ADVERTISEMENT

‘ಕರಗಡ ಏತ ನೀರಾವರಿ: ಬೇಸಿಗೆಯೊಳಗೆ ಪೂರ್ಣಗೊಳಿಸಿ’

​ಪ್ರಜಾವಾಣಿ ವಾರ್ತೆ
Published 7 ಜನವರಿ 2014, 6:23 IST
Last Updated 7 ಜನವರಿ 2014, 6:23 IST

ಕಡೂರು: ಕರಗಡ ಏತ ನೀರಾವರಿ ಯೋಜನೆಯನ್ನು ಬರುವ ಬೇಸಿಗೆ ಆರಂಭವಾಗುವುದರ ಒಳಗೆ ಮುಕ್ತಾಯಗೊಳಿಸಿ ಕೆರೆಗಳಿಗೆ ನೀರು ಹರಿಸಬೇಕು ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿ ರೈತ ಜಾಗೃತಿ ಸಮಾವೇಶ ಸೋಮವಾರ ದೇವನೂರಿನಲ್ಲಿ ನಡೆಯಿತು.

ದೇವನೂರು, ಈಶ್ವರಹಳ್ಳಿ, ಕಳಸಾಪುರ, ಬೆಳವಾಡಿ ಭಾಗದ ರೈತರ ನೀರಿನ ದಾಹ ತಣಿಸುವಂತೆ ಆಗ್ರಹಿಸಿ ಸಭಿಕರು ಮತ್ತು ಅತಿಥಿಗಳು ನೀರು ಕುಡಿಯುವ ಮೂಲಕ ಸಾಂಕೇತಿಕವಾಗಿ ಕಾರ್ಯಕ್ರಮ ಉದ್ಘಾಟಿಸಿದ ಬಳಿಕ ಹಲವು ಮುಖಂಡರು ಏತ ನೀರಾವರಿ ಜಾರಿ ಕುರಿತು ಮಾತನಾಡಿದರು.

ರೈತ ಮುಖಂಡ ಗುರುಶಾಂತಪ್ಪ ಮಾತನಾಡಿ, ಕರಗಡ ಏತ ನೀರಾವರಿ ಯೋಜನೆ ಆರಂಭಗೊಂಡು ದಶಕಗಳು ಕಳೆದರೂ ಅಂತ್ಯ ಕಾಣುತ್ತಿಲ್ಲ, ಕರಗಡ ದೇವಿಕೆರೆಯಿಂದ ಮಾಳೇನಹಳ್ಳಿ ಪಿಕಪ್‌ ಚಾನೆಲ್‌ವರೆಗೆ ಕಾಮಗಾರಿ ಪೂರ್ಣಗೊಂಡಿಲ್ಲ, ಕಾಮಗಾರಿಯ ನಡುವೆ ಬಂದಿರುವ ಬಂಡೆ ತೆರವು ಕಾರ್ಯಾಚರಣೆ ನಡೆಸದೆ ಕಾಮಗಾರಿ ಮುಂದುವರೆಯುತ್ತಿಲ್ಲ, ನಾಲ್ಕು ಸಣ್ಣ ಮತ್ತು ಒಂದು ದೊಡ್ಡ ಸೇತುವೆ ನಿರ್ಮಾಣ ಆಗಬೇಕಿದೆ, ಕರಗಡ ದೇವಿಕೆರೆ ಫೀಡರ್‌ ಚಾನೆಲ್‌ನಿಂದ ಮುಗುಳವಳ್ಳಿ ಪಿಕಪ್‌ ಚಾನೆಲ್‌ಗೆ 18 ಕಿ.ಮೀ ದೂರ ಇದ್ದು ನಬಾರ್ಡ್‌ ವತಿಯಿಂದ 2.5ಕಿಮೀ ಚಾನೆಲ್‌ನ ಸಿಮೆಂಟ್‌ ಲೈನಿಂಗ್‌ ಕಾಮಗಾರಿ ಸೇರಿ ಒಟ್ಟು 5.2 ಕಿ.ಮೀ ಮಾತ್ರ ಸಿಮೆಂಟ್‌ ಲೈನಿಂಗ್‌ ಕಾಮಗಾರಿ ಮುಗಿದಿದೆ.

