್ಗೆ ಗುತ್ತಿಗೆದಾರರಿಗೆ, ಮುಖ್ಯೋಪಾ ಧ್ಯಾಯರಿಗೆ ಈ ಗಾಗಲೇ ನೋಟೀಸ್ ಜಾರಿ ಮಾಡಲಾಗಿದೆ ಎಂದು ಅಕ್ಷರ ದಾಸೋಹದ ಚೌಡಪ್ಪ ಸಭೆಗೆ ಮಾಹಿತಿ ಒದಗಿಸಿದರು.

ಭಕ್ತನ ಕಟ್ಟೆ ಶಾನುಬೋಗನಹಳ್ಳಿ ,ಬೇಗೂರು ಸಾಲೆಗಳ ಕಟ್ಟಡ ಕಾಮಗಾರಿಗೆ ತಾಲ್ಲೂಕು ಪಂಚಾಯಿತಿ ವತಿಯಿಂದ ಅನುದಾನ ನೀಡುವಂತೆ  ಬಿಆರ್ ಸಿ ತಿಮ್ಮಯ್ಯ ಪ್ರಸ್ತಾಪ ಸಲ್ಲಿಸಿದ ಸಂದರ್ಭದಲ್ಲಿ , ತಾಲ್ಲೂಕು ಪಂಚಾಯಿತಿ ವತಿಯಿಂದ ಶಾಲಾ ಕಟ್ಟಡಕ್ಕೆ ನೀಡಲು ಅವಕಾಶವಿಲ್ಲದ ಕಾರಣ ಇಲಾಖೆ ವತಿಯಿಂದಲೇ ಅನುದಾನಕ್ಕೆ ಮುಂದಾಗುವಂತೆ ತಿಳಿಸಲಾಯಿತು .

ದಾಸರ ಹಳ್ಳಿ , ಅನುವನಹಳ್ಳಿ,ಮುಗಳಿ ಇನ್ನಿತರ ಶಾಲೆಗಳಿಗೆ ಅಗತ್ಯ ಇರುವ ವಿದ್ಯುತ್ ಸಂಪರ್ಕ ಪಡೆಯಲು ಇಲಾಖೆಗೆ ಅಗತ್ಯ ಇರುವ ಶುಲ್ಕ ಪಾವತಿಸಿದ್ದರೂ, ವಿದ್ಯುತ್ ಸಂಪರ್ಕ ನೀಡುವಲ್ಲಿ ವಿಳಂಬ ಮಾಡುತ್ತಿರುವ ವಿಚಾರ ಪ್ರಸ್ತಾಪ ಗೊಂಡು, ತಕ್ಷಣವೇ ಕ್ರಮ ಕೈಗೊಂಡು ವಿದ್ಯುತ್ ಪೂರೈಸುವಂತೆ ಕೆಪಿಟಿಸಿಎಲ್ ಅಧಿಕಾರಿಗಳಿಗೆ ಅಧ್ಯಕ್ಷೆ  ಶಕುಂತಲ ನಾಗರಾಜ್ ತಾಕೀತು ಮಾಡಿದರು.

ತಾಲ್ಲೂಕಿನಲ್ಲಿ ಸುಮಾರು 246 ಜಾನುವಾರು ಕಾಲುಬಾಯಿ ಜ್ವರಕ್ಕೆ ತುತ್ತಾಗಿದ್ದು, ಆ ಬಗ್ಗೆ ಕ್ರಮ ಕೈಗೊಂಡ ಕಾರಣ ಹತೋಟಿಗೆ ಬಂದಿದೆ. ರೋಗದಿಂದ ಮೃತ ಪಟ್ಟ ಜಾನುವಾರು ಮಾಲೀಕರಿಗೆ ಈಗಾಗಲೇ ಪರಿಹಾರ ವಿತರಿಸಲಾಗಿದೆ ಎಂದು ಪಶುವೈದ್ಯಾಧಿಕಾರಿ ಕೊಟ್ರೇಶಪ್ಪ ಸಭೆಗೆ ಮಾಹಿತಿ ಒದಗಿಸಿದರು.

ಸ್ಥಾಯಿ ಸಮಿತಿ ಅಧ್ಯಕ್ಷ ಜಗದೀಶ್ ಮಾತನಾಡಿ, ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ಕುಡಿಯುವ ನೀರಿಗೆ ತೊಂದರೆ ಉಂಟಾಗಿದ್ದು, ಕೆಲವೆಡೆ ಪೈಪ್ ಲೈನ್ ಅಳವಡಿಸಿದ್ದರೂ ಮೋಟರ್ ವಗೈರೆ ಅಳವಡಿಸಿ ಕನೆಕ್ಷನ್ ನೀಡುವಲ್ಲಿ ವಿಳಂಬ ಆಗುತ್ತಿದ್ದು ಇದರಿಂದ ಜನ ಪರಿತಪಿಸುವಂತಾಗಿದೆ ಎಂದು ಸಭೆಯ ಗಮನ ಸೆಳೆದರು. ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷರು ಮತ್ತು ಇಓ ಕೂಡಲೇ ಈ ಬಗ್ಗೆ ಅಧಿಕಾರಿಗಳು ಕ್ರಮ ವಹಿಸುವಂತೆ ಸೂಚನೆ ನೀಡಿದರು.

ಸಭೆಯಲ್ಲಿ ವಿವಿಧ ಇಲಾಖೆಯ ಮುಖ್ಯಸ್ಥರು ಪಾಲ್ಗೊಂಡು ಇಲಾಖಾ ಮಾಹಿತಿ ಒದಗಿಸಿದರು. ಸಭೆಯಲ್ಲಿ ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷೆ ಗೌರಮ್ಮ ಇನ್ನಿತರರು ಸಭೆಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.