ಕೊಪ್ಪ: ಕೊಪ್ಪ ಸಮೀಪದ ಕಲ್ಲು ಬಸ್ತಿಯಲ್ಲಿ ‘ಬಗ್ಗುಂಜಿ ರಾಣಿ’ಯ ಶಿಲಾಶಾಸನ ಪತ್ತೆಯಾಗಿದೆ. ಒಂದು ಅಡಿ ಅಗಲ, ಎರಡು ಅಡಿ ಉದ್ದವಿರುವ ಈ ಶಿಲಾ ಶಾಸನಗಳನ್ನು ಇತ್ತೀಚೆಗೆ ಕಲ್ಕೆರೆಯ ಶಿಕ್ಷಕ ನ. ಸುರೇಶ್ ಪತ್ತೆ ಹಚ್ಚಿದ್ದಾರೆ.
ಒಂದು ದೊಡ್ಡ ಬಂಡೆಯ ಮೇಲೆ ಕಟ್ಟಲಾಗಿರುವ ಸುಂದರ ಕಲ್ಲುಬಸದಿ, ಮುಂಭಾಗಲ್ಲಿರುವ ನಾಗರಕಲ್ಲುಗಳು, ಅದರ ಪಕ್ಕ ನೆಟ್ಟಿರುವ ಶಿಲಾಶಾಸನ ಎಲ್ಲವೂ ಗತ ಇತಿಹಾಸ ಸಾರುತ್ತಿವೆ.
ಕಳಸ-ಕಾರ್ಕಳ ನಾಡನ್ನು ಆಳಿದ ಭೈರರಸನ ತಂಗಿ ಕಾಳಲದೇವಿ ‘ಬಗ್ಗುಂಜಿ ರಾಣಿ’ ಎಂದೇ ಪ್ರಸಿದ್ಧಿ. ಕೊಪ್ಪ ತಾಲ್ಲೂಕು ಉತ್ತಮೇಶ್ವರ ಸಮೀಪದ ಬಗ್ಗುಂಜಿಯಲ್ಲಿ ಆಕೆ ಆಳ್ವಿಕೆ ನಡೆಸಿದ್ದು ಈಗ ಇತಿಹಾಸ. ‘ಕಡಿವಾಣಕ್ಕೆ ಕಳಸ ಪೇಟೆ, ಬಡಿವಾಣಕ್ಕೆ ಬಗ್ಗುಂಜಿ ಪೇಟೆ’ ಎಂಬ ಗಾದೆ ಮಾತು ಇಂದಿಗೂ ಪ್ರಚಲಿತದಲ್ಲಿದೆ.
ಒಂದು ಸಾವಿರ ವರ್ಷ ಪ್ರಾಚಿನ ವಾದುದು ಎಂದು ಹೇಳಲಾಗುವ ಕಲ್ಕೆರೆ ಸಮೀಪದ ಕಲ್ಲುಬಸ್ತಿಯಲ್ಲಿ ಜೈನ ಬಸದಿಯೊಂದಿದೆ. ಇದು ಕಾಳಲದೇವಿಯ ಬಗ್ಗುಂಜಿ ಸೀಮೆಯ ವ್ಯಾಪ್ತಿಗೆ ಒಳಪಟ್ಟಿತ್ತು. ಆಕೆ ತನ್ನ ಕುಲದೇವರಾದ ಕಲ್ಲುಬಸ್ತಿಯ ತೀರ್ಥಂಕರರ ಹೆಸರಿನಲ್ಲಿ ಬಸದಿಯ ಎಡಭಾಗದ ಫಲವತ್ತಾದ ಜಮೀನನ್ನು ದೇವರ ಪೂಜಾ ಕಾರ್ಯಗಳಿಗೆ 1530ರಲ್ಲಿ ದತ್ತಿ ನೀಡುತ್ತಾಳೆ. ಈ ಸಂಬಂಧ 39 ಸಾಲುಗಳ ಶಿಲಾ ಶಾಸನ ಬರೆಸಿ ಬಸದಿಯ ಮುಂಭಾಗ ನೆಡಿಸುತ್ತಾಳೆ. ಅದು ‘ಕೊಪ್ಪ ಶಾಸನ-2’ ಎಂದು ದಾಖಲಾಗಿದೆ.
ರಾಣಿ ಕಾಳಲದೇವಿ ತನ್ನ ದಾನಶಾಸನ ಅಚಂದ್ರಾರ್ಕ (ಸೂರ್ಯ ಚಂದ್ರರು ಇರುವವರೆಗೆ) ಜಾರಿಯಲ್ಲಿರ ಲೆಂಬ ಆಶಯದೊಂದಿಗೆ ಸೂರ್ಯ-ಚಂದ್ರರ ಚಿಹ್ನೆಗಳು ಹಾಗೂ ಜಿನ ದೇವತೆಯ ಶಿಲ್ಪವಿರುವ ಶಾಸನಗಳನ್ನು ದತ್ತಿಭೂಮಿಯ ಚತುಸ್ಸೀಮೆಯಲ್ಲಿ ನೆಡಿಸಿದ್ದಾಳೆ.
ಈ ರೀತಿ ನೆಟ್ಟ ನಾಲ್ಕು ಶಿಲಾ ಶಾಸನಗಳು ಕಲ್ಲುಬಸ್ತಿಯ ಗದ್ದೆಯ ಲ್ಲಿದ್ದು, ಊರ ಜನ ಅವುಗಳನ್ನು ‘ಲಿಂಗಮುದ್ರೆ’ ಕಲ್ಲುಗಳೆಂದು ವರ್ಷ ಕ್ಕೊಮ್ಮೆ ಪೂಜಿಸುತ್ತಾರೆ. ಎಲ್ಲಾ ನಾಲ್ಕೂ ಶಿಲಾ ಶಾಸನಗಳು ಸುಂದರವಾಗಿ ಸುಸ್ಥಿತಿಯಲ್ಲಿವೆ. ಮೊದಲ ಶಾಸನದ ಕೆಳ ಭಾಗದಲ್ಲಿ ಕೆಲವು ಶಿಲಾಲೇಖಗಳಿ ದ್ದವೆಂದು ಊರವರು ನೆನಪಿಸಿ ಕೊಳ್ಳುತ್ತಾರಾದರೂ ಈಗ ಅವು ಪೂರ್ಣವಾಗಿ ಸವೆದು ಹೋಗಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.