ADVERTISEMENT

ಚಿಕ್ಕಮಗಳೂರು | 'ಜಿಲ್ಲೆಯಲ್ಲಿ 116 ಡೆಂಗಿ ಪ್ರಕರಣ ಪತ್ತೆ'

ಡೆಂಗಿ ಜ್ವರದ ಬಗ್ಗೆ ಆತಂಕ, ನಿರ್ಲಕ್ಷ್ಯ ಬೇಡ, ಡಿಎಚ್ಒ

​ಪ್ರಜಾವಾಣಿ ವಾರ್ತೆ
Published 18 ಮೇ 2024, 14:22 IST
Last Updated 18 ಮೇ 2024, 14:22 IST
ಡಾ.ಅಶ್ವತ್ಥಬಾಬು
ಡಾ.ಅಶ್ವತ್ಥಬಾಬು   

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಈವೆರೆಗೆ 116 ಡೆಂಗಿ ಪ್ರಕರಣಗಳು ಪತ್ತೆಯಾಗಿದ್ದು, ಜನರು ಮುಂಜಾಗ್ರತಾ ಕ್ರಮ ವಹಿಸಬೇಕು. ಜ್ವರದ ಲಕ್ಷಣಗಳು ಕಂಡು ಬಂದಲ್ಲಿ ನಿರ್ಲಕ್ಷ್ಯ ವಹಿಸದೆ ವೈದ್ಯರಿಂದ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಅಶ್ವತ್ಥಬಾಬು ಹೇಳಿದರು.

ಡೆಂಗಿ, ಚಿಕುನ್ ಗುನ್ಯಾ ಹಾಗೂ ಮಲೇರಿಯಾ ಕಾಯಿಲೆ ನಿಯಂತ್ರಣ ಕುರಿತು ನಗರದ ಪ್ರೆಸ್‌ಕ್ಲಬ್‌ನಲ್ಲಿ ಶನಿವಾರ ನಡೆದ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಅವರು, ಚಿಕ್ಕಮಗಳೂರು ತಾಲ್ಲೂಕಿನಲ್ಲಿ 79, ತರೀಕೆರೆ 10, ಶೃಂಗೇರಿಯಲ್ಲಿ 12 ಡೆಂಗಿ ಜ್ವರದ ಪ್ರಕರಣ ಕಂಡು ಬಂದಿದ್ದು, ಕಡೂರು ತಾಲ್ಲೂಕಿನಲ್ಲಿ 6, ಮೂಡಿಗೆರೆ ಮತ್ತು ನರಸಿಂಹರಾಜಪುರದಲ್ಲಿ ತಲಾ 2 ಹಾಗೂ ಕೊಪ್ಪದಲ್ಲಿ 5 ಪ್ರಕರಣ ಪತ್ತೆಯಾಗಿವೆ ಎಂದು ವಿವರಿಸಿದರು.

ಡೆಂಗಿ ಜ್ವರ ವೈರಸ್‌ನಿಂದ ಬರುವ ಕಾಯಿಲೆ. ಸೋಂಕು ಇರುವ ಈಡಿಸ್‌ ಇಜಿಪೈ ಎಂಬ ಸೊಳ್ಳೆ ಕಚ್ಚುವಿಕೆಯಿಂದ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. ಸ್ವಚ್ಛ ನೀರಿನಲ್ಲಿ ಸಂತಾನೋತ್ಪತ್ತಿ ಮಾಡುವ ಈ ಸೊಳ್ಳೆಗಳು ಹಗಲು ಹೊತ್ತಿನಲ್ಲಿ ಮನುಷ್ಯರನ್ನು ಕಚ್ಚುತ್ತವೆ. ಇದರಿಂದ ಇದ್ದಕ್ಕಿದ್ದಂತೆ ತೀವ್ರ ಜ್ವರ, ತಲೆನೋವು, ಮಾಂಸಖಂಡ, ಕೀಲುಗಳಲ್ಲಿ ನೋವು, ಮೂಗು ಬಾಯಿ, ವಸಡುಗಳಿಂದ ರಕ್ತಸ್ರಾವ ಮೊದಲಾದ ಲಕ್ಷಣಗಳು ಕಂಡು ಬರುತ್ತವೆ. ಹಾಗಾಗಿ ನಿರ್ಲಕ್ಷ್ಯ ವಹಿಸದೆ ಕೂಡಲೇ ಹತ್ತಿರದ ಆಸ್ಪತ್ರೆಗೆ ತೆರಳಿ ತಪಾಸಣೆ ಮಾಡಿಸಿಕೊಳ್ಳುವಂತೆ ಸಲಹೆ ನೀಡಿದರು.

