ADVERTISEMENT

ದೇಹದಾನ ಮಾಡಿದ್ದ ಶುಶ್ರೂಷಕಿ ಗಾನವಿ ಕುಟುಂಬಕ್ಕೆ ₹ 3 ಲಕ್ಷ ಪರಿಹಾರ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2022, 7:39 IST
Last Updated 5 ನವೆಂಬರ್ 2022, 7:39 IST
ಪಿ.ಕೆ.ಗಾನವಿ
ಪಿ.ಕೆ.ಗಾನವಿ   

ನರಸಿಂಹರಾಜಪುರ: ಸೇವೆಯಲ್ಲಿರುವಾಗಲೇ ಮೆದುಳು ನಿಷ್ಕ್ರಿಯಗೊಂಡು ಮೃತಪಟ್ಟು ದೇಹದಾನ ಮಾಡಿದ್ದ ತಾಲ್ಲೂಕಿನ ಕಾನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಸಕೊಪ್ಪದ ಶುಶ್ರೂಷಕಿ ಪಿ.ಕೆ.ಗಾನವಿ ಅವರ ಕುಟುಂಬಕ್ಕೆ ಸರ್ಕಾರ ₹ 3 ಲಕ್ಷ ಪರಿಹಾರಧನ ಬಿಡುಗಡೆ ಮಾಡಿದೆ.

ಹೊಸಕೊಪ್ಪದ ಕೃಷ್ಣಮೂರ್ತಿ ಮತ್ತು ಲೀಲಾವತಿ ದಂಪತಿ ಪುತ್ರಿ ಪಿ.ಕೆ.ಗಾನವಿ ಅವರು ಶುಶ್ರೂಷಕಿ ತರಬೇತಿ ಪಡೆದು ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುವಾಗ ಕುಸಿದು ಬಿದ್ದು 2022ರ ಫೆಬ್ರುವರಿ 8ರಂದು ಮೃತಪಟ್ಟಿದ್ದರು. ಕುಟುಂಬದವರು ಅವರ ಅಂಗಾಗ ದಾನ ಮಾಡಿದ್ದರು. ಕುಟುಂಬಕ್ಕೆ ಆರ್ಥಿಕ ನೆರವು ನೀಡಬೇಕೆಂದು ಶಾಸಕ ಟಿ.ಡಿ.ರಾಜೇಗೌಡ ಮುಖ್ಯಮಂತ್ರಿಗೆ ಪತ್ರ ಬರೆದಿದ್ದರು. ಕೂಡಲೇ ₹ 3 ಲಕ್ಷ ಪರಿಹಾರ ನೀಡುವಂತೆ ಮುಖ್ಯಮಂತ್ರಿ ಆದೇಶಿಸಿದ್ದರೂ ಪರಿಹಾರ ನೀಡಿರಲಿಲ್ಲ.

ಈ ಬಗ್ಗೆ ‘ಪ್ರಜಾವಾಣಿ’ಯಲ್ಲಿ ಸೆ.28ರಂದು ‘ಗಾನವಿ ಕುಟುಂಬಕ್ಕೆ ಸಿಗದ ಪರಿಹಾರ’ ಎಂಬ ಶೀರ್ಷಿಕೆ ಯಡಿ ವರದಿ ಪ್ರಕಟಿಸಿತ್ತು. ಇದರಿಂದ ಎಚ್ಚತ್ತ ಜಿಲ್ಲಾಡಳಿತ ಕುಟುಂಬಕ್ಕೆ ಪರಿಹಾರ ಬಿಡುಗಡೆ ಮಾಡಿದೆ.

ADVERTISEMENT

ಗಾನವಿ ಕುಟುಂಬಕ್ಕೆ ಸರ್ಕಾರದಿಂದ ₹3 ಲಕ್ಷ ಪರಿಹಾರ ಬಿಡುಗಡೆಯಾಗಿದ್ದು, ಶನಿವಾರ ವಿತರಿಸಲಾಗುವುದು ಎಂದು ತಹಶೀಲ್ದಾರ್ ಎಸ್.ವಿಶ್ವನಾಥ್ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.