ಬಾಕಿ ಇರುವ ಸಿಮೆಂಟ್‌ ಲೈನಿಂಗ್‌ ಕಾಮಗಾರಿಗೇ ಇನ್ನೂ ರೂ.5–6 ಕೋಟಿ ಅಗತ್ಯವಿದೆ ಮತ್ತು ಸೇತುವೆ ಕಾಮಗಾರಿಗಳಿಗೇ ಹೆಚ್ಚಿನ ಹಣ ಅಗತ್ಯವಿದ್ದು, ಸರ್ಕಾರ ಈವರಗೆ ಯಾವುದೇ ಹಣ ಬಿಡುಗಡೆ ಮಾಡಿಲ್ಲ. ಸಣ್ಣ ನೀರಾವರಿ ಸಚಿವ ಶಿವರಾಜತಂಗಡಗಿಯವರು ಬೆಳವಾಡಿಗೆ ಭೇಟಿ ನೀಡಿದ ಸಂದರ್ಭದಲ್ಲಿ ವಾಪಾಸು ಹೋದ ತಕ್ಷಣ 4ಕೋಟಿ ರೂ ಬಿಡುಗಡೆ ಮಾಡುವುದಾಗಿಯೂ ಇನ್ನುಳಿದ 6ಕೋಟಿ ರೂಗಳನ್ನು ಹಂತ–ಹಂತವಾಗಿ ಬಿಡುಗಡೆ ಮಾಡುವುದಾಗಿಯೂ ತಿಳಿಸಿದ್ದರು.

ಆದರೆ ಇದು ಕಾರ್ಯಗತವಾಗಿಲ್ಲ. ಬರುವ ಬೇಸಗೆ ಒಳಗೆ ಕಾಮಗಾರಿ ಮುಗಿದರೆ ಬೆಳವಾಡಿ, ಕಳಸಾಪುರ, ದೇವನೂರು, ಈಶ್ವರಹಳ್ಳಿ ಭಾಗದ ಕೆರೆಗಳಿಗೆ ಮಳೆಗಾಲದಲ್ಲಿ ನೀರು ಹರಿಸಲು ಸಾಧ್ಯ. ಅದರಿಂದ ಈ ಕಾಮಗಾರಿಯನ್ನು ಏಪ್ರಿಲ್‌–ಮೇ 14ರ ಒಳಗೆ ಮುಗಿಸುವಂತೆ ಒಕ್ಕೊರಲಿನಿಂದ ಆಗ್ರಹಿಸುವುದಾಗಿ ತಿಳಿಸಿದರು.

ಮುಖಂಡ ರವೀಶ್‌ಬಸಪ್ಪ ಮಾತನಾಡಿ, ಕಳೆದ 30 ವರ್ಷಗಳಿಂದ ಯೋಜನೆಯು ಆಮೆಗತಿಯಲ್ಲಿ ಸಾಗುತ್ತಿದ್ದು ಜನಪ್ರತಿನಿಧಿಗಳ ನಿರ್ಲಕ್ಷ್ಯವೂ ಇದಕ್ಕೆ ಕಾರಣವಾಗಿದೆ, ಇದು ಈ ಭಾಗದ ರೈತರಿಗೆ ಮಾಡಿದ ಅನ್ಯಾಯ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಿಪಿಐ ಮುಖಂಡ ಬಿ.ಅಮ್ಜದ್‌ ಮಾತನಾಡಿ ರೈತರ ತೀವ್ರ ಹೋರಾಟದ ಬಳಿಕ ಎರಡು ಹಂತದಲ್ಲಿ ಈ ಯೋಜನೆ ಜಾರಿಗೆ ಸರ್ಕಾರ ಮುಂದಾಗಿದ್ದು ಮುಗುಳವಳ್ಳಿ ಪಿಕಪ್‌ ಚಾನೆಲ್‌ ಕಾಮಗಾರಿ ಕಳಪೆಯಾಗಿದೆ, ಈ ಕಾಮಗಾರಿಯನ್ನು ಸದೃಢಗೊಳಿಸಿ ನಿರ್ಮಿಸಬೇಕು. ಕರಗಡ ಯೋಜನೆ ನಮ್ಮ ಹಕ್ಕು ಎಂದು ಭಾವಿಸಿ ರೈತರು ಮತ್ತು ಗ್ರಾಮಸ್ಥರು ಈ ಯೋಜನೆ ಪೂರ್ಣಗೊಳ್ಳುವವರೆಗೆ ಇಲ್ಲಿ ನಡೆಯುವ ಯಾವುದೇ ಕಾರ್ಯಕ್ರಮಗಳಿಗೆ ಯಾವುದೇ ಜನಪ್ರತಿನಿಧಿಯನ್ನು ಆಹ್ವಾನಿಸದೆ ಪ್ರತಿಭಟಿಸಿದರೆ ಯೋಜನೆ ಶೀಘ್ರ ಜಾರಿಯಾಗಬಹುದು ಎಂದು ಸಲಹೆ ನೀಡಿದರು.