ADVERTISEMENT

ಡೆಂಗಿ ಜ್ವರಕ್ಕೆ ಯಾವುದೇ ನಿರ್ದಿಷ್ಟ ಲಸಿಕೆ ಇಲ್ಲ. ಆದ್ದರಿಂದ ಮನೆಗಳಲ್ಲಿ ಸೊಳ್ಳೆಗಳು ಬಾರದಂತೆ ನಿಯಂತ್ರಣ ವಹಿಸಬೇಕು. ಮನೆಯ ತೊಟ್ಟಿಗಳಲ್ಲಿ ದೀರ್ಘಕಾಲದವರೆಗೆ ನೀರು ಸಂಗ್ರಹ ಮಾಡದೆ ವಾರಕ್ಕೊಮ್ಮೆ ಖಾಲಿ ಮಾಡಿ, ಭರ್ತಿ ಮಾಡಬೇಕು. ಮನೆಯ ಮುಂದೆ ಎಳನೀರಿನ ಚಿಪ್ಪು, ಒಡೆದ ಬಾಟಲಿ ಮೊದಲಾದ ತ್ಯಾಜ್ಯ ಸಂಗ್ರಹವಾಗದಂತೆ ಹಾಗೂ ನೀರು ನಿಲ್ಲದಂತೆ ಎಚ್ಚರವಹಿಸಬೇಕು ಎಂದು ಹೇಳಿದರು.

ಪ್ರಕರಣ ಕಂಡು ಬಂದ ಹಳ್ಳಿಗಳಲ್ಲಿ ಲಾರ್ವಾ ಸಮೀಕ್ಷೆ ಕೈಗೊಳ್ಳಲಾಗಿದೆ. ಪ್ರಾಥಮಿಕ ಆರೋಗ್ಯ ಕೇಂದ್ರ, ತಾಲ್ಲೂಕು ಹಾಗೂ ಜಿಲ್ಲಾಮಟ್ಟದಲ್ಲಿ ಕ್ಷಿಪ್ರ ಕಾರ್ಯತಂಡ ರಚಿಸಿ ಜ್ವರದ ಲಕ್ಷಣಗಳು ಅಧಿಕವಿರುವ ಹಳ್ಳಿಗಳಿಗೆ ಭೇಟಿ ನೀಡಿ ಜಾಗೃತಿ ಹಾಗೂ ನಿಯಂತ್ರಣ ಕ್ರಮಕೈಗೊಳ್ಳಲಾಗಿದೆ ಎಂದರು.

ಫಿಜಿಷಿಯನ್‌ ಡಾ.ಪ್ಯಾಟ್ರಿಕ್‌ ಮಾತನಾಡಿ, ಜ್ವರ ಬಂದಾಗ ವೈದ್ಯರ ತಪಾಸಣೆಗೆ ವಿಳಂಬ ಮಾಡಬಾರದು. ಇದರಿಂದ ರಕ್ತಕಣಗಳ ಸಂಖ್ಯೆ ಕಡಿಮೆಯಾಗಿ ಸುಸ್ತು, ತಲೆನೋವು ಮೊದಲಾದ ಲಕ್ಷಣಗಳು ತೀವ್ರವಾಗಿ ಸಾವಿಗೂ ಕಾರಣವಾಗಬಹುದು. ಇದರಿಂದ ರೋಗಿಯ ತೀವ್ರ ನಿಗಾವಹಿಸುವುದು ಅಗತ್ಯವಿದೆ ಎಂದರು.

ಜಿಲ್ಲಾ ಶಸ್ತ್ರಚಿಕಿತ್ಸಕ ಮೋಹನ್‌ಕುಮಾರ್ ಮಾತನಾಡಿ, ಡೆಂಗಿ ಜ್ವರದ ಬಗ್ಗೆ ಯಾವುದೇ ಆತಂಕ ಬೇಡ. ಇದರಲ್ಲಿ ಸಾವಿನ ಪ್ರಮಾಣ ಕಡಿಮೆ ಆದರೆ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬೇಕು ಮುಖ್ಯ. ಈ ನಿಟ್ಟಿನಲ್ಲಿ ತಿಳಿವಳಿಕೆ ಮೂಡಿಸಲಾಗುವುದು ಎಂದರು, ಗೋಷ್ಠಿಯಲ್ಲಿ ವೈದ್ಯರಾದ ಯೋಗೇಶ್, ಡಾ.ಚಂದ್ರಶೇಖರ್, ಮಲೇರಿಯಾ ನಿಯಂತ್ರಣಾಧಿಕಾರಿ ಡಾ.ಬಾಲಕೃಷ್ಣ ಪಾಲ್ಗೊಂಡಿದ್ದರು.

ಜ್ವರ ಇರುವ ಬಹುತೇಕ ಮಂದಿ ಡೆಂಗಿ ಲಕ್ಷಣ ಹೊಂದಿರುತ್ತಾರೆ. ಆದರೆ ರಕ್ತದ ಮಾದರಿ ಪರೀಕ್ಷೆ ನಡೆಸಿದಾಗ ಬೇರೆ ಬೇರೆ ಸೋಂಕಿನ ಲಕ್ಷಣ ಕಂಡುಬರುತ್ತವೆ. ಮನೆಗಳಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಿ ಮುಂಜಾಗ್ರತಾ ಕ್ರಮ ಅನುಸರಿಸಿ.

- ಶ್ರೀಚರಣ್ ವೈದ್ಯಕೀಯ ಕಾಲೇಜಿನ ಮುಖ್ಯಸ್ಥ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.