ದೇವನೂರು ಗ್ರಾಮಪಂಚಾಯಿತಿ ಅಧ್ಯಕ್ಷ ಎಸ್‌.ವಿ.ನಟರಾಜ್‌ ಮಾತನಾಡಿ, ಕಡೂರಿನಲ್ಲಿ ನಡೆಯುವ ಸಿದ್ದರಾಮೇಶ್ವರ ಜಯಂತಿಯಲ್ಲಿ ಪಾಲ್ಗೊಳ್ಳುವ ಮುಖ್ಯಮಂತ್ರಿಗಳನ್ನು ರೈತರೊಂದಿಗೆ ಭೇಟಿಯಾಗಿ ಈ ಕಾಮಗಾರಿಗೆ 5ಕೋಟಿ ರೂ ಹಣ ಬಿಡುಗಡೆ ಮಾಡುವಂತೆ ಒತ್ತಾಯಿಸಲಾಗುವುದು ಎಂದು ತಿಳಿಸಿದರು.

ಜಾಗೃತಿ ಸಮಾವೇಶದಲ್ಲಿ ಪಾಲ್ಗೊಂಡ ದೇವನೂರು ಸುತ್ತಮುತ್ತಲ ಗ್ರಾಮಗಳ ಜನರು ಸಂಚಾಲನಾ ಸಮಿತಿಯ ತೀರ್ಮಾನಕ್ಕೆ ಬದ್ಧರಾಗಿರುವುದಾಗಿ ತಿಳಿಸಿದರು. ಇದೇ 25ರಂದು ದೇವನೂರಿನಿಂದ ಚಿಕ್ಕಮಗಳೂರುವರೆಗೆ ಕಾಮಗಾರಿ ಶೀಘ್ರ ಮುಕ್ತಾಯಕ್ಕೆ ಒತ್ತಾಯಿಸಿ ಬೈಕ್‌ಜಾಥಾ ನಡೆಸಲಾಗುವುದು ಎಂದು ಪ್ರಕಟಿಸಲಾಯಿತು.

ಸಮಾವೇಶದಲ್ಲಿ ಕೊಪ್ಪಲು ಮಂಜುನಾಥ್‌, ಅಂಗಡಿ ಮಂಜಣ್ಣ, ಮಿಲಿಟರಿ ರವಿ, ಚಿಕ್ಕದೇವನೂರು ಅಶೋಕ್‌, ಕೆಂಚಪ್ಪ, ಗದ್ದೆಮನೆ ಶಿವಣ್ಣ ಚಿಕ್ಕದೇವನೂರು ಗ್ರಾ,ಪಂ ಅಧ್ಯಕ್ಷ ನಂಜುಂಡಪ್ಪ, ರಾಮಚಂದ್ರಪ್ಪ, ತಾ.ಪಂ. ಮಾಜಿ ಸದಸ್ಯ ಗಂಗಾಧರಪ್ಪ, ನಿಜಗುಣ ಸೇರಿದಂತೆ ನೂರಾರು ರೈತರು, ಗ್ರಾಮಸ್ಥರು ